ಬೆಳಗಾವಿ: ಒಂದೊಮ್ಮೆ ಬರದಿಂದ ತತ್ತರಿಸುವ ಅನ್ನದಾತರು, ಮಗದೊಮ್ಮೆ ನೆರೆಯಿಂದ ಸಂಕಷ್ಟ ಅನುಭವಿಸುತ್ತಾರೆ. ಇದರ ನಡುವೆ ಎಲ್ಲ ಸರಿ ಆಗಿ ಉತ್ತಮ ಇಳುವರಿ ಬಂತು ಎನ್ನುತ್ತಿರುವಾಗಲೇ ಸಮರ್ಪಕ ಬೆಲೆ ಸಿಗದೇ ಕಂಗಾಲಾಗುತ್ತಾರೆ. ಆದರೆ, ಈ ಬಾರಿ ಜಿಲ್ಲೆಯ ರೈತರು ಬೆಳೆಹಾನಿ ಜೊತೆಗೆ ಬೆಳೆ ವಿಮೆಗೆ ತುಂಬಿದ್ದ ಹಣವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಹೌದು, ಸಾಲಸೂಲ ಮಾಡಿ, ಕಷ್ಟ ಪಟ್ಟು ದುಡಿಯುವ ಅನ್ನದಾತನಿಗೆ ಒಂದಿಲ್ಲೊಂದು ಸಂಕಷ್ಟ ತಪ್ಪಿದ್ದಲ್ಲ. ಬೆಳೆ ವಿಮೆ ಮಾಡಿಕೊಳ್ಳಿ ಎಂದು ಸರ್ಕಾರ ಹೇಳುತ್ತದೆ. ಆದರೆ, ಬೆಳೆ ವಿಮೆಗೆ ಹಣ ತುಂಬಿದ್ದ ರೈತರಿಗೆ ಮಾತ್ರ ಪರಿಹಾರ ಸಿಗುತ್ತಿಲ್ಲ. ಅಲ್ಲದೇ ಬೆಳೆ ಹಾನಿ ಸಮೀಕ್ಷೆಯನ್ನೂ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ವಿಪರೀತ ಮಳೆಯಿಂದ ಬೆಳೆಹಾನಿ: ರಾಮದುರ್ಗ ತಾಲೂಕಿನ ತುರನೂರು ಗ್ರಾಮದ ರೈತ ಗಿರೆಪ್ಪಗೌಡ ಪಾಟೀಲ, ತಮ್ಮ ಎರಡೂವರೇ ಎಕರೆ ಜಮೀನಿನಲ್ಲಿ ಈರುಳ್ಳಿ ಮತ್ತು ಗೋವಿನಜೋಳ ಬೆಳೆದಿದ್ದರು. ಆದರೆ, ಈ ಬಾರಿ ವಿಪರೀತ ಮಳೆ ಮತ್ತು ರೋಗಭಾದೆಯಿಂದ ಅವರ ಬೆಳೆಗಳು ಹಾನಿಯಾಗಿವೆ. ಹಾಕಿದ ಬಂಡವಾಳ ಕೂಡ ಬಾರದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಳೆವಿಮೆ ತುಂಬಿದ್ದ ಹಣವಾದರೂ ಕೈ ಹಿಡಿಯುತ್ತದೆ ಅಂದುಕೊಂಡಿದ್ದ ಇವರಿಗೆ ನಿರಾಸೆಯಾಗಿದ್ದು, ದಯವಿಟ್ಟು ಸರ್ಕಾರ ನಮ್ಮ ಸಹಾಯಕ್ಕೆ ಧಾವಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಹೀಗಿದೆ ರೈತರ ಅಳಲು: ಮಾಧ್ಯಮಗಳ ಜೊತೆಗೆ ಮಾತನಾಡಿದ ಗಿರೆಪ್ಪಗೌಡ ಪಾಟೀಲ, "1 ಎಕರೆ 10 ಗುಂಟೆ ಜಮೀನಿನಲ್ಲಿ 50 ಸಾವಿರಕ್ಕೂ ಅಧಿಕ ಖರ್ಚು ಮಾಡಿ, ಈರುಳ್ಳಿ ಬೆಳೆದಿದ್ದೆ. ರೋಗ ಮತ್ತು ಹೆಚ್ಚು ಮಳೆಯಿಂದಾಗಿ ಇಳುವರಿ ಕುಂಠಿತವಾಗಿದ್ದು, ಕೇವಲ 15 ಚೀಲ(7 ಕ್ವಿಂಟಾಲ್) ಮಾತ್ರ ಬಂದಿದೆ. ಕನಿಷ್ಠ 50 ಕ್ವಿಂಟಾಲ್ ಆದರೂ ಬರುವ ನಿರೀಕ್ಷೆ ಇತ್ತು. ಆದರೆ, ಬಹಳಷ್ಟು ಹಾನಿಯಾಗಿದೆ. ಮಾಡಿದ ಖರ್ಚು ಕೂಡ ಬಂದಿಲ್ಲ. ಇನ್ನು ನನ್ನ ಎರಡೂವರೇ ಎಕರೆಗೆ 4 ಸಾವಿರ ರೂ. ಬೆಳೆ ವಿಮೆ ತುಂಬಿದ್ದೆ ಅದರ ಪರಿಹಾರವೂ ಸಿಕ್ಕಿಲ್ಲ. ಹೀಗಾದರೆ, ನಾವು ರೈತರು ಬದುಕುವುದಾದರೂ ಹೇಗೆ" ಎಂದು ಅಳಲು ತೋಡಿಕೊಂಡರು.
ಮತ್ತೋರ್ವ ರೈತ ಗಜಾನನ ಅರಳಿ ಮಾತನಾಡಿ, "ಕಳೆದ ಎರಡ್ಮೂರು ವರ್ಷಗಳಿಂದ ಕಟ್ಟಿದ್ದ ಬೆಳೆ ವಿಮೆಗೆ ಪರಿಹಾರ ಬಂದಿಲ್ಲ. ಹಾಗಾಗಿ, ಈ ವರ್ಷ ನಾನು ತುಂಬಿಲ್ಲ. ನನ್ನ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ, ಟೊಮೆಟೊ ಬೆಳೆಗಳಿಗೆ ಹಾನಿಯಾಗಿವೆ. ಯಾವೊಬ್ಬ ತೋಟಗಾರಿಕಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮೀಕ್ಷೆ ಮಾಡಿಲ್ಲ. ಸಮಸ್ಯೆ ಹೇಳಿಕೊಳ್ಳಬೇಕು ಎಂದರೆ ನಮ್ಮ ಶಾಸಕರು ರಾಮದುರ್ಗದಲ್ಲಿ ಇರುವುದೇ ಇಲ್ಲ. ಬೆಂಗಳೂರಿನಲ್ಲೆ ಇರುತ್ತಾರೆ. ಹಾಗಾಗಿ, ಬೆಳೆ ಹಾನಿ ಜೊತೆಗೆ ಬೆಳೆ ವಿಮೆ ತುಂಬಿದ ಹಣವನ್ನೂ ಕಳೆದುಕೊಳ್ಳುವಂತಾಗಿದೆ. ದಯವಿಟ್ಟು ಸರ್ಕಾರ ಸೂಕ್ತ ಪರಿಹಾರ ಕೊಟ್ಟು ನಮ್ಮನ್ನು ಬದುಕಿಸಿ" ಎಂದು ಕೇಳಿಕೊಂಡರು.
ಹಾನಿ ಬಗ್ಗೆ ತೋಟಗಾರಿಕೆ ಇಲಾಖೆ ಹೇಳುವುದಿಷ್ಟು: ಈಟಿವಿ ಭಾರತ ಪ್ರತಿನಿಧಿ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಅವರನ್ನು ಸಂಪರ್ಕಿಸಿದಾಗ, "ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿದೆ. 7 ದಿನಗಳ ಆಕ್ಷೇಪಣೆ ಸಲ್ಲಿಸುವ ಅವಧಿಯೂ ಪೂರ್ಣಗೊಂಡಿದೆ. ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ 66 ಲಕ್ಷ ರೂ. ಬೆಳೆಹಾನಿಯಾಗಿರುವ ವರದಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಪರಿಹಾರದ ಮೊತ್ತ ಜಮೆ ಆಗಲಿದೆ. ಇನ್ನು ಫಸಲ್ ಭೀಮಾ ಯೋಜನೆಯಡಿ ಪರಿಹಾರ ವಿಚಾರಕ್ಕೆ ಈಗಾಗಲೇ ಬೆಳೆ ಕಟಾವು ಪ್ರಕ್ರಿಯೆ ಶುರುವಾಗಿದೆ. ಕಳೆದ ಐದಾರು ವರ್ಷಗಳಲ್ಲಿ ಬಂದಿರುವ ಇಳುವರಿಗಿಂತ ಈ ಬಾರಿ ಕಡಿಮೆ ಬಂದಿದ್ದರೆ, ಇನ್ಶೂರೆನ್ಸ್ ಕಂಪನಿಯಿಂದ ಸಂಬಂಧಿಸಿದ ರೈತರಿಗೆ ಮುಂದಿನ ದಿನಗಳಲ್ಲಿ ಪರಿಹಾರ ತಲುಪಿಸಲಾಗುವುದು" ಎಂದು ಹೇಳಿದರು.