ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 26ನೇ ವಾರ್ಷಿಕ ಘಟಿಕೋತ್ಸವ ಫೆ.27ರಂದು ನಡೆಯಲಿದ್ದು, 52,650 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದು ಕುಲಪತಿ ಡಾ.ಎಂ.ಕೆ.ರಮೇಶ್ ಹೇಳಿದ್ದಾರೆ. ನಿಮಾನ್ಸ್ ಕನ್ವೆನ್ಷನ್ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
17 ಪಿಎಚ್ಡಿ, 156 ಸೂಪರ್ ಸ್ಪೆಷಾಲಿಟಿ, 7,815 ಸ್ನಾತಕೋತ್ತರ ಪದವಿ, 7 ಸ್ನಾತಕೋತ್ತರ ಡಿಪ್ಲೊಮಾ, 122 ಫೆಲೋಷಿಪ್ ಕೋರ್ಸ್, 8 ಸರ್ಟಿಫಿಕೇಟ್ ಕೋರ್ಸ್ ಹಾಗೂ 44,525 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ಶೇಕಡಾ 82.43 ರಷ್ಟಿದೆ ಎಂದರು.
ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡುವರು. ನವದೆಹಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ.ಬಿ.ಎನ್.ಗಂಗಾಧರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಕೋತ್ಸವ ಭಾಷಣ ಮಾಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಆರ್.ಶರಣಪ್ರಕಾಶ್ ಪಾಟೀಲ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್: ಡಾ.ಜಿ.ಕೆ.ವೆಂಕಟೇಶ್, ಡಾ.ಪಿ.ಎಂ.ಬಿರಾದಾರ ಮತ್ತು ಡಾ.ಪಿಂಕಿ ಭಾಟಿಯಾ ಟೋಪಿವಾಲಾ ಅವರಿಗೆ ಗೌರವ ಡಾಕ್ಟರೇಟ್ 'ಡಾಕ್ಟರ್ ಆಫ್ ಸೈನ್ಸ್' ಪದವಿ ಪ್ರದಾನ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಸಮಾರಂಭದಲ್ಲಿ ಹುಬ್ಬಳ್ಳಿಯ ಕೆ.ಎಲ್.ಇ.ಸೊಸೈಟಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನ (ಬಿ.ಎಸ್.ನರ್ಸಿಂಗ್ ಕೋರ್ಸ್) ಫೆಲೆಂಟಿನಾ ಜೇಮ್, ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ (ಆಯುಷ್ ಕೋರ್ಸ್) ಡಾ.ಎಸ್.ಪ್ರಜ್ಞಾ, ಧಾರವಾಡದ ಸೋನಿಯಾ ಎಜುಕೇಶನ್ ಟ್ರಸ್ಟ್ ಕಾಲೇಜು ಆಫ್ ಫಾರ್ಮಸಿಯ (ಬಿ.ಫಾರ್ಮ್ ಕೋರ್ಸ್) ಅನರ್ಥ್ಯ ವಿ ಕುಲಕರ್ಣಿ, ಮಂಗಳೂರಿನ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಂ.ಬಿ.ಬಿ.ಎಸ್ ಕೋರ್ಸ್) ಡಾ.ಕೆ.ಐ.ಮಧುರಾ, ಬೆಂಗಳೂರಿನ ಈಸ್ಟ್ ವೆಸ್ಟ್ ಕಾಲೇಜ್ ಆಫ್ ಫಾರ್ಮಸಿಯ (ಫಾರ್ಮ್ ಡಿ ಕೋರ್ಸ್) ಡಾ.ಸ್ನೇಹಾ ಸುಸಾನ್ ಸನ್ನಿ, ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ (ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್) ಪ್ರಿಯಾ ಕುಮಾರಿ ಅವರಿಗೆ ಚಿನ್ನದ ಪದಕ ನೀಡಲಾಗುವುದು ಎಂದರು.
ಕುಲಸಚಿವ ಪಿ.ಆರ್.ಶಿವಪ್ರಸಾದ್, ಕುಲಸಚಿವ (ಮೌಲ್ಯಮಾಪನ) ಡಾ.ಎಸ್.ರಿಯಾಜ್ ಬಾಷಾ ಹಾಗೂ ಇತರರು ಉಪಸ್ಥಿತರಿದ್ದರು.
ಇದನ್ನೂಓದಿ: ಕೋವಿಡ್ ನಂತರ ಜನರ ಆರೋಗ್ಯದಲ್ಲಿ ಏರುಪೇರು, ಸಂಶೋಧನೆ ಅಗತ್ಯವಿದೆ: ಆರಗ ಜ್ಞಾನೇಂದ್ರ