ಬೆಂಗಳೂರು: "ಪಿಪಿಇ ಕಿಟ್ ಖರೀದಿ ಅಕ್ರಮ ಕುರಿತು ನ್ಯಾ. ಮೈಕೆಲ್ ಡಿ'ಕುನ್ಹಾ ಆಯೋಗದ ವರದಿಯು ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಿದೆ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಪಿಪಿಇ ಕಿಟ್ ಖರೀದಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, "ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ಅವರ ಆಯೋಗ ರಚನೆ ಮಾಡಿದ್ದೆವು. ಅವರು ಸಾವಿರ ಪುಟಗಳ ವರದಿ ಕೊಟ್ಟಿದ್ದರು. ಆಯೋಗವು ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಿದೆ. ನಮ್ಮ ಸಂಪುಟ ಉಪಸಮಿತಿ ಪರಿಶೀಲನೆ ಮಾಡುತ್ತಿದೆ. ಇದು ವೈಯಕ್ತಿಕ ವಿಚಾರಣೆ ಏನಲ್ಲ. ನಾವು ವಿರೋಧ ಪಕ್ಷದಲ್ಲಿದ್ದಾಗ ಆರೋಪ ಮಾಡಿದ್ದೆವು. ನಮ್ಮ ಪಕ್ಷದಿಂದ ತನಿಖೆ ಮಾಡಿ ವರದಿ ಕೊಟ್ಟಿದ್ದೆವು. ಸರ್ಕಾರಕ್ಕೆ ವರದಿ ಒಪ್ಪಿಸಿದ್ದೆವು. ನಿಯಮ ಬದಿಗೊತ್ತಿ ಅಂದು ನಿರ್ಧಾರ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದ ಮೇಲೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗಕ್ಕೆ ತನಿಖೆಗೆ ಕೊಟ್ಟಿದ್ದೆವು. ಈಗ ಮೊದಲ ರಿಪೋರ್ಟ್ ಕೊಟ್ಟಿದ್ದಾರೆ. ಅಂತಿಮ ವರದಿಯನ್ನೂ ಕೊಡುತ್ತಾರೆ" ಎಂದರು.
"ಪಿಪಿಇ ಕಿಟ್ ಖರೀದಿ ಅಕ್ರಮ ಕುರಿತು ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ನೋಟಿಸ್ ಕೊಟ್ಟು ಉತ್ತರ ಪಡೆಯಬೇಕು. ಇದು ವ್ಯಾಪಕವಾಗಿರುವುದರಿಂದ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಿದೆ. ನಿಯಮಗಳ ಅಡಿಯಲ್ಲೇ ನಾವು ಹೋಗಬೇಕು. ಇವರು ಲೂಟಿ ಮಾಡಿರುವುದು ಬಹಳ ಸ್ಪಷ್ಟ. ಸಿಎಂ, ಸಚಿವರು ಭಾಗಿಯಾಗಿರೋದು ಸ್ಪಷ್ಟ. ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮ ಮಾಡಿದ್ದಾರೆ. ದೇಶದಲ್ಲಿ ಪಿಪಿಇ ಕಿಟ್ ಖರೀದಿಗೆ ಅವಕಾಶ ಇತ್ತು. ಆದರೆ, ಅವರು ಹಾಂಕಾಂಗ್ನಿಂದ ತರಿಸಿದ್ದಾರೆ. 14 ಕೋಟಿ ಹೆಚ್ಚು ಹಣ ಕಂಪನಿಗೆ ತೆತ್ತಿದ್ದಾರೆ" ಎಂದು ದೂರಿದರು.
"ಈ ಸಂಬಂಧ ಮೊದಲ ಸಂಪುಟ ಉಪ ಸಮಿತಿ ಸಭೆ ನಡೆಸಿದ್ದೇವೆ. ಉಪ ಚುನಾವಣೆಯಿಂದಾಗಿ ಎರಡನೇ ಸಭೆ ಮಾಡಿಲ್ಲ. ಇನ್ನು ಬೇಕಾದಷ್ಟು ಆರೋಪಗಳಿವೆ. ವೆಂಟಿಲೇಟರ್, ಬೇರೆ ಬೇರೆ ಉಪಕರಣ ಖರೀದಿ ಮಾಡಿದ್ದಾರೆ. ಹೇಗೆ ತನಿಖೆ ಮಾಡಬೇಕು ಎಂಬ ನಿರ್ಧಾರವನ್ನು ಸಂಪುಟ ಉಪ ಸಮಿತಿಯಲ್ಲಿ ತೆಗೆದುಕೊಳ್ಳುತ್ತೇವೆ. ಆಗ ಇಬ್ಬರು ಆರೋಗ್ಯ ಸಚಿವರು ಇದ್ದರು. ಹೆಣದ ಮೇಲೆ ಹಣ ಮಾಡಿದ್ರು. ಹೆಚ್ಚಿನ ಬೆಲೆಗೆ ಖರೀದಿ ಮಾಡಿದ್ರು. ಅವರ ಅವಧಿಯನ್ನು ದುರುಪಯೋಗ ಪಡಿಸಿಕೊಂಡರು. ಕೀಳು ಮಟ್ಟದ ಅಧಿಕಾರ ಮಾಡಿದ್ದಾರೆ" ಎಂದು ಆರೋಪಿಸಿದರು.
"ನಾವು ಇದರಲ್ಲಿ ರಾಜಕೀಯ ಮಾಡಲಿಲ್ಲ. ಸಂಪೂರ್ಣ ವರದಿ ಬರಲಿ ಆಮೇಲೆ ಕ್ರಮ ವಹಿಸುತ್ತೇವೆ. ಹಣ ರಿಕವರಿ ಬಗ್ಗೆ ಕಮಿಟಿ ಶಿಫಾರಸು ಮಾಡಿದೆ. ಗುಣಮಟ್ಟ ಇಲ್ಲದ ವಸ್ತು ಪಡೆದಿದ್ದಾರೆ. ಕಡಿಮೆ ವಸ್ತುಗಳನ್ನು ಕೆಲವು ಕಡೆ ಖರೀದಿಸಿದ್ದಾರೆ. ಆಯೋಗದ ವರದಿಯಲ್ಲಿ ಸ್ಪಷ್ಟವಾಗಿದೆ. ಕೋವಿಡ್ನಲ್ಲೂ ಅವರು ದುಡ್ಡು ಮಾಡಿದ್ದಾರೆ. ಆಗಿನ ಸಿಎಂ ಯಡಿಯೂರಪ್ಪನವರೇ ಕಾರಣ ಅಂತ ಹೇಳಿದ್ದಾರೆ. ಈ ಖರೀದಿ ನಂತರವೂ ಮತ್ತೆ ಖರೀದಿಸಿದ್ದಾರೆ. ನಮ್ಮ ದೇಶದಲ್ಲೇ ಕಡಿಮೆ ಬೆಲೆಗೆ ಸಿಗುತ್ತಿತ್ತು. ಹಾಗಿದ್ದರೂ ಅವರು ಹೊರದೇಶದಿಂದ ಖರೀದಿಸಿದ್ದಾರೆ. ಇದರ ಬಗ್ಗೆ ಎಸ್ಐಟಿ ಮಾಡಬೇಕಾ? ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಮಾಡಬೇಕಾ? ಎನ್ನುವುದರ ಬಗ್ಗೆ ಸಂಪುಟ ಉಪಸಮಿತಿಯಲ್ಲಿ ಚರ್ಚಿಸುತ್ತೇವೆ" ಎಂದರು.
ರಾಜಕೀಯ ಪ್ರೇರಿತ ಎಂಬ ಬಿಎಸ್ವೈ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "ನಾನು ಯಡಿಯೂರಪ್ಪಗೆ ರೈಟ್ಸ್ ಇಲ್ಲ ಅಂತ ಹೇಳಲ್ಲ. ಅವರಿಗೂ ಹಕ್ಕುಗಳಿವೆ. ಇದು ರಾಜಕೀಯ ದುರುದ್ದೇಶ ಅಂತ ಹೇಳಲಾಗಲ್ಲ. ಇದು ಆಯೋಗ ಕೊಟ್ಟಿರುವ ವರದಿ. ಇದನ್ನು ನಾವು ಬಿಡುಗಡೆ ಮಾಡಿರಲಿಲ್ಲ. ಮಾಧ್ಯಮಗಳಲ್ಲಿ ಬಂದಿರೋದು. ಯಡಿಯೂರಪ್ಪ ಇದನ್ನು ತಿಳಿದುಕೊಳ್ಳಲಿ. ಅವರು ಹೆದರಿಸಬಹುದು, ಹೋರಾಟ ಮಾಡಲಿ. ಆಗ ಅವರು ಹೇಗೆ ನಡೆದುಕೊಂಡರು, ಆತ್ಮಾವಲೋಕನ ಮಾಡಿಕೊಳ್ಳಲಿ. ಅಂತಹ ಕೆಟ್ಟ ಸಂದರ್ಭದಲ್ಲಿ ಹೇಗೆ ನಡೆದುಕೊಂಡರು. ಇದರ ಬಗ್ಗೆ ಯಡಿಯೂರಪ್ಪ, ಶ್ರೀರಾಮುಲು ಯೋಚಿಸಲಿ" ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಭಾಷಣ ಆರೋಪ: ಯತ್ನಾಳ್ ವಿರುದ್ಧದ ಪ್ರಕರಣ ರದ್ದು