ಬೆಂಗಳೂರು: ಕರ್ನಾಟಕದ ರಾಜಭವನ ಈಗ ಬಿಜೆಪಿಯ ಅಧಿಕೃತ ಕಚೇರಿಯಾಗಿದೆ. ಮಲ್ಲೇಶ್ವರಂ ಬಿಜೆಪಿ ಕಚೇರಿ ರಾಜಭವನಕ್ಕೆ ಶಿಫ್ಟ್ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯಾವ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ನೆಲ ಕಚ್ಚಿದೆ, ನಾಯಕತ್ವ ದುರ್ಬಲವಾಗಿದೆಯೋ ಅಂತಹ ರಾಜ್ಯಗಳಲ್ಲಿ ಸಿಬಿಐ, ಇಡಿ, ಐಟಿ, ರಾಜ್ಯಪಾಲರನ್ನು ಬಳಕೆ ಮಾಡಲಾಗುತ್ತಿದೆ. ಐಟಿ, ಇಡಿ ಬಂದಾಗ ಬಿಜೆಪಿಗೆ ಬಹಳ ಖುಷಿಯಾಗುತ್ತದೆ. ಯಾವಾಗ ಆಪರೇಷನ್ ಕಮಲ ವಿಫಲ ಆಗುತ್ತೋ ಐಟಿ ದಾಳಿಯೂ ವಿಫಲ ಆಗುತ್ತೆ. ನಂತರ ರಾಜ್ಯಕ್ಕೆ ಇಡಿ ಬರುತ್ತದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಸಂಬಂಧ ಸರ್ಕಾರಿ ಅಧಿಕಾರಿಗೆ ಸಿಎಂ ಹೆಸರು ಹೇಳಬೇಕು ಎಂದು ಇಡಿ ಒತ್ತಡ ಹೇರುತ್ತದೆ. ಆ ಸರ್ಕಾರಿ ಅಧಿಕಾರಿ ದೂರು ಕೊಡುತ್ತಾರೆ. ಬಳಿಕ ಬಿಜೆಪಿ ಸುಮ್ಮನಾಗುತ್ತದೆ. ಇದೆಲ್ಲಾ ವಿಫಲವಾದ ಬಳಿಕ ರಾಜ್ಯಪಾಲರ ಮೂಲಕ ಪ್ರಧಾನಿ ಮೋದಿ ಎಂಟ್ರಿ ಕೊಡುತ್ತಾರೆ. ಈ ಸ್ಕ್ರಿಪ್ಟ್ ಬರೆದಿರುವುದು ಮೋದಿ ಹಾಗೂ ಅಮಿತ್ ಶಾ ಎಂದು ದೂರಿದರು.
ಇದು ದ್ವೇಷದ ರಾಜಕಾರಣ. ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಮೂಲಕ ನಾವು ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿದ್ದೆವು. ಕಳೆದ ಸದನದಲ್ಲಿ ಒಂದು ದೇಶ ಒಂದು ಚುನಾವಣೆ ವಿರುದ್ಧ ನಿರ್ಣಯ ಕೈಗೊಂಡಿದ್ದೆವು. ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ಇದೆಲ್ಲವೂ ಅವರಿಗೆ ಮುಜುಗರವಾಗಿದೆ. ಅದಕ್ಕಾಗಿ ರಾಜ್ಯಪಾಲರನ್ನು ಕೈಗೊಂಬೆಯಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯಪಾಲರು ಸಂವಿಧಾನ ರಕ್ಷಣೆ ಮಾಡುವ ಸ್ಥಾನದಲ್ಲಿದ್ದಾರೆ. ನಿಮ್ಮಿಂದ ಅದು ಕಗ್ಗೊಲೆ ಆಗುವುದು ಬೇಡ. ಸಾಂವಿಧಾನಿಕ ಹುದ್ದೆಯನ್ನು ದುರ್ಬಳಕೆ ಮಾಡಬೇಡಿ. ಬಿಜೆಪಿಯ ಕಾರ್ಯಕರ್ತರಾಗಬೇಡಿ. ನಿಮ್ಮಿಂದಲೇ ಸಂವಿಧಾನದ ಬಿಕ್ಕಟ್ಟು ತಲೆದೋರುವುದು ಬೇಡ. ಕಾಂಗ್ರೆಸ್ ಬಳಿ ಹೋರಾಟದ ರಕ್ತ ಇದೆ. ನಿಮ್ಮ ಬಳಿ ಮೋದಿ, ಶಾ ಇದ್ದರೆ ನಮ್ಮ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಇದೆ. ರಾಜಭವನ ಕೇಸರೀಕರಣ ಆಗುವುದು ಬೇಡ ಎಂದು ಒತ್ತಾಯಿಸಿದರು.
ನಿನ್ನೆ ಸಂಪುಟ ಸಭೆಯಲ್ಲಿ ಸಿಎಂ ಜೊತೆ ನಿಲ್ಲಲು ತೀರ್ಮಾನಿಸಿದ್ದೇವೆ. ರಾಜ್ಯಪಾಲರ ನಡೆಯನ್ನು ಖಂಡಿಸಿದ್ದೇವೆ. ನಮ್ಮ ಹಿಂದಿನ ಸಚಿವ ಸಂಪುಟದ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳದಿರುವುದಕ್ಕೆ ಖಂಡನೆ ಮಾಡಿದ್ದೇವೆ. ಸೆಕ್ಷನ್ 17Aಯಲ್ಲಿ ಅನುಸರಿಸಬೇಕಾದ ಮಾನದಂಡವನ್ನು 2020ರಲ್ಲಿ ಕೇಂದ್ರ ಸರ್ಕಾರವೇ ಹೊರಡಿಸಿದೆ. ಅದನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ಪ್ರಾಸಿಕ್ಯೂಷನ್ ಅನುಮತಿಯಿಂದ ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿದೆ: ಜಿ.ಪರಮೇಶ್ವರ್ - Prosecution against CM