ಬೆಳಗಾವಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ನೇತೃತ್ವದಲ್ಲಿ ಬೆಳಗಾವಿ ಹೊರ ವಲಯದ ಜೊಲ್ಲೆ ಒಡೆತನದ ಹೋಟೆಲ್ನಲ್ಲಿ ಬೆಳಗಾವಿ ವಿಭಾಗೀಯ ಬಿಜೆಪಿ ಸಭೆ ನಡೆಯಿತು. ಕೇವಲ ಅರ್ಧ ಗಂಟೆಯಲ್ಲಿ ನಡ್ಡಾ ಸಭೆ ಮುಗಿಸಿ, ಹೊರಟರು.
ಲೋಕಸಭಾ ಚುನಾವಣಾ ದೃಷ್ಟಿಯಿಂದ ಇಂದಿನ ಸಭೆ ಮಹತ್ವ ಪಡೆದುಕೊಂಡಿತ್ತು. ಸಭೆಯಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಮುಖಂಡರು, ಆಕಾಂಕ್ಷಿಗಳು, ಆಯ್ದ ಪದಾಧಿಕಾರಿಗಳು ಭಾಗಿಯಾಗಿದ್ದರು.
ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮತದಾರರನ್ನು ಹೆಚ್ಚಿನ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಅದೇ ರೀತಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಸಭೆಯಲ್ಲಿ ಭಾಗಿಯಾದವರಿಗೆ ಜೆ ಪಿ ನಡ್ಡಾ ಸಲಹೆ ಸೂಚನೆ ನೀಡಿದ್ದಾರೆ. ಇನ್ನು ಅಭ್ಯರ್ಥಿ ಆಯ್ಕೆ, ಟಿಕೆಟ್ ವಿಚಾರದ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಚುನಾವಣಾ ಉಸ್ತುವಾರಿ ರಾಧಾಮೋಹನದಾಸ ಅಗರವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಮಂಗಳಾ ಅಂಗಡಿ, ಪಿ.ಸಿ.ಗದ್ದಿಗೌಡರ, ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಬಸನಗೌಡ ಪಾಟೀಲ(ಯತ್ನಾಳ), ಬಾಲಚಂದ್ರ ಜಾರಕಿಹೊಳಿ, ಅರವಿಂದ್ ಬೆಲ್ಲದ, ಶಶಿಕಲಾ ಜೊಲ್ಲೆ, ಮಹೇಶ್ ಟೆಂಗಿನಕಾಯಿ, ಮಾಜಿ ಸಚಿವ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ್ ಕತ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ರಮೇಶ ಜಾರಕಿಹೊಳಿ ಗೈರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆಯುತ್ತಿರುವ ಕೋರ್ ಕಮೀಟಿ ಸಭೆಗೆ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಗೈರಾಗಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.
ಲೋಕಸಭೆಗೆ ಸ್ಪರ್ಧಿಸಲ್ಲ: ಯತ್ನಾಳ
ಕೋರ್ ಕಮೀಟಿ ಸಭೆ ಮುಗಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬೂತ್ ಮಟ್ಟದಲ್ಲಿ ಮತ ಹೇಗೆ ಹಾಕಿಸಿಕೊಳ್ಳಬೇಕು, ಮೋದಿಯವರ ನೇತೃತ್ವದಲ್ಲಿ 400 ಸೀಟ್ ಗೆಲ್ಲುವ ಬಗ್ಗೆ ನಡ್ಡಾ ಅವರು ಮಾರ್ಗದರ್ಶನ ಮಾಡಿದ್ದಾರೆ. ಈಗಾಗಲೇ ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರು ಬಂದು ಮಾಹಿತಿ ಪಡೆದಿದ್ದಾರೆ. ಒಂದೊಂದು ಕ್ಷೇತ್ರಕ್ಕೆ ಮೂರು ಹೆಸರು ಹೋಗಿವೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಟಿಕೆಟ್ ಅಂತಿಮಗೊಳಿಸುತ್ತದೆ ಎಂದರು.
ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಅಂತಾ ಹೇಳಿದ್ದೇನೆ. ಬಾಗಲಕೋಟೆ, ಬೆಳಗಾವಿ, ಕೊಪ್ಪಳ ಮೂರು ಕಡೆ ಎಲ್ಲಿಯೂ ನಿಲ್ಲಲ್ಲ. ಕೆಲವೊಬ್ಬರು ಕರ್ನಾಟಕದಿಂದ ನಾನು ಹೋಗಲಿ ಅಂತಾ ಕಳುಹಿಸಲು ಹೇಳ್ತಾರೆ. ನಾನು ಇಲ್ಲೇ ಇರ್ತಿನಿ. ನನ್ನ ಕಳುಹಿಸಿ ಅವರು ಇರಬೇಕು ಎಂದುಕೊಂಡಿದ್ದಾರೆ ಆದ್ರೇ ನಾನು ಹೋಗಲ್ಲ ಎಂದರು.
ಕೇಂದ್ರದಲ್ಲಿ ನಮ್ಮ ಸರ್ಕಾರ ಬರುತ್ತೆ. ಚುನಾವಣೆ ಬಳಿಕ ರಾಜ್ಯ ಸರ್ಕಾರ ಬದಲಾಗುತ್ತದೆ. ಅನುದಾನ ಸಿಗ್ತಿಲ್ಲ, ಗೌರವ ಸಿಗ್ತಿಲ್ಲ, ಕೆಲ ಸಚಿವರು ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿಸಿದರು.
ಸಂಸದ ರಮೇಶ ಜಿಗಜಿಣಗಿ ಆರೋಗ್ಯ ವಿಚಾರಿಸಿದ ಜೆ.ಪಿ.ನಡ್ಡಾ: ಬೆಳಗಾವಿ: ಅನಾರೋಗ್ಯದಿಂದ ಬೆಳಗಾವಿ ಕೆಎಲ್ ಇ ಆಸ್ಪತ್ರೆಗೆ ದಾಖಲಾಗಿರುವ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಂಸದ ರಮೇಶ ಕತ್ತಿ, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಮೋದಿ, ಶಾ ಎಷ್ಟು ಸ್ಥಾನ ಕೊಡುತ್ತಾರೋ ಅಷ್ಟಕ್ಕೆ ಒಪ್ಪಿಕೊಳ್ಳುತ್ತೇವೆ: ದೇವೇಗೌಡ