ಹಾವೇರಿ: 'ಕರ್ನಾಟಕದ ವಿರುದ್ಧ ಇರುವುದೇ ಬಿಜೆಪಿ ಡಿಎನ್ಎ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದ ಅಜೆಂಡಾ ರಾಜ್ಯದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿದೆ. ಆ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಎಸಗಿದೆ. ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕರ್ನಾಟಕದ ನೆಲದ ಮೇಲೆ ಕಾಲಿಡುವ ನೈತಿಕತೆ ಇಲ್ಲ. ಶಾ ರಾಜ್ಯಕ್ಕೆ ಬಂದರೆ ಗೋ ಬ್ಯಾಕ್ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಮೋದಿ ಸರ್ಕಾರಕ್ಕೆ ಕರ್ನಾಟಕದ ಪವಿತ್ರ ಭೂಮಿಗೆ ನ್ಯಾಯ ಕೊಡಲು ಆಗಿಲ್ಲ. ರಾಜ್ಯ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಬರಗಾಲ ಘೋಷಿಸಿದೆ. ನಮ್ಮ ಮಂತ್ರಿಗಳು ಶಾ ಅವರನ್ನು ಭೇಟಿಯಾದರು. ಕೃಷಿ ಸಚಿವರು, ಕಂದಾಯ ಸಚಿವರು ಮತ್ತು ಪ್ರಿಯಾಂಕ್ ಖರ್ಗೆ ಅವರು ಅಮಿತ್ ಶಾ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಬರ ಪರಿಹಾರದ ಹಣಕ್ಕಾಗಿ ಮನವಿ ಸಲ್ಲಿಸಿದರು.
ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಬರ ಪರಿಹಾರದ ಹಣಕ್ಕೆ ಬೇಡಿಕೆ ಸಲ್ಲಿಸಿದರು.18,172 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲು ಮನವಿ ಮಾಡಿದರು. ಕರ್ನಾಟಕದ ತೆರಿಗೆ ಹಣವನ್ನೂ ಬಿಡುಗಡೆ ಮಾಡಲಿಲ್ಲ. ಪ್ರಕೃತಿ ವಿಕೋಪ ಸಮಯದಲ್ಲಿ ಹಣ ಬಿಡುಗಡೆ ಮಾಡಬೇಕು. ಆದರೆ ಆ ಹಣವನ್ನೂ ಬಿಡುಗಡೆ ಮಾಡಲಿಲ್ಲ ಎಂದು ಆರೋಪಗಳ ಮಳೆಯನ್ನೇ ಹರಿಸಿದರು.
ಕರ್ನಾಟಕದ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಬರ ಪರಿಹಾರದ ಹಣಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ರಸ್ತೆ, ಕೆರೆ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಮೋದಿ ಸರ್ಕಾರ ಹಣ ಕೊಡಲಿಲ್ಲ. ಹಾಗಾಗಿ, ರಾಜ್ಯದ ಜನರು ಬಿಜೆಪಿಗೆ ಏಕೆ ಮತ ಹಾಕಬೇಕು? ಎಂದು ಪ್ರಶ್ನಿಸಿದರು.
ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆಯಿಂದ ಕ್ಲಿಯರನ್ಸ್ ಕೊಡಿಸಲಿಲ್ಲ. ಕರ್ನಾಟಕದ ಜನರ ತೆರಿಗೆ ಹಣದಲ್ಲಿ ಅರ್ಧ ಹಣವನ್ನೂ ಕೇಂದ್ರ ವಾಪಸ್ ಕೊಡಲಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡಿದೆ. ಬಿಜೆಪಿಗೆ ಹೇಳಲು ಹೆಸರಿಲ್ಲ. ಕರ್ನಾಟಕದ ಬಗ್ಗೆ ಮಾತನಾಡಲು ಮೋದಿಯವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಸುರ್ಜೇವಾಲಾ ಆರೋಪಿಸಿದರು.
ಇದನ್ನೂ ಓದಿ: 'ಸಾವಿನ ಮನೆಯಲ್ಲಿ ರಾಜಕೀಯ ಬೇಡ, ನೇಹಾಗೆ ನ್ಯಾಯ ಕೊಡಿಸುವುದು ಸರ್ಕಾರದ ಜವಾಬ್ದಾರಿ': ಸುರ್ಜೇವಾಲಾ - Neha Murder Case
ಬಿಜೆಪಿ ಭಾರತೀಯ ಚೆಂಬು ಪಾರ್ಟಿ. ಖಾಲಿ ಚೆಂಬು ಮೋದಿಯವರ ಕೊಡುಗೆ. ಕುಮಾರಸ್ವಾಮಿ, ಯಡಿಯೂರಪ್ಪ ಜೊತೆ ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ. ದಿನಾಂಕ ನಿಗದಿ ಮಾಡಿ. ನಮ್ಮ ಸಿದ್ದರಾಮಯ್ಯ ಮತ್ತು ಡಿಕೆಶಿ ಚರ್ಚೆಗೆ ಸಿದ್ಧರಿದ್ದಾರೆ. ಬಿಜೆಪಿ ಕರ್ನಾಟಕಕ್ಕೆ ಖಾಲಿ ಚೆಂಬು ಕೊಟ್ಟಿದೆ. ಇದನ್ನು ನಮ್ಮ ಮತದಾರರು ಬಿಜೆಪಿಗೆ ವಾಪಸ್ ಕೊಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: 14 ಕ್ಷೇತ್ರಗಳಲ್ಲಿ 48 ತಾಸುಗಳ ಶೂನ್ಯ ಅವಧಿ ಆರಂಭ: ಇನ್ನೇನಿದ್ದರೂ ಮನೆ ಮನೆ ಪ್ರಚಾರ - Lok Sabha Election In Karnataka
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಆಧಾರದ ಮೇಲೆ ಮತ ಕೇಳುತ್ತಿದೆ. ಗ್ಯಾರಂಟಿ ಯೋಜನೆಗಳ ಮೇಲೆ ಮತ ಕೇಳುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರು ಮಾಲೀಕರಾಗಿದ್ದಾರೆ. ನಾವೆಲ್ಲ ಸೇವಕರು. 58 ಸಾವಿರ ಕೋಟಿ ರೂ. ಪ್ರತೀ ವರ್ಷ ಜನರ ಖಾತೆಗೆ ಹೋಗುತ್ತಿದೆ. ಹಿಂದೂಸ್ತಾನದಲ್ಲಿ ಕರ್ನಾಟಕ ಒಂದೇ ಮಾದರಿ ಸರ್ಕಾರ. ಇಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶವಿಲ್ಲ. ಬೊಮ್ಮಾಯಿ ಅವರನ್ನು ಕರ್ನಾಟಕದ ಜನರು ತಿರಸ್ಕಾರ ಮಾಡಿದ್ದಾರೆ. ಹಾಗಾಗಿ 40% ಸರ್ಕಾರವನ್ನು ಮತದಾರರು ಕಿತ್ತೊಗೆದರು ಎಂದು ತಿಳಿಸಿದರು.