ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್ ಅನ್ನು ಸಿಬಿಐಗೆ ವಹಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸುವುದರಿಂದ ನ್ಯಾಯ ಸಿಗುವ ಭರವಸೆ ಇದೆ. ಪ್ರಕರಣದಲ್ಲಿ ಯಾರೇ ಇದ್ದರೂ ತಕ್ಕ ಶಿಕ್ಷೆ ಆಗಲೇಬೇಕು ಎಂದು ರೇಣುಕಾಸ್ವಾಮಿ ಅವರ ಚಿಕ್ಕಪ್ಪ ಷಡಕ್ಷರಯ್ಯ ಒತ್ತಾಯಿಸಿದ್ದಾರೆ.
ಮೃತದೇಹದ ಅಂತ್ಯಕ್ರಿಯೆಯನ್ನು ಇಂದೇ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದೇವೆ. ಹಿಂದೂ ರುದ್ರಭೂಮಿಯಲ್ಲಿ ವೀರಶೈವ ವಿಧಿವಿಧಾನದ ಪ್ರಕಾರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿಸಿದರು.
ಈ ತಿಂಗಳು 26ಕ್ಕೆ ರೇಣುಕಾಸ್ವಾಮಿಗೆ ಮದುವೆಯಾಗಿ ಒಂದು ವರ್ಷ. ಪತ್ನಿ ಮೂರು ತಿಂಗಳ ಗರ್ಭಿಣಿ. ಯಾವುದೇ ಕುಟುಂಬಕ್ಕೂ ಈ ರೀತಿ ಅನ್ಯಾಯ ಆಗಬಾರದು. ಎಷ್ಟೇ ಪ್ರಭಾವಿ ಇದ್ದರೂ ತಕ್ಕ ಶಿಕ್ಷೆಯಾಗಲಿ. ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದರು.
ಜಂಗಮ ಸಮಾಜದ ಖಜಾನೆಯ ಜವಾಬ್ದಾರಿಯನ್ನು ಅವರ ತಂದೆ ವಹಿಸಿಕೊಂಡಿದ್ದರು. ಈ ಘಟನೆಯಿಂದ ಇದೀಗ ಅವರ ಕುಟುಂಬಕ್ಕೆ ಆಘಾತವಾಗಿದೆ ಎಂದು ತಿಳಿಸಿದರು. ಮುಂದುವರೆದು, ಅಶ್ಲೀಲ ಸಂದೇಶ ಕಳುಹಿಸಿದ್ದರೆ ಕರೆದು ಬುದ್ದಿ ಹೇಳಬಹುದಿತ್ತು. ಇಲ್ಲದಿದ್ದರೆ ಪೋಷಕರನ್ನು ಕರೆಸಿ ವಿಚಾರ ಹೇಳಬಹುದಿತ್ತು ಎಂದು ಹೇಳಿದರು.
ರೇಣುಕಾಸ್ವಾಮಿ ಮನೆಗೆ ಆಗಮಿಸಿದ ಭಾವನಾ ಬೆಳಗೆರೆ: ರೇಣುಕಾಸ್ವಾಮಿ ಮನೆಗೆ ಆಗಮಿಸಿದ ಭಾವನಾ ಬೆಳಗೆರೆ, ಪತ್ನಿ ಸಹನಾ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಈ ಪ್ರಕರಣದಲ್ಲಿ ನಟ ದರ್ಶನ್ ಇದ್ದರೆ ಅವರಿಗೆ ಶಿಕ್ಷೆ ಆಗಲೇ ಬೇಕು ಎಂದರು.
ಇದನ್ನೂ ಓದಿ: ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಆರೋಪಿಗಳ ಬಂಧನ: ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ - Actor darshan arrest