ಹಾಸನ : ಅತ್ಯಾಚಾರ ಆರೋಪ ಎದುರಿಸುತ್ತಿರುವ ಹಾಗೂ ಪೆನ್ಡ್ರೈವ್ ಪ್ರಕರಣದಲ್ಲಿ ಸುದ್ದಿಯಲ್ಲಿರುವ ವಕೀಲ ದೇವರಾಜೇಗೌಡ ಅವರನ್ನು ಪೊಲೀಸ್ ಅಧಿಕಾರಿಗಳು, ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ. ಸದ್ಯ ದೇವರಾಜೇಗೌಡ ಅವರ ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದು, ಪೊಲೀಸರು ಅವರನ್ನು ಹಾಸನ ಜಿಲ್ಲಾ ಬಂಧಿಖಾನೆಗೆ ತಂದು ಬಿಟ್ಟರು.
ವಿಚಾರಣೆಗೆ ಎಂದು ಜಿ.ದೇವರಾಜೇಗೌಡರನ್ನು ಜೈಲಿನಿಂದ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಕರೆದೊಯ್ದಿದ್ದರು. ಒಂದೆರಡು ದಿನದ ನಂತರ ಮತ್ತೆ ವಾಪಸ್ ಹಾಸನ ಜಿಲ್ಲಾ ಕಾರಗೃಹಕ್ಕೆ ಪೊಲೀಸ್ ವಾಹನದಲ್ಲಿ ತಂದು ಬಿಡಲಾಯಿತು.
ಪೊಲೀಸ್ ಜೀಪ್ನಿಂದ ಇಳಿದು ಜೈಲಿನ ಒಳಗೆ ಹೋಗಬೇಕಾದರೆ ವಕೀಲ ದೇವರಾಜೇಗೌಡ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಪೊಲೀಸ್
ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡರೇ ಸತ್ಯಗಳು ಹೊರಬರಲಿದೆ. ಈಗ ತಾನೇ ಪೊಲೀಸ್ ಕಸ್ಟಡಿ ಮುಗಿದಿದೆ. ಜಾಮೀನಿಗೆ ಅರ್ಜಿ ಹಾಕುತ್ತಿದ್ದೇವೆ. ಮುಂದೆ ಎಲ್ಲಾ ಸತ್ಯ ಹೊರಗೆ ಬರುತ್ತದೆ ಎಂದರು.
ಸತ್ಯ, ಧರ್ಮದ ಪರ ಹೋರಾಟ ಮಾಡುವ ನಾಯಕ ನಾನು. ತಲೆಕೆಡಿಸಿಕೊಳ್ಳುವುದಿಲ್ಲ. ಧೈರ್ಯವಾಗಿ, ಆರಾಮಾಗಿ ಇರಿ. ಯಾರು ಷಡ್ಯಂತ್ರ ಮಾಡಿದರೂ ಏನು ಮಾಡಿಕೊಳ್ಳಲು ಆಗಲ್ಲ. ಕಾನೂನಿಗೆ ತಲೆ ಬಾಗಲೇಬೇಕು. ಸತ್ಯಕ್ಕೆ ಜಯವಿದೆ. ಸತ್ಯ ಮುಂದೆ ಹೊರ ಬರುತ್ತದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?: ವಕೀಲ ದೇವರಾಜೇಗೌಡ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಏಪ್ರಿಲ್ 1 ರಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ದೂರಿನ ಆಧಾರದ ಮೇಲೆ ಪೊಲೀಸರು ದೇವರಾಜೇಗೌಡರನ್ನು ಅವರನ್ನು ಚಿತ್ರದುರ್ಗದ ಹಿರಿಯೂರು ಬಳಿ ವಶಕ್ಕೆ ಪಡೆದಿದ್ದರು.
ಮೊದಲಿಗೆ ದೇವರಾಜೇಗೌಡರನ್ನ ಚಿತ್ರದುರ್ಗದ ಹಿರಿಯೂರು ಬಳಿ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿ ಮೇ 11ರಂದು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆ ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 4 ದಿನ ಜೆಎಂಎಫ್ಸಿ ಕೋರ್ಟ್ನಿಂದ ಕಸ್ಟಡಿಗೆ ಅನುಮತಿ ಪಡೆದಿದ್ದರು. ಸೋಮವಾರದಿಂದ ಪೊಲೀಸರ ವಶದಲ್ಲಿದ್ದ ದೇವರಾಜೇಗೌಡ ಅವರನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಬಳಿಕ ಹೊಳೆನರಸೀಪುರದ ಜೆಎಂಎಫ್ಸಿ ಕೋರ್ಟ್ ಅವರನ್ನು ಮೇ 24ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿದೆ