ದರ್ಶನ್ ಸೇರಿ ನಾಲ್ವರಿಗೆ ಎರಡು ದಿನ ಪೊಲೀಸ್ ಕಸ್ಟಡಿ ವಿಸ್ತರಣೆ: ಪವಿತ್ರಾ ಗೌಡ ಸೇರಿ ಉಳಿದವರು ಜೈಲಿಗೆ - RENUKASWAMY MURDER CASE - RENUKASWAMY MURDER CASE
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ನಾಲ್ಕು ಮಂದಿ ಆರೋಪಿಗಳಿಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಲಾಗಿದೆ. ಆದರೆ ಉಳಿದ ಆರೋಪಿಗಳಾದ ಪವಿತ್ರಾಗೌಡ, ಪವನ್, ನಂದೀಶ್, ರವಿ, ಅನುಕುಮಾರ್, ಜಗದೀಶ್, ನಾಗರಾಜ್, ಲಕ್ಷ್ಮಣ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.


Published : Jun 20, 2024, 7:13 PM IST
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಟ ದರ್ಶನ್ ಸೇರಿ ನಾಲ್ಕು ಮಂದಿಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಸ್ತರಿಸಲಾಗಿದೆ. ಇನ್ನುಳಿದವರನ್ನು ನ್ಯಾಯಾಂಗ ಬಂಧನ ವಿಧಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ನಟ ದರ್ಶನ್ ಹಾಗೂ ಸಹಚರರಾದ ಧನರಾಜ್, ಪ್ರದೋಷ್ ವಿನಯ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡರೆ, ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, ಪವನ್, ನಂದೀಶ್, ರವಿ, ಅನುಕುಮಾರ್, ಜಗದೀಶ್, ನಾಗರಾಜ್, ಲಕ್ಷ್ಮಣ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ. ಪ್ರಕರಣದಲ್ಲಿ ಬಂಧಿತರಾಗಿದ್ಧ ಕಾರ್ತಿಕ್, ನಿಖಿಲ್ ಹಾಗೂ ಕೇಶವಮೂರ್ತಿ ಹಾಗೂ ದೀಪಕ್ ಈಗಾಗಲೇ ಜೈಲಿನಲ್ಲಿದ್ದಾರೆ. ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ಇಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಸಹಚರರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ವಾದ ಆರಂಭಿಸಿದ ಸರ್ಕಾರಿ ಪರ ಅಭಿಯೋಜಕ ಪ್ರಸನ್ನಕುಮಾರ್, ಕೊಲೆ ಪ್ರಕರಣದಲ್ಲಿ ಕೆಲ ಆರೋಪಿಗಳ ವಿಚಾರಣೆ ಬಾಕಿಯಿದೆ. ಹತ್ಯೆಯಾದ ರೇಣುಕಾಸ್ವಾಮಿ ಮೊಬೈಲ್ ಇನ್ನೂ ಸಿಕ್ಕಿಲ್ಲ. ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಸ್ತರಿಸುವಂತೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ರಂಗನಾಥರೆಡ್ಡಿ, ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ಮುಗಿದಿದೆ. ಮಹಜರಿಗೆ ಒಳಪಡಿಸಿ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹೀಗಾಗಿ ಪೊಲೀಸ್ ಕಸ್ಟಡಿ ಪಡೆಯುವ ಅಗತ್ಯವಿಲ್ಲ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ದರ್ಶನ್ ಸೇರಿ ನಾಲ್ವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದರ್ಶನ್ ಪರ ವಕೀಲ ರಂಗನಾಥ ರೆಡ್ಡಿ' ಈ ಪ್ರಕರಣದಲ್ಲಿ ಪೊಲೀಸರು ಪ್ರತ್ಯಕ್ಷ ಸಾಕ್ಷಿಯಿದೆ ಎಂದು ವಾದ ಮಂಡಿಸಿದ್ದರು. ಇಷ್ಟು ದಿನ ಇಲ್ಲದ ಪ್ರತ್ಯಕ್ಷ ಸಾಕ್ಷಿ ಮುಂದೆ ಮಂಡಿಸಿದ್ದಾರೆ. ಪ್ರತ್ಯಕ್ಷ ಸಾಕ್ಷಿ ಇದೆ ಎನ್ನುವ ಕಾರಣ ಕೊಟ್ಟು ಕಸ್ಟಡಿಗೆ ಪಡೆದಿದ್ದಾರೆ. 30 ಲಕ್ಷ ಹಣ ರಿಕವರಿ ಮಾಡಿರುವ ಕಾರಣ ಕೊಟ್ಟು ಕಸ್ಟಡಿಗೆ ಕೇಳಿದ್ದರು. ಸದ್ಯ ಈ ಎರಡು ದಿನಗಳ ಕಸ್ಟಡಿ ಮುಗಿದ ಬಳಿಕ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಪರಪ್ಪನ ಅಗ್ರಹಾರ ಜೈಲು ಬಳಿ ಬಿಗಿ ಭದ್ರತೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಜೈಲಿಗೆ ಬರುವ ಹಿನ್ನೆಲೆ ಸುರಕ್ಷತೆಯ ದೃಷ್ಟಿಯಿಂದ ಜೈಲಿನ ಗೇಟ್ ಹಾಗೂ ಡಬಲ್ ರಸ್ತೆಯವರೆಗೂ ಹೆಚ್ಚಿನ ಭದ್ರತೆಯನ್ನು ಪೊಲೀಸರು ಒದಗಿಸಿದ್ದಾರೆ. ಜತೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಇದನ್ನೂ ಓದಿ: ಕೊಲೆ ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯ: ಮತ್ತೊಮ್ಮೆ ಜೈಲು ಸೇರ್ತಾರಾ ದರ್ಶನ್? - Darshan Police custody Ends