ಧಾರವಾಡ: ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಗುರುವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಹದಾಯಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಠರಾವು ಪಾಸ್ ಮಾಡಲಾಗಿದೆ.
ಇತ್ತೀಚೆಗೆ ರಾಜ್ಯ ಸರ್ಕಾರ ಈ ಯೋಜನೆ ಜಾರಿ ಸಂಬಂಧ ಕಳುಹಿಸಿದ್ದ ಪ್ರಸ್ತಾವನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ತಿರಸ್ಕರಿಸಿತ್ತು. ಆದರೆ ಅದೇ ಮಂಡಳಿ ಛತ್ತೀಸ್ಗಡ್-ಗೋವಾ ವಿದ್ಯುತ್ ಮಾರ್ಗಕ್ಕೆ ಒಪ್ಪಿಗೆ ನೀಡಿದೆ. ಇದರಿಂದ ಕರ್ನಾಟಕದ ಕಾಳಿ ಹುಲಿ ರಕ್ಷಿತಾರಣ್ಯ ಮತ್ತು ಭೀಮಗಡ ಅರಣ್ಯದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಇಂತಹ ಕಾರ್ಯಕ್ಕೆ ಒಪ್ಪಿಗೆ ನೀಡಿರುವ ವನ್ಯಜೀವಿ ಮಂಡಳಿ ಮಹದಾಯಿ ಯೋಜನೆ ಜಾರಿಗೆ ಒಪ್ಪಿಗೆ ಕೊಟ್ಟಿಲ್ಲ. ಇದನ್ನು ಖಂಡಿಸಿ ಕೆಡಿಪಿ ಸಭೆಯಲ್ಲಿ ಠರಾವು ಪಾಸ್ ಮಾಡುವ ಕುರಿತು ಶಾಸಕ ಎನ್.ಎಚ್.ಕೋನರೆಡ್ಡಿ ಅವರು ಸಚಿವ ಲಾಡ್ ಅವರ ಗಮನ ಸೆಳೆದರು. ಕೋನರೆಡ್ಡಿ ಪ್ರಸ್ತಾವದ ಠರಾವು ಪಾಸ್ ಮಾಡಲು ಸಚಿವರು ಒಪ್ಪಿಗೆ ನೀಡಿ ಅಂಗೀಕರಿಸಿದರು. ಇದಕ್ಕೂ ಮೊದಲು ಸಭೆಗೆ ಸರಿಯಾದ ಮಾಹಿತಿ ನೀಡದ ಅಧಿಕಾರಿಗಳಿಗೆ ಸಚಿವ ಲಾಡ್ ಕ್ಲಾಸ್ ತೆಗೆದುಕೊಂಡರು. ಪ್ರತಿ ದಿನದ ಡೈರಿ ನಿರ್ವಹಣೆ ಮತ್ತು ಡೇಟಾ ಸರಿಯಾಗಿ ನೀಡುವಂತೆ ಸೂಚಿಸಿದರು.
![ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಪೋಟೋಗೆ ಗೌರವ ಸಮರ್ಪಣೆ.](https://etvbharatimages.akamaized.net/etvbharat/prod-images/13-09-2024/22441463_manu23.jpg)
ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ 5 ರೂಪಾಯಿಗೆ ಊಟ, ಉಪಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿ ಎಂದು ಸಂತೋಷ್ ಲಾಡ್ ಇದೇ ವೇಳೆ ಹೇಳಿದ್ದಾರೆ.
ನಗರದ ಮಿನಿ ವಿಧಾನಸೌಧ ಬಳಿ ಇರುವ ಇಂದಿರಾ ಕ್ಯಾಂಟೀನ್‍ನಲ್ಲಿ ಗುರುವಾರ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
![ಇಂದಿರಾ ಕ್ಯಾಂಟೀನ್‍ನಲ್ಲಿ ಉಪಹಾರ ಸೇವಿಸಿದ ಸಚಿವ ಸಂತೋಷ್ ಲಾಡ್](https://etvbharatimages.akamaized.net/etvbharat/prod-images/13-09-2024/22441463_veena.jpg)
"ಇಂದಿರಾ ಕ್ಯಾಂಟೀನ್ ರಾಜ್ಯ ಸರ್ಕಾರದ ಮಹತ್ವದ ಕೊಡುಗೆ. ಜಿಲ್ಲೆಯ ಅವಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಎರಡು ಪ್ಯಾಕೇಜ್‍ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ. ಪ್ರತಿ ಕ್ಯಾಂಟೀನ್‍ದಿಂದ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ" ಎಂದು ಹೇಳಿದರು.
![ಇಂದಿರಾ ಕ್ಯಾಂಟೀನ್‍ನಲ್ಲಿ 5 ರೂಪಾಯಿ ನೀಡಿ ಟೋಕನ್ ಪಡೆದ ಸಚಿವರು.](https://etvbharatimages.akamaized.net/etvbharat/prod-images/13-09-2024/22441463_hgy.jpg)
ಬಳಿಕ ಸಚಿವರು 5 ರೂ. ಕೊಟ್ಟು ಟೋಕನ್ ಖರೀದಿಸಿ ಜೋಳದ ರೊಟ್ಟಿ ಊಟ ಸವಿದರು. ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.
![ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರ ಪರಿಶೀಲನೆ.](https://etvbharatimages.akamaized.net/etvbharat/prod-images/13-09-2024/22441463_manasa.jpg)
ಇದನ್ನೂ ಓದಿ: ಮಹದಾಯಿ ಯೋಜನೆಗೆ ಹಿನ್ನಡೆ ಉಂಟು ಮಾಡಿದ್ದು ಕಾಂಗ್ರೆಸ್: ಸಂಸದ ಬೊಮ್ಮಾಯಿ - Basavaraj Bommai