ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಆರೋಗ್ಯ ತಪಾಸಣೆಗಾಗಿ ಹೈಕೋರ್ಟ್ ಆರು ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿಯಲ್ಲಿ ಆರೋಗ್ಯ ತಪಾಸಣೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಎಂಟು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತು.
ಅಲ್ಲದೆ, ಆಮ್ ಆದ್ಮಿ ಪಕ್ಷದ ಮುಖಂಡ ಸತ್ಯೇಂದರ್ ಕುಮಾರ್ ಜೈನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಆರೋಪಿಗಳು ತಮ್ಮ ಖರ್ಚಿನಲ್ಲಿ ತಮ್ಮ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದೆ. ಹೀಗಾಗಿ, ತನ್ನ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನುಮತಿ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಬೇಕು ಎಂಬುದು ತಮ್ಮ ಅಭಿಪಾಯ ಎಂದು ಪೀಠ ಹೇಳಿದೆ.
ಜೊತೆಗೆ, ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನಲ್ಲಿ ಆರೋಗ್ಯದ ಹಕ್ಕೂ ಸೇರಿದೆ. ವ್ಯಕ್ತಿಯೊಬ್ಬರ ಆರೋಗ್ಯ ಪರಿಸ್ಥಿತಿಯು ಅವರ ಜೀವನದ ಅವಿಭಾಜ್ಯ ಅಂಗ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದರಲ್ಲಿ ವಿಳಂಬವಾಗುವುದು ಗಂಭೀರ ಪರಿಣಾಮಕ್ಕೆ ನಾಂದಿಯಾಗಬಹುದು. ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ (ಬಿಎಂಸಿಆರ್‌ಸಿ) ನರರೋಗ ವಿಭಾಗದ ಮುಖ್ಯಸ್ಥರು ದರ್ಶನ್‌ಗೆ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಆಗಬಹುದಾದ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ.
ಇದರಿಂದ ಮೇಲ್ನೋಟಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ. ಅಲ್ಲಿಯವರೆಗೆ ಫಿಸಿಯೋಥೆರಪಿ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಹಾಲಿ ಪ್ರಕರಣದಲ್ಲಿ ದರ್ಶನ್ ಬಂಧನವಾಗುವುದಕ್ಕೂ ಮುಂಚೆಯಿಂದಲೂ ಅವರು ಪ್ರಸಕ್ತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಂಧನದ ಬಳಿಕ ಅವರಿಗೆ ಸೂಕ್ತ ಚಿಕಿತ್ಸೆ ದೊರಯದಿರುವುದು ನೋವು ಉಲ್ಬಣಕ್ಕೆ ಕಾರಣವಾಗಿರಬಹುದು. ಅಕ್ಟೋಬರ್ 24ರ ಮತ್ತು ಅದಕ್ಕೂ ಹಿಂದಿನ ವೈದ್ಯಕೀಯ ವರದಿಗಳನ್ನು ನೋಡಿದಾಗ ದರ್ಶನ್‌ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ನ್ಯಾಯಾಲಯವು ದರ್ಶನ್ ಅವರ ವೈದ್ಯಕೀಯ ವರದಿ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಅವರನ್ನು ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು, ಬಿಎಂಸಿಆರ್‌ಸಿಯ ತಜ್ಞ ವೈದ್ಯರ ವರದಿಯನ್ನು ನಂಬದಿರಲು ಯಾವುದೇ ಸಕಾರಣಗಳು ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಷರತ್ತುಗಳು:
- ದರ್ಶನ್ ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು.
- ಬೆಂಗಳೂರಿನಲ್ಲಿ ತಮ್ಮ ಇಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್‌ಗೆ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಜೈಲಿನಿಂದ ಬಿಡುಗಡೆಯಾದ ತಕ್ಷಣ ಅವರು ಆಸ್ಪತ್ರೆಗೆ ದಾಖಲಾಗಿ, ವೈದ್ಯಕೀಯ ತಪಾಸಣೆಗೆ ಒಳಗಾಗಿ, ಯಾವಾಗ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಆ ನಂತರದ ಚಿಕಿತ್ಸೆ ಏನಾದರೂ ಇರಲಿದೆಯೇ ಎಂಬುದನ್ನು ಬಿಡುಗಡೆಯಾದ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.
- ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕುವುದು ಸಾಕ್ಷಿಗಳನ್ನು ತಿರುಚಬಾರದು.
- ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಆ ಚಿಕಿತ್ಸೆಯ ಮುನ್ನೋಟವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
- ಮಧ್ಯಂತರ ಜಾಮೀನು ಅವಧಿಯಲ್ಲಿ ತಮ್ಮ ಆರೋಗ್ಯದ ಸ್ಥಿತಿ ಸೇರಿದಂತೆ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಅಥವಾ ಸಾಮಾಜಿಕ ಮಾಧ್ಯಮಕ್ಕೆ ಹೇಳಿಕೆ ನೀಡಬಾರದು.
- ಮಧ್ಯಂತರ ಜಾಮೀನು ಅವಧಿ ಮುಗಿದ ತಕ್ಷಣ ವಿಚಾರಣಾಧೀನ ನ್ಯಾಯಾಲಯಕ್ಕೆ ದರ್ಶನ್ ಶರಣಾಗಬೇಕು. ಇದು ಹೈಕೋರ್ಟ್‌ನ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ.
- ದರ್ಶನ್ ಅವರು ತಮ್ಮ ಪಾಸ್‌ಪೋರ್ಟ್ ಅನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದು ಈ ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ.
- ಮಧ್ಯಂತರ ಜಾಮೀನು ಅವಧಿಯಲ್ಲಿ ದರ್ಶನ್ ಅವರು ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ.
ದರ್ಶನ್ ಪರ ವಕೀಲರು ಮಾಡಿದ್ದ ವಾದವೇನು?: ಅರ್ಜಿ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್, ನಟ ದರ್ಶನ್‌ಗೆ ಆರೋಗ್ಯ ತೀವ್ರ ಹದಗೆಟ್ಟಿದೆ. ಇದೀಗ ಶಸ್ತ್ರ ಚಿಕಿತ್ಸೆ ನಡೆಯದಿದ್ದರೇ ಪಾರ್ಶ್ವವಾಯುವಿಗೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮದ್ಯಂತರ ಜಾಮೀನು ನೀಡಬೇಕು ಎಂದು ಕೋರಿದ್ದರು.
ಅರ್ಜಿದಾರರು ರೆಗ್ಯೂಲರ್ ಜಾಮೀನು ಕೇಳುತ್ತಿಲ್ಲ. ಸಾಮಾನ್ಯ ಜಾಮೀನು ಕೋರಿರುವ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಪ್ರಸ್ತುತ ಆರೋಗ್ಯದ ದೃಷ್ಟಿಯಿಂದ ಮಧ್ಯಂತರ ಜಾಮೀನು ಕೋರುತ್ತಿದ್ದೇವೆ. ಈ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಕೊಲೆ ಆರೋಪಿಯಾಗಿದ್ದರೂ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವೂ ಜಾಮೀನು ಮಂಜೂರು ಮಾಡಬಹುದು. ಹೀಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಅರ್ಜಿದಾರರಿಗೆ ಈ ಹಿಂದೆಯೂ ಸಮಸ್ಯೆ ಇದ್ದು, ಇದೀಗ ಸಮಸ್ಯೆ ಉಲ್ಬಣಗೊಂಡಿದೆ. ಈ ರೀತಿಯ ಆರೋಗ್ಯ ಸಮಸ್ಯೆ ಇರುವವರು ಮುಂದೆ ಪಾಶ್ವವಾಯು ಇಲ್ಲವೇ ನರ ಸಮಸ್ಯೆಗಳಿಗೆ ಗುರಿಯಾಗಬಹುದಾಗಿದ್ದು, ಅದನ್ನು ತಪ್ಪಿಸುವುದಕ್ಕೆ ಶಸ್ತ್ರಚಿಕಿತ್ಸೆ ಅತ್ಯಗತ್ಯ ಎಂದು ತಿಳಿಸಿದರು.
ಸರ್ಕಾರಿ ವಕೀಲರು ವಾದ ಏನಾಗಿತ್ತು?: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಪಿ.ಪ್ರಸನ್ನಕುಮಾರ್, ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮತ್ತೊಂದು ಪರೀಕ್ಷೆ ಸಂಬಂಧ ಅರ್ಜಿದಾರರನ್ನು ಬೆಂಗಳೂರಿಗೆ ಕರೆತಂದು, ನಗರದ ವಿಕ್ಟೋರಿಯಾ ಇಲ್ಲವೇ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಗೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪೀಠ, ಯಾವುದೇ ವ್ಯಕ್ತಿ ಒಮ್ಮೆ ಆರೋಗ್ಯ ಕಳೆದುಕೊಂಡರೆ ಅದನ್ನು ಜೀವನದಲ್ಲಿ ಸರಿಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆರೋಗ್ಯ ಮತ್ತಷ್ಟು ಕೆಡಬೇಕು ಎಂಬುದಾಗಿ ಪ್ರಾಸಿಕ್ಯೂಷನ್ ನಿರೀಕ್ಷೆ ಮಾಡುವುದೇ ಎಂದು ಪ್ರಶ್ನಿಸಿತ್ತು.
ಪ್ರಕರಣದ ಹಿನ್ನೆಲೆ: ಜೂನ್ 9ರಂದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯ್ಕ್ ಕೇಶವಮೂರ್ತಿ ಕಾಮಾಕ್ಷಿಪಾಳ್ಯ ಠಾಣೆಗೆ ಹಾಜರಾಗಿ ಕೊಲೆ ಕುರಿತು ತಪ್ಪೊಪ್ಪಿಕೊಂಡಿದ್ದರು. ವಿಚಾರಣೆ ವೇಳೆ ಇವರು, ನಟ ದರ್ಶನ್ ಮತ್ತು ಪವಿತ್ರಾ ಗೌಡ ಹೆಸರು ಪ್ರಸ್ತಾಪ ಮಾಡಿದ್ದರಿಂದ ಜೂನ್ 11ರಂದು ಪೊಲೀಸರು ಇವರನ್ನು ಬಂಧಿಸಿದ್ದರು. ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿರುವ ಬಗ್ಗೆಯೂ ತನಿಖೆ ವೇಳೆ ತಿಳಿದು ಬಂದಿತ್ತು.
ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಅವರಿಗೆ ವಿಶೇಷ ಸೌಲಭ್ಯ ನೀಡಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಜೊತೆಗೆ ಪವಿತ್ರಾ ಗೌಡ ಮತ್ತು ಕೆಲವರನ್ನು ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಂಡು, ಇನ್ನಿತರ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ; ಆರೋಗ್ಯ ಕುರಿತು ಮಾಹಿತಿ ಕೇಳಿದ ಹೈಕೋರ್ಟ್