ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೈತಪ್ಪಿದ ಹಿನ್ನೆಲೆಯಲ್ಲಿ ರಾಜಕೀಯ ಮೇಲಾಟ ಮುಂದುವರೆದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವೆ ರಾಜಕೀಯ ಜಟಾಪಟಿ ನಡೆಯುತ್ತಲೇ ಇದೆ. ಇದಕ್ಕೆ ರಾಮನಗರ ಜಿಲ್ಲೆಯ ಮರುನಾಮಕರಣ ಪ್ರಸ್ತಾಪ ಹೊಸದಾಗಿ ಸೇರಿಕೊಂಡಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ಪ್ರಸ್ತಾವನೆ ಸಲ್ಲಿಸಿದೆ. ಆರಂಭದಲ್ಲಿ ಬೆಂಗಳೂರು ಜಿಲ್ಲೆಗೆ ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳು ಸೇರಿದ್ದವು. 1986ರಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ಘೋಷಿಸಲಾಯಿತು.
2007ರಲ್ಲಿ ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡ ಬಳ್ಳಾಪುರ ತಾಲ್ಲೂಕುಗಳನ್ನು ಒಳಗೊಂಡಂತೆ ಹೊಸ ಜಿಲ್ಲೆಯನ್ನು ಘೋಷಿಸಿ ಬೆಂಗಳೂರು ಗ್ರಾಮಾಂತರ ಹೆಸರನ್ನೇ ಉಳಿಸಿಕೊಳ್ಳಲಾಯಿತು. ಅದೇ ರೀತಿ ಮಾಗಡಿ, ಕನಕಪುರ, ಚನ್ನಪಟ್ಟಣ, ರಾಮನಗರ ತಾಲ್ಲೂಕುಗಳನ್ನು ಸೇರಿಸಿ ಹೊಸದಾಗಿ ರಾಮನಗರ ಜಿಲ್ಲೆ ಮಾಡಲಾಗಿದೆ.
ಪ್ರಸ್ತುತ ಬೆಂಗಳೂರು ನಗರ, ಅಂತಾರಾಷ್ಟ್ರೀಯ ಖ್ಯಾತಿ ಸಾರ್ವಭೌಮತ್ವ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲ್ಲೂಕುಗಳಿಗೆ ಲಭ್ಯವಾಗಬೇಕು ಎಂಬುದು ಜನರ ಆಶಯ ಮತ್ತು ನಮ್ಮ ಚಿಂತನೆಯಾಗಿದೆ ಎಂದು ಡಿಕೆಶಿ ನಿಯೋಗ ಮನವಿಯಲ್ಲಿ ತಿಳಿಸಿದೆ. ಈ ಐದು ತಾಲ್ಲೂಕುಗಳನ್ನು ಒಳಗೊಂಡು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಚನೆ ಮಾಡುವಂತೆ ಒತ್ತಾಯಿಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ.
ವಿವಾದ ಸೃಷ್ಟಿ: ರಾಮನಗರದ ಹೆಸರು ಬದಲಿಸಿ ‘ನವ ಬೆಂಗಳೂರು’ ಎಂದು ಮರುನಾಮಕರಣ ಮಾಡುವ ಕುರಿತು ವಿವಾದ ಸೃಷ್ಟಿಯಾಗಿದೆ. ರಾಜಕೀಯ ಹಗ್ಗಜಗ್ಗಾಟಕ್ಕೂ ಕಾರಣವಾಗಿದೆ. ಜಿಲ್ಲೆ ಬದಲಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಮನಗರದ ಹೆಸರು ಹೇಳುತ್ತಿದ್ದಂತೆ ರೇಷ್ಮೆ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಚನ್ನಪಟ್ಟಣದ ಗೊಂಬೆಗಳು, 'ಕ್ಲೋಸ್ ಪೇಟೆ'ಯ ಗ್ರಾನೈಟ್, ನಾಗೇಗೌಡರ ಜಾನಪದ ಲೋಕ, ರಾಮನಗರದ ಬೆಟ್ಟ ಮತ್ತಿತರ ಹೆಸರುಗಳು ನೆನಪಾಗುತ್ತವೆ.
ರಾಮನಗರ ಬೆಂಗಳೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. 2007ರ ಆಗಸ್ಟ್ 23ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ರಾಜ್ಯದ 28ನೇ ಜಿಲ್ಲೆಯಾಗಿ ರಾಮನಗರ ಅಸ್ಥಿತ್ವಕ್ಕೆ ಬಂತು. ರಾಮನಗರ ಜಿಲ್ಲೆಯ ಉತ್ತರಕ್ಕೆ ಬೆಂಗಳೂರು ಗ್ರಾಮಾಂತರ, ದಕ್ಷಿಣಕ್ಕೆ ಚಾಮರಾಜನಗರ, ಮಂಡ್ಯ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳು, ಪೂರ್ವಕ್ಕೆ ಬೆಂಗಳೂರು ನಗರ ಜಿಲ್ಲೆ, ಪಶ್ಚಿಮಕ್ಕೆ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಹೊಂದಿಕೊಂಡಿವೆ.
ರಾಮನಗರಕ್ಕಿದೆ ಶತಮಾನಗಳ ಇತಿಹಾಸ: ಕ್ರಿ.ಶ 4ನೇ ಶತಮಾನದಲ್ಲಿ ಗಂಗ ವಂಶಸ್ಥ ರಾಜರು ರಾಮನಗರ ಭಾಗದಲ್ಲಿ ಆಳ್ವಿಕೆ ನಡೆಸಿದರು. ಚನ್ನಪಟ್ಟಣ ಬಳಿಯ ಮಾಕುಂದ (ಮಂಕುಂದ) ಅವರ ರಾಜಧಾನಿಯಾಗಿತ್ತು. ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ಕೆಂಪೇಗೌಡರ ವಂಶಸ್ಥರು, ಟಿಪ್ಪು ಸುಲ್ತಾನ್, ಮೈಸೂರು ಅರಸರು ಹಾಗೂ ಬ್ರಿಟಿಷರ ಆಡಳಿತಕ್ಕೆ ಈ ಭಾಗ ಒಳಪಟ್ಟಿತ್ತು. ಜಿಲ್ಲೆಯ ಕೆಲವೆಡೆ ಇತಿಹಾಸ ಪೂರ್ವ ಕಾಲದ ಪಳಿಯುಳಿಕೆಗಳು ಲಭ್ಯವಾಗಿವೆ.
ಬ್ರಿಟಿಷ್ ಅಧಿಕಾರಿ 'ಸರ್ ಬ್ಯಾರಿ ಕ್ಲೋಸ್' (1756-1813) ಸ್ವಾತಂತ್ರ ಪೂರ್ವ ಕಾಲದಲ್ಲಿ ಆಳ್ವಿಕೆ ನಡೆಸಿದ್ದರು, ಆದ್ದರಿಂದ ರಾಮನಗರವನ್ನು ಹಿಂದೆ ಕ್ಲೋಸ್ ಪೇಟೆ ಎಂದು ಕರೆಯಲಾಯಿತು. ಇದನ್ನು ಮಾಜಿ ಮುಖ್ಯಮಂತ್ರಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ರಾಮನಗರ ಎಂದು ಮರುನಾಮಕರಣ ಮಾಡಿದರು.
ಪ್ರಸಿದ್ಧ ಸ್ಥಳಗಳು: ಖ್ಯಾತಿಗಳಿಸಿದ್ದ ಹಿಂದಿ ಚಿತ್ರ 'ಶೋಲೆ' ಈ ಬೆಟ್ಟಗಳ ಸುತ್ತಲೂ ಚಿತ್ರೀಕರಣಗೊಂಡಿದೆ. ಆದ್ದರಿಂದ SHOLAY HILLS ಎಂಬ ಹೆಸರು ಬಂದಿದೆ. ರಾಮನಗರದಲ್ಲಿರುವ ಹಂದಿ-ಗುಂದಿ ಮೀಸಲು ಅರಣ್ಯದ ಭವ್ಯವಾದ ಕಲ್ಲುಗಳು ಭೂದೃಶ್ಯಕ್ಕೆ ಬಹಳ ಹಳೆಯದು ಮತ್ತು ಪ್ರಸಿದ್ಧವಾಗಿವೆ. ರಾಮದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟ, ಕೆಂಗಲ್ ಆಂಜನೇಯ ಸ್ವಾಮಿ, ಶ್ರೀ ಬ್ರಾಹ್ಮಣ ತೀರ್ಥ ಬೃಂದಾವನ, ಮಾಗಡಿಯಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಮಂಚನಬೆಲೆ ಅಣೆಕಟ್ಟು, ಹಾರೋಬೆಲೆ ಅಣೆಕಟ್ಟು ಚುಂಚಿ ಜಲಪಾತ, ಕನಕಪುರದಲ್ಲಿ ಮೆಕೆದಾಟು, ಸಾವನದುರ್ಗ, ತಿಪ್ಪಗೊಂಡನಹಳ್ಳಿ ಜಲಾಶಯ, ಜನಪದ ಲೋಕವು ಪ್ರಸಿದ್ಧಿ ಪಡೆದುಕೊಂಡಿದೆ. ರಾಮನಗರ ಜಿಲ್ಲೆಯು ಸಾಂಪ್ರದಾಯಿಕ ಆಟಿಕೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ಏಷ್ಯಾದಲ್ಲೇ ಇದು ಅತಿ ದೊಡ್ಡ ಮಾರುಕಟ್ಟೆ ಹೊಂದಿದೆ.
ಪಂಚಾಯತ್ ಭವನ, ಕಂದಾಯ ಭವನ, ಮಿನಿ ವಿಧಾನಸೌಧ, ತಾಲ್ಲೂಕು ಆಫೀಸ್, ಉಪ ಕಮಿಷನರ್ ಕಚೇರಿ, ಉಪ ಅಧೀನ ಕಚೇರಿಗಳು, ಆರಕ್ಷಕ ಇಲಾಖೆ ಮತ್ತು ಜಿಲ್ಲಾ ನ್ಯಾಯಾಲಯ, ಪೊಲೀಸ್ ಭವನಗಳಂತ ಆಧುನಿಕ ಕಚೇರಿ ಕಟ್ಟಡಗಳನ್ನು ರಾಮನಗರ ಜಿಲ್ಲೆ ಹೊಂದಿದೆ.
ಸಿಲ್ಕ್ ಸಿಟಿ ರಾಮನಗರ: ರಾಮನಗರವು ತನ್ನ ರೇಷ್ಮೆ ಕೃಷಿಗಾಗಿ ಹೆಸರುವಾಸಿ. ಇದನ್ನು ಸಿಲ್ಕ್ ಟೌನ್ ಮತ್ತು ಸಿಲ್ಕ್ ಸಿಟಿ ಎಂದು ಅಡ್ಡ ಹೆಸರು ಸಹ ಇದೆ. ಈ ಪ್ರದೇಶದಲ್ಲಿ ತಯಾರಿಸಿದ ರೇಷ್ಮೆ ಪ್ರಸಿದ್ಧ ಮೈಸೂರು ಸಿಲ್ಕ್ ಇನ್ಪುಟ್ ಅನ್ನು ರೂಪಿಸುತ್ತದೆ. ಏಷ್ಯಾದ ರೇಷ್ಮೆ ಕೋಕೋನ್ಗಳಿಗೆ ರಾಮನಗರ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶವು ಟೊಯೋಟಾ ಮತ್ತು ಕೋಕಾಕೋಲಾದ ತಯಾರಿಕಾ ಘಟಕಗಳನ್ನು ಹೊಂದಿದೆ. 1,400 ಮೆವ್ಯಾಟ್ ಅನಿಲ ಆಧಾರಿತ ವಿದ್ಯುತ್ ಸ್ಥಾವರವನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಕಣ್ವ, ಶಿಂಷಾ, ವೃಷಭಾವತಿ, ಕಾವೇರಿ, ಅರ್ಕಾವತಿ, ಕುಮುದ್ವತಿ ನದಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುತ್ತವೆ. ಇಷ್ಟೊಂದು ನದಿ, ಕೆರೆ, ಜಲಾಶಯಗಳಿದ್ದರೂ ಜಿಲ್ಲೆಯ ಬಹುಪಾಲು ಭೂಮಿ ಮಳೆಯನ್ನೇ ಅವಲಂಬಿಸಿದೆ.
ಪ್ರಸಿದ್ಧಿ ಪಡೆದ ಗ್ರಾನೈಟ್ಸ್: ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳು ‘ಗ್ರಾನೈಟ್’ ಶಿಲೆಗಳಿಗೆ ಹೆಸರುವಾಸಿ. ದಪ್ಪ ಕಣದ ಸ್ಫಟಿಕ ರಚನೆಯ ಗ್ರಾನೈಟ್ ಇಲ್ಲಿನ ವಿಶೇಷ. ರಾಮನಗರ ಸುತ್ತಮುತ್ತ ಸಿಗುವ ಗ್ರಾನೈಟ್ ‘ಕ್ಲೋಸ್ ಪೇಟೆ’ ಗ್ರಾನೈಟ್ ಎಂದೇ ಹೆಸರುಗಳಿಸಿದೆ.
ರಾಜಕೀಯ ಇತಿಹಾಸ: 1952ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆಂಗಲ್ ಹನುಮಂತಯ್ಯ ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ಜಿಲ್ಲೆಯಿಂದ ಮುಖ್ಯಮಂತ್ರಿಯಾದ ಮೊದಲಿಗರು ಕೆಂಗಲ್ ಹನುಮಂತಯ್ಯ. ಇದಾದ ನಂತರ 1983ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು. 1994 ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. 2004ರಲ್ಲಿ ರಾಮನಗರದಿಂದ ಪ್ರಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.
ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದರು. ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಮೂರು (ರಾಮನಗರ, ಕನಕಪುರ, ಚನ್ನಪಟ್ಟಣ) ತಾಲೂಕುಗಳಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ರಾಮನಗರ ಕ್ಷೇತ್ರಕ್ಕೆ ಮೂರು ಬಾರಿ ಸಿಎಂ ಹುದ್ದೆ ಸಿಕ್ಕಿದೆ. ಆದರೆ, ಜಿಲ್ಲೆಯಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾದ ಯಾವೊಬ್ಬ ನಾಯಕರೂ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ಕುತೂಹಲದ ಸಂಗತಿ.
ಜಿಲ್ಲೆ ಬದಲಾವಣೆಗೆ ವಿರೋಧ: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ರಯತ್ನಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದು, ''ಈಗ ಜಿಲ್ಲೆಯ ಹೆಸರು ಬದಲಾವಣೆ ಮಾಡಬಹುದು. ಮತ್ತೆ ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇನೆ. ಆಗ ಇವರು ಇಟ್ಟಿರುವ ಹೆಸರನ್ನು ತೆಗೆಯುತ್ತೇನೆ'' ಎಂದು ಗುಡುಗಿದ್ದಾರೆ.
''ನಾನು ಅಧಿಕಾರದಲ್ಲಿದ್ದಾಗ ರಾಮನಗರ ಜಿಲ್ಲೆ ಮಾಡಿದ್ದೆ ಅದನ್ನು ತೆಗೆಯಬೇಕು ಎನ್ನುವುದು ಸರ್ಕಾರದ ಉದ್ದೇಶ. ದೇವೇಗೌಡರು ಮತ್ತು ನಾನು ಏನು ಅಭಿವೃದ್ಧಿ ಮಾಡಿದ್ದೇವೆ ಎನ್ನುವುದು ಜನರಿಗೆ ಗೊತ್ತಿದೆ. ಅದಕ್ಕೆ ಇವರ ಸರ್ಟಿಫಿಕೇಟ್ ಬೇಕಿಲ್ಲ. ಹೆಸರು ಬದಲಿಸುವುದು ಅನಗತ್ಯ'' ಎಂದಿದ್ದಾರೆ.
ಅಶೋಕ್ ವಿರೋಧ: ''ರಾಮನಗರದಲ್ಲಿ ರಾಮನಿದ್ದಾನೆ ಎಂಬ ದ್ವೇಷಕ್ಕೋ ಅಥವಾ ರಿಯಲ್ ಎಸ್ಟೇಟ್ ಕುಬೇರರಾಗುವ ದುರಾಸೆಯೋ, ತಮ್ಮ ಸಹೋದರನನ್ನು ಸೋಲಿಸಿದ ಬಿಜೆಪಿ- ಜೆಡಿಎಸ್ ಮೈತ್ರಿ ವಿರುದ್ಧ ದ್ವೇಷ ಸಾಧಿಸಲು ಹೆಸರು ಬದಲಾವಣೆ ಮಾಡುತ್ತಿದ್ದೀರಾ?'' ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
"ನಾವು ಹೊಸ ಜಿಲ್ಲೆಯನ್ನು ಸೃಷ್ಟಿಸುತ್ತಿಲ್ಲ. ಇರುವ ಜಿಲ್ಲೆ ಹಾಗೆ ಇರಲಿದೆ. ಒಂದು ಕಡೆ ಆಂಧ್ರಪ್ರದೇಶ, ಇನ್ನೊಂದು ಕಡೆ ತಮಿಳುನಾಡು ಗಡಿಯನ್ನು ಬೆಂಗಳೂರಿನ ಭಾಗಗಳು ಹಂಚಿಕೊಂಡಿವೆ. ತುಮಕೂರು ಮತ್ತು ಬಳ್ಳಾರಿ ರಸ್ತೆಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲಾ ದಿಕ್ಕುಗಳಲ್ಲೂ ಬೆಂಗಳೂರು ವಿಸ್ತರಣೆಯಾಗಿದೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದರಿಂದ ಭೂಮಿಯ ಬೆಲೆ ಹೆಚ್ಚಾಗುತ್ತದೆ. ಕೈಗಾರಿಕೆಗಳ ಅಭಿವೃದ್ಧಿಯೂ ಆಗುತ್ತದೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರನ್ನೂ ಗ್ರೇಟರ್ ಬೆಂಗಳೂರು ಮಾಡುವ ಪ್ರಸ್ತಾವನೆ ಇಡುತ್ತೇವೆ: ಜಿ.ಪರಮೇಶ್ವರ್ - G Parameshwar