ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದ ಅಪರಾಧಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ. 20 ವರ್ಷದ ಯುವಕ ಶಿಕ್ಷೆಗೀಡಾದ ಅಪರಾಧಿ.
ಪ್ರಕರಣದ ವಿವರ: ಅಪ್ರಾಪ್ತ ಬಾಲಕಿಯನ್ನು ಫೋನ್ ಮೂಲಕ ಪರಿಚಯಿಸಿಕೊಂಡ ಯುವಕ, 2023ರ ಜೂ.22ರಂದು ಶಾಲೆಗೆಂದು ಹೊರಟಿದ್ದ ಆಕೆಯನ್ನು ಮಡಂತ್ಯಾರಿನಲ್ಲಿ ಭೇಟಿಯಾಗಿ ಅಲ್ಲಿಂದ ಮಂಗಳೂರಿಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿಂದ ಗೋವಾಕ್ಕೆ ತೆರಳಲು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕರೆದೊಯ್ದು, ರಾತ್ರಿ 11ರಿಂದ 12 ಗಂಟೆಯ ನಡುವೆ ಪ್ಲಾಟ್‌ಫಾರಂ 3ರಲ್ಲಿ ತಂಗಿದ್ದ ಮಂಗಳೂರು-ಮಡಗಾಂವ್ ರೈಲಿನ ಖಾಲಿ ಬೋಗಿಯೊಳಗೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ನಡೆಸಿದ್ದ.
ಈ ನಡುವೆ ಬಾಲಕಿಯ ತಾಯಿ ಮಗಳು ನಾಪತ್ತೆಯಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ರಾತ್ರಿ 12 ಗಂಟೆಗೆ ಬಾಲಕಿ ತಾಯಿಗೆ ಕರೆ ಮಾಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿ, ಯುವಕನನ್ನು ವಶಕ್ಕೆ ಪಡೆದಿದ್ದರು.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪುಂಜಾಲಕಟ್ಟೆ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಮತ್ತು ನಾಗೇಶ್ ಕೆ. ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಯುವಕನಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ಮಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಪ್ರಕಟಿಸಿದ ಕೋರ್ಟ್