ಹಾಸನ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು ಸೋಲಿಸಿ ಜಿ. ಪುಟ್ಟಸ್ವಾಮಿ ಮೊಮ್ಮಗನಾದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ರನ್ನು ಗೆಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಕರೆ ನೀಡಿದರು.
ಹಾಸನದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತ ಸಮುದಾಯ ಮನಸ್ಸು ಮಾಡಿದರೇ ರಾಜಕೀಯದಲ್ಲಿ ಬದಲಾವಣೆ ತರಬಹುದು. ಶಿವಲಿಂಗೇಗೌಡರ ಕ್ಷೇತ್ರದಲ್ಲಿ 20 ಸಾವಿರ ಒಕ್ಕಲಿಗರು ಇರಬಹುದು. ದಲಿತರು ಮನಸ್ಸು ಮಾಡಿದರೇ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ನಾನು ಮತ್ತು ಶಿವಲಿಂಗೇಗೌಡರೇ ಉದಾಹರಣೆ. ಪುಟ್ಟಸ್ವಾಮಿ ಎಂದರೆ ದೇವರಂತಹ ಮನುಷ್ಯ. ಅಂತಹ ಕುಟುಂಬದಿಂದ ಅವರ ಮೊಮ್ಮಗ ಚುನಾವಣೆಗೆ ಬಂದಿರುವುದು ನಮ್ಮ ಸೌಭಾಗ್ಯ. ಕಾಂಗ್ರೆಸ್ ನಿಂದ ಐದು ಗ್ಯಾರಂಟಿ ನೀಡಲಾಗಿದ್ದು, ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.
ಅನ್ನ ಭಾಗ್ಯ ಯೋಜನೆ, ಗೃಹ ಲಕ್ಷ್ಮಿ, ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ಜಾರಿ ಮಾಡಿ ಜನರ ಆಶೀರ್ವಾದ ಸಿಕ್ಕಿದೆ. ನಾನು ದೇವೇಗೌಡರ ಬಗ್ಗೆ ಟೀಕೆ ಮಾಡುವುದಿಲ್ಲ. ದಲಿತ ಸಮಾಜವಾಗಲಿ, ಯಾರೆ ಆಗಲಿ. ಕೆಳವರ್ಗ ಮತ್ತು ಮೇಲ್ವರ್ಗ ಎಂದು ಯಾರು ಮಾತನಾಡಬೇಡಿ. ಮಾತನಾಡಿದರೆ ನನಗೆ ಕೋಪ ಬರುತ್ತದೆ ಎಂದು ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಈ ಬಾರಿ ದಲಿತರೆಲ್ಲಾ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದರ ಜತೆಗೆ ರಾಜ್ಯದಲ್ಲಿ 28 ಕ್ಷೇತ್ರ ಗೆಲ್ಲಿಸಬೇಕೆಂದು ಹೇಳಿದರು. ಎಲ್ಲರೂ ಉತ್ಸಾಹದಲ್ಲಿದ್ದು, ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಇವತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಮುನ್ನಡೆಯುತ್ತಿದೆ. 10ವರ್ಷದ ಬಿಜೆಪಿ ಆಡಳಿತ ಕೇವಲ ಸುಳ್ಳು ಹೇಳಿಕೊಂಡು ಕಾಲದೂಡಿದೆ. ಪ್ರತಿ ಖಾತೆಗೆ 15ಲಕ್ಷ ರೂ. ಹಣ ಹಾಕುವುದಾಗಿ ಹೇಳಿ ಬಿಡಿಕಾಸು ಹಾಕಲಿಲ್ಲ. 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಯಾವ ಭರವಸೆ ಈಡೇರಿಸದೇ ಬರಿ ಸುಳ್ಳು ಹೇಳಿಕೊಂಡು ಬಂದಿದೆ. ರಾಜ್ಯದಿಂದ ಹೆಚ್ಚು ಹಣ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತದೆ. ಆದರೇ ನಮಗೆ ಕೊಡುವುದು ಮಾತ್ರ ಕಡಿಮೆ. ಕೇಂದ್ರದಿಂದ ನಮಗೆ ಆದ ಅನ್ಯಾಯ ತಿಳಿದಿದೆ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ವಿಶ್ವವೇ ಗಮನಿಸುವ ರೀತಿ ರಾಜ್ಯ ಕಟ್ಟೋಣ, ನಿಮ್ಮ ಭರವಸೆ ಹುಸಿಗೊಳಿಸಲ್ಲ: ನಾಡಿನ ಜನರಿಗೆ ಸಿಎಂ ಪತ್ರ - Siddaramaiah letter