ಹುಬ್ಬಳ್ಳಿ: ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ- ಮುಂಬೈ ವಿಮಾನಯಾನ ಸೇವೆಯನ್ನು ಇಂಡಿಗೋ ವಿಮಾನಯಾನ ಸೋಮವಾರ ಪುನಾರಂಭಿಸಿತು. ಹವಾಮಾನ ವೈಫರೀತ್ಯ ಹಿನ್ನೆಲೆಯಲ್ಲಿ ಮುಂಬೈನಿಂದ ತಡವಾಗಿ ಹೊರಟ ಇಂಡಿಗೋ ವಿಮಾನ ಸಂಜೆ 6 ಗಂಟೆಗೆ ಹುಬ್ಬಳ್ಳಿ ತಲುಪಿತು. ಪುನಃ 6.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮುಂಬೈಗೆ ವಿಮಾನ ಹಾರಿತು.
ಪ್ರಯಾಣಿಕರಿಂದ ಅಭೂತಪೂರ್ವ ಸ್ಪಂದನೆ: ಪುನಾರಂಭಗೊಂಡ ಮೊದಲ ದಿನವೇ ಮುಂಬೈನಿಂದ ಹುಬ್ಬಳ್ಳಿಗೆ 163 ಪ್ರಯಾಣಿಕರು ಆಗಮಿಸಿದರೆ, ಹುಬ್ಬಳ್ಳಿಯಿಂದ ಮುಂಬೈಗೆ 111 ಜನರು ಪ್ರಯಾಣ ಬೆಳೆಸಿದರು. ಮುಂಬೈ - ಹುಬ್ಬಳ್ಳಿ ವಿಮಾನಯಾನ ಸೇವೆ ಪುನಾರಂಭಗೊಂಡ ದಿನವೇ ಪ್ರಯಾಣಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನ ಸ್ವಾಗತಕ್ಕಾಗಿ ನೀರಿನ ಫಿರಂಗಿ (ಕೆನಾನ್) ವ್ಯವಸ್ಥೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಡಿರಲಿಲ್ಲ. ಈ ಭಾಗದ ಬಹು ಜನರ ಬೇಡಿಕೆಗೆ ಅನುಗುಣವಾಗಿ ಆರಂಭಗೊಂಡಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯು ಫೆಬ್ರವರಿ 15 ರಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಿತ್ತು. ಇದೀಗ ಪುನಃ ಆರಂಭಿಸಿದೆ. ಇದರಿಂದ ಕಿತ್ತೂರು ಕರ್ನಾಟಕ ಭಾಗದಿಂದ ಮುಂಬೈಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಇತ್ತೀಚಿನ ಮಾಹಿತಿ, ಆ್ಯಂಟಿ ಹೈಜಾಕ್ ಭದ್ರತೆಗೆ ಪ್ರಾಯೋಗಿಕ ಚಾಲನೆ: ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬಹುತೇಕ ವಿಮಾನ ನಿಲ್ದಾಣಗಳಿಗೆ ಅನಾಮಧೇಯ ಬೆದರಿಕೆ ಮೇಲ್ ಬಂದಿರುವ ಹಿನ್ನೆಲೆ ಇಲ್ಲಿನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸದ್ಯ ವಿನೂತನ ರೀತಿಯ ಆ್ಯಂಟಿ ಹೈಜಾಕ್ ಭದ್ರತೆಯನ್ನು ಹುಬ್ಬಳ್ಳಿಯ ನಿಲ್ದಾಣದಲ್ಲಿ ಜಾರಿಗೊಳಿಸಲಾಗಿದೆ.
ಅಂತಾರಾಷ್ಟ್ರೀಯ ದರ್ಜೆಗೆ ಏರುತ್ತಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಹಿತಕಾಯಲು ಮತ್ತು ಭದ್ರತಾ ಕಾರ್ಯವನ್ನು ಮತ್ತಷ್ಟು ಬಲಪಡಿಸುವ ಸದುದ್ದೇಶದಿಂದ ಆ್ಯಂಟಿ ಹೈಜಾಕ್ ಭದ್ರತೆಯನ್ನು ಜಾರಿ ಮಾಡಲಾಗಿದೆ. ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ನೇತೃತ್ವದಲ್ಲಿ ಆ್ಯಂಟಿ ಹೈಜಾಕ್ ಟ್ರಯಲ್ ರನ್ ಮಾಡುವ ಮೂಲಕ ಅಣಕು ಪ್ರದರ್ಶನ ಮಾಡಲಾಯಿತು.
ವಿಮಾನ ನಿಲ್ದಾಣದ ಪ್ರತಿಯೊಂದು ಚಟುವಟಿಕೆಯ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಭದ್ರತೆ ದೃಷ್ಟಿಯಿಂದ ಆ್ಯಂಟಿ ಹೈಜಾಕ್ ಭದ್ರತೆಯನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: 16 ಎಸಿಎಫ್ಗಳಿಗೆ ನೇಮಕಾತಿ ಪತ್ರ ವಿತರಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ - ACF APPOINTMENT LETTERS