ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಮನೆ ಊಟಕ್ಕೆ ಕೋರಿದ್ದ ಮನವಿಯನ್ನು ತಿರಸ್ಕರಿಸಿರುವುದಾಗಿ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಮನೆ ಊಟ, ಹಾಸಿಗೆ ಮತ್ತು ಪುಸ್ತಕಗಳನ್ನು ಒದಗಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿ ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಬೆಳ್ಳಿಯಪ್ಪ ಅವರು, ದರ್ಶನ್ ಅವರ ಊಟ, ಹಾಸಿಗೆ ಪುಸ್ತಕಗಳನ್ನು ಕೊಡಿಸುವ ಸಂಬಂಧ ಸಲ್ಲಿಸಿದ್ದ ಮನವಿಯನ್ನು ಆಗಸ್ಟ್ 14ರಂದು ಪರಿಶೀಲನೆ ನಡೆಸಿ ತಿರಸ್ಕರಿಸಲಾಗಿದೆ. ಅದೇ ದಿನ ಈ ಅಂಶವನ್ನು ಅರ್ಜಿದಾರರ ಗಮನಕ್ಕೂ ತರಲಾಗಿದೆ ಎಂದು ವಿವರಿಸಿದರು.
ಇದಕ್ಕೆ ದರ್ಶನ್ ಪರ ಹಾಜರಿದ್ದ ವಕೀಲರಾದ ಸಂಜೀವಿನಿ ಪ್ರಭುಲಿಂಗ ನಾವದಗಿ, ಮನೆ ಊಟ ತಿರಸ್ಕರಿಸಿರುವ ಆದೇಶದ ಪ್ರತಿ ಈವರೆಗೂ ನಮಗೆ ತಲುಪಿಲ್ಲ. ಆದೇಶ ಅಧ್ಯಯನ ಮಾಡಿ ಅದಕ್ಕೆ ಪ್ರತಿಕ್ರಿಯೆ ಸಲ್ಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟಂಬರ್ 5ಕ್ಕೆ ಮುಂದೂಡಿತು.
ಈ ಹಿಂದೆ ನಡೆದ ವಿಚಾರಣೆ ವೇಳೆ ಕೋರ್ಟ್, ಆಗಸ್ಟ್ 20ರೊಳಗೆ ನಿರ್ಧಾರ ಕೈಗೊಳ್ಳಲು ಸೂಚನೆ ನೀಡಿತ್ತು. ಇಂದು ಅರ್ಜಿಯನ್ನು ವಿಚಾರಣೆಗೆ ಕೈಗೊಂಡಿತು. ನಿಜಕ್ಕೂ ಅರ್ಜಿದಾರ ದರ್ಶನ್ ಆರೋಗ್ಯ ಕ್ಷೀಣಿಸಿದ್ದರೆ ಜೈಲಿನಲ್ಲಿ ವೈದ್ಯರಿದ್ದಾರೆ. ಅವರು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಾರೆ. ಇಲ್ಲಿ ದರ್ಶನ್ ಅಥವಾ ಬೇರಾವುದೇ ವಿಚಾರಣಾಧೀನ ಕೈದಿಯ ವಿಚಾರವಲ್ಲ. ನಾವು ಇಲ್ಲಿ ಪ್ರತ್ಯೇಕಿಸಿ ಹೇಗೆ ನೋಡಬೇಕು? ಪ್ರತಿಯೊಬ್ಬ ವಿಚಾರಣಾಧೀನ ಕೈದಿಗಳೂ ಇಲ್ಲಿನ ಪ್ರಜೆಗಳೇ. ವಿಚಾರಣಾಧೀನ ಅಥವಾ ದೋಷಿ ಎಂದು ಘೋಷಿತವಾದ ಕೈದಿಗಳ ವಿಚಾರ ಆ ಕಡೆ ಇರಲಿ. ನಮ್ಮಲ್ಲಿ ಕೋಟ್ಯಂತರ ವಿಚಾರಣಾಧೀನ ಕೈದಿಗಳಿದ್ದು, ಅವರಿಗೆ ಉತ್ತಮ ಆಹಾರ ಪದ್ಧತಿ ಬೇಕಿದೆ ಎಂದು ಪೀಠ ತಿಳಿಸಿತು.
ರಾಜ್ಯ ಕಾರಾಗೃಹ ಕಾಯಿದೆ ಸೆಕ್ಷನ್ 30ರ ಅಡಿ ಆಹಾರ ನೀಡಬಹುದು ಎಂದಿದೆ. ಆದರೆ, ಅದನ್ನು ಕೈಪಿಡಿ ಮತ್ತು ನಿಯಂತ್ರಣದ ಮೂಲಕ ಜಾರಿಗೊಳಿಸಬಹುದು. ಸರ್ಕಾರ ದರ್ಶನ್ ಬಗ್ಗೆ ಮಾತ್ರ ಏಕೆ ಎಲ್ಲಾ ವಿಚಾರಣಾಧೀನ ಕೈದಿಗಳ ಬಗ್ಗೆ ಮಾನವೀಯವಾಗಿ ನಡೆಯಬೇಕು. ದರ್ಶನ್ ಕೋರಿಕೆಯನ್ನು ಸರ್ಕಾರ ಪರಿಗಣಿಸಬಹುದು ಎಂದು ಪೀಠ ತಿಳಿಸಿತು. ಅಲ್ಲದೆ, ಕೈದಿಗಳಲ್ಲಿ ಶ್ರೀಮಂತ, ಬಡವ, ಪ್ರಭಾವಿ, ರಾಜಕಾರಣಿ ಭಿನ್ನತೆ ಏಕೆ? ಇಲ್ಲಿ ಎಲ್ಲರೂ ವಿಚಾರಣಾಧೀನ ಕೈದಿಗಳು ಮಾತ್ರ ಎಂದು ತಿಳಿಸಿತು.
ಸರ್ಕಾರದ ಆದೇಶದಲ್ಲೇನಿದೆ?: ದರ್ಶನ್ ಅವರಿಗೆ ಪುಡ್ ಪಾಯಿಸನ್ ಸಮಸ್ಯೆ ಆಗಿಲ್ಲ. ಅವರಿಗೆ ಮೂಳೆ ಮತ್ತು ವೈರಲ್ ಜ್ವರಕ್ಕಾಗಿ ಚಿಕಿತ್ಸೆ ನೀಡಲಾಗಿದೆ. ಇದನ್ನು ಹೊರತುಪಡಿಸಿ ದೊಡ್ಡ ರೀತಿಯ ಸಮಸ್ಯೆಗಳು ಇಲ್ಲ. ವೈದ್ಯರು ಔಷಧಿ ಮತ್ತು ಪೌಷ್ಟಿಕ ಆಹಾರಕ್ಕೆ ತಿಳಿಸಿದ್ದಾರೆ. ಬೆನ್ನು ನೋವು ಮತ್ತು ಮುಂಗೈಗಳಿಗೆ ಚಿಕಿತ್ಸೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಾರಾಗೃಹ ಮತ್ತು ಸುಧಾರಣಾ ಸೇವೆ ಕಾಯ್ದೆ 2021ರ ಸೆಕ್ಷನ್ 322 ಪ್ರಕಾರ ಬಂಧಿಗಳಿಗೆ ವೈದ್ಯಕೀಯ ಕಾರಣಕ್ಕೆ ಆಹಾರ ನೀಡಬಹುದಾಗಿದೆ. ಅದು ವೈದ್ಯಾಧಿಕಾರಿಗಳ ವಿವೇಚನಾ ಅಧಿಕಾರದ ಮೇಲೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹೆಚ್ಚುವರಿ ಅಥವಾ ಸ್ವಲ್ಪ ಬದಲಾವಣೆ ಮಾಡಿ ನೀಡಬಹುದಾಗಿದೆ. ಸೆಕ್ಷನ್ 855ರ ಪ್ರಕಾರ ವಿಶೇಷ ಆಹಾರ ನೀಡಲು ವೈದ್ಯರ ಸಲಹೆ ಬೇಕಾಗುತ್ತದೆ. ಕೈದಿಗೆ ಅವಶ್ಯಕತೆ ಇದ್ದರೆ ವೈದ್ಯಾಧಿಕಾರಿಗಳ ಶಿಫಾರಸಿನ ಆಧಾರದಲ್ಲಿ ಆಸ್ಪತ್ರೆ ಆಹಾರದೊಂದಿಗೆ ಚಿಕಿತ್ಸೆ ವ್ಯವಸ್ಥೆಯೂ ಇರಲಿದೆ. ಸದ್ಯ ಜೈಲಿನಲ್ಲಿ ದರ್ಶನ್‌ಗೆ ನೀಡಿರುವ ಆಹಾರದಲ್ಲಿ ಯಾವುದೇ ಪುಡ್ ಪಾಯಿಸನ್ ಆಗಿಲ್ಲ. ಯಾವುದೇ ಪೌಷ್ಟಿಕಾಂಶದ ಕೊರತೆಯೂ ಇಲ್ಲ. ದರ್ಶನ್ ಉಳಿವಿಗಾಗಿ ಮನೆ ಊಟ ಅಗತ್ಯ ಎಂದು ವೈದ್ಯರು ಹೇಳಿಲ್ಲ.
ಜೈಲಿನ ವೈದ್ಯಾಧಿಕಾರಿಗಳು ಶಿಫಾರಸು ಮಾಡಿಲ್ಲ. ವೈದ್ಯಾಧಿಕಾರಿಗಳು ನೀಡಿರುವ ವರದಿಯಲ್ಲಿ ಪ್ರಸ್ತಾಪವಾಗಿಲ್ಲ. ದರ್ಶನ್‌ಗೆ ಹಾಲು, ಮೊಟ್ಟೆ, ಬ್ರೆಡ್, ವಿಟಮಿನ್ ಸಿ, ಕ್ಯಾಲ್ಸಿಯಂ ಒದಗಿಸಲಾಗುತ್ತಿದೆ. ಆದರೆ, ದರ್ಶನ್ ಕೊಲೆ ಆರೋಪಿ ಕಾರಣಕ್ಕೆ ಅವರ ಮನವಿ ತಿರಸ್ಕಾರ ಮಾಡಿರುವುದಾಗಿ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ನಿರ್ದೇಕರಾದ ಮಾಲಿನಿ ಕೃಷ್ಣಮೂರ್ತಿ ವಿವರಿಸಿದ್ದಾರೆ.