ಹುಬ್ಬಳ್ಳಿ (ಧಾರವಾಡ): ಈ ಮನೆ ಹೊರತುಪಡಿಸಿ ಬೇರೆಡೆ ನೀವು ರಾಜಕಾರಣ ಮಾಡಿ. ಸಾವಿನ ಮನೆಯಲ್ಲಿ ಚುನಾವಣಾ ರಾಜಕಾರಣ ಸರಿಯಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅಸಮಾಧಾನ ಹೊರಹಾಕಿದರು.
ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ನಮ್ಮ ಮಗಳು ನೇಹಾ ನಿವಾಸಕ್ಕೆ ಬಂದಿದ್ದೇವೆ. ನೇಹಾ ಕೇವಲ ನಿರಂಜನಯ್ಯ ಹಿರೇಮಠ ಅವರ ಪುತ್ರಿಯಲ್ಲ, ಇಡೀ ಕರ್ನಾಟಕದ ಮಗಳು. ನಿರಂಜನಯ್ಯ ನಮ್ಮ ಕುಟುಂಬದ ಸದಸ್ಯರು. ಈ ಘಟನೆ ಬಗ್ಗೆ ಅತ್ಯಂತ ದುಃಖವಿದೆ. ನಾವೆಲ್ಲಾ ಅವರ ಜೊತೆ ಇರುತ್ತೇವೆ. ಸಂಪೂರ್ಣ ನ್ಯಾಯ ಕೊಡಿಸೋದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.
ತ್ವರಿತಗತಿಯಲ್ಲಿ ನ್ಯಾಯದಾನ ಆಗಬೇಕು. 90 ದಿನಗಳಲ್ಲಿ ನ್ಯಾಯ ಸಿಗಲಿದೆ ಅನ್ನೋ ವಿಶ್ವಾಸವಿದೆ. ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು. ಆಕೆಯ ಸಾವಿಗೆ ನ್ಯಾಯ ಸಿಗಬೇಕು. ಗಲ್ಲಿಗೇರಿಸುವುದಕ್ಕಿಂತ ಕಡಿಮೆ ಶಿಕ್ಷೆ ಸಿಗಲ್ಲ. ವಿಶೇಷ ಕೋರ್ಟ್ ಖಂಡಿತ ತ್ವರಿತವಾಗಿ ನ್ಯಾಯ ನೀಡಲಿದೆ ಎಂದು ಸುರ್ಜೇವಾಲಾ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ನೇಹಾ ಕೊಲೆ ಪ್ರಕರಣ: ಆರೋಪಿ ಫಯಾಜ್ ವಶಕ್ಕೆ ಪಡೆದ ಸಿಐಡಿ, ಘಟನಾ ಸ್ಥಳದ ಮಹಜರು - NEHA MURDER CASE
ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಐಡಿ ಮೇಲೆ ನಮಗೆ ನಂಬಿಕೆ ಇದೆ. ರಾಜ್ಯ ಪೊಲೀಸರ ಮೇಲೆ ವಿಶ್ವಾಸವಿದೆ. 90 ದಿನಗಳಲ್ಲಿ ಖಂಡಿತ ನ್ಯಾಯ ಸಿಗಲಿದೆ ಅನ್ನೋ ಖಾತ್ರಿಯಿದೆ ಎಂದು ಹೇಳಿದರು.