ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಮಂದಿ ಆರೋಪಿಗಳಿಗೆ ಶತಾಯಗತಾಯ ಶಿಕ್ಷೆ ಕೊಡಿಸಲು ಪಣ ತೊಟ್ಟಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ನಟ ಚಿಕ್ಕಣ್ಣ ಸೇರಿದಂತೆ ಹಲವ ಸಾಕ್ಷಿದಾರರ ಹೇಳಿಕೆಯನ್ನು ಸಿಆರ್ಪಿಸಿ ಸೆಕ್ಷನ್ 164ನಡಿ ನ್ಯಾಯಾಧೀಶರ ಮುಂದೆ ಕೊಡಿಸಿದ್ದಾರೆ.
ನಗರದ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಸ್ಯ ನಟ ಚಿಕ್ಕಣ್ಣ ಅವರು ಹೇಳಿಕೆ ನೀಡಿದರು. ಪೊಲೀಸ್ ವಿಚಾರಣೆಯಲ್ಲಿ ನೀಡಿದ ಹೇಳಿಕೆಯನ್ನು ಕೋರ್ಟ್ನಲ್ಲಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆಯಾಗುವ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಆರೋಪಿ ರಾಘವೇಂದ್ರ ಹಾಗೂ ಆತನ ಸಹಚರರು ಪಟ್ಟಣಗೆರೆ ಶೆಡ್ ಕರೆದುಕೊಂಡು ಬಂದಿದ್ದರು. ಅದೇ ದಿನ ಆರ್.ಆರ್.ನಗರದಲ್ಲಿರುವ ಸ್ಟೋನಿ ಬ್ರೂಕ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ವಿನಯ್, ದರ್ಶನ್, ಪ್ರದೂಷ್, ನಾಗರಾಜ್ ಸೇರಿ ಹಲವರು ಪಾರ್ಟಿ ಮಾಡಿದ್ದರು. ಈ ಪಾರ್ಟಿಗೆ ನಟ ಚಿಕ್ಕಣ ಸಹ ಭಾಗಿಯಾಗಿದ್ದರು. ಈ ಮಧ್ಯೆ ಪಟ್ಟಣಗೆರೆ ಶೆಡ್ನಲ್ಲಿದ್ದ ಮತ್ತೊಂದು ಆರೋಪಿಗಳು ಕರೆ ಮಾಡಿ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದರು. ಕರೆ ಬಂದ ಕೆಲ ಹೊತ್ತಿನಲ್ಲಿ ರೆಸ್ಟೋರೆಂಟ್ನಿಂದ ಶೆಡ್ಗೆ ಹೋಗಿ ಹತ್ಯೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರೆಸ್ಟೋರೆಂಟ್ಗೆ ಹೋಗಿ ಸಿಸಿಟಿವಿ ಮತ್ತು ಡಿವಿಆರ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗಿಯಾಗಿರುವುದು ಸ್ಪಷ್ಟವಾಗಿತ್ತು. ಪೊಲೀಸರ ವಿಚಾರಣೆ ವೇಳೆ, ರೆಸ್ಟೋರೆಂಟ್ ಪಾರ್ಟಿ ಆಯೋಜನೆ ಹಿನ್ನೆಲೆ ಊಟಕ್ಕೆ ಕರೆದಿದ್ದರು. ನಾನು ಹೋಗಿ ಊಟ ಮಾಡಿಕೊಂಡು ಬಂದಿದ್ದೇನೆ. ರೇಣುಕಸ್ವಾಮಿ ಹತ್ಯೆಗೂ ತನಗೂ ಸಂಬಂಧವಿಲ್ಲ ಎಂದು ಈ ಹಿಂದೆ ಚಿಕ್ಕಣ್ಣ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ವಿಚಾರಣೆ ಮುಗಿಸಿ ಹೊರಬಂದ ನಟ ಚಿಕ್ಕಣ್ಣ ಹೇಳಿದ್ದೇನು? - Chikkanna about trial