ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ವಿರುದ್ದ ಜಯಭೇರಿ ಬಾರಿಸಿದ್ದಾರೆ. ಕ್ಷೇತ್ರದ ಹಾಲಿ ಸಂಸದರಾಗಿರುವ ರಾಜಾ ಅಮರೇಶ್ವರ್ ನಾಯಕ್ ಅವರು ಕ್ಷೇತ್ರ ಉಳಿಸಿಕೊಳ್ಳಲು ಭಾರಿ ಮತಪ್ರಚಾರ ನಡೆಸಿದ್ದರು. ಇತ್ತ ಅಭ್ಯರ್ಥಿ ಬದಲಿಸಿದ್ದ ಕಾಂಗ್ರೆಸ್ ಹೇಗಾದರೂ ಮಾಡಿ ಕ್ಷೇತ್ರ ಮರಳಿ ಪಡೆಯಲು ತಂತ್ರ ರೂಪಿಸಿತ್ತು.
ರಾಯಚೂರು ಲೋಕಸಭಾ ಕ್ಷೇತ್ರ 1957ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ, ಇದುವರೆಗೂ ನಡೆದ 17 ಚುನಾವಣೆಗಳಲ್ಲಿ 14 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಕ್ಷೇತ್ರ, ಮತದಾರರ ಮಾಹಿತಿ: ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಯಾದಗಿರಿ ಜಿಲ್ಲೆಯ ಮೂರು ಹಾಗೂ ರಾಯಚೂರು ಜಿಲ್ಲೆಯ ಐದು ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ಕ್ಷೇತ್ರಗಳಿದ್ದರೆ, ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ, ರಾಯಚೂರು ನಗರ, ಮಾನ್ವಿ, ಲಿಂಗಸುಗೂರು ಮತ್ತು ದೇವದುರ್ಗ ಕ್ಷೇತ್ರಗಳು ಬರುತ್ತವೆ. 2019 ರ ಚುನಾವಣೆಯಲ್ಲಿ ರಾಜಾ ಅಮರೇಶ್ವರ್ ನಾಯಕ್ ಅವರು 5,98,337 ಮತಗಳನ್ನು ಗಳಿಸಿ ಕಾಂಗ್ರೆಸ್ನ ಬಿ.ವಿ.ನಾಯಕ್ ವಿರುದ್ಧ 1,17,716 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಬಿ.ಬಿ.ನಾಯಕ್ 4,80,621 ಮತಗಳನ್ನು ಪಡೆದಿದ್ದರು.
ಕ್ಷೇತ್ರದಲ್ಲಿ ಒಟ್ಟು 20,10,103 ಸಾಮಾನ್ಯ ಮತದಾರರು, 338 ಸೇವಾ ಮತದಾರರಿದ್ದಾರೆ. 2024ರ ಮೇ 7ರಂದು ನಡೆದ ಚುನಾವಣೆಯಲ್ಲಿ ಶೇಕಡಾ 64.1ರಷ್ಟು ಮತದಾನ ದಾಖಲಾಗಿದೆ. ಕಳೆದ ಬಾರಿ ಶೇಕಡಾ 58.31ರಷ್ಟು ಮತ ದಾಖಲಾಗಿತ್ತು. ಈ ಬಾರಿ 6 ಪ್ರತಿಶತದಷ್ಟು ಹೆಚ್ಚು ಮತದಾನವಾಗಿದೆ. ಅದರಲ್ಲಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿದ್ದು, ಬಿಜೆಪಿಗೆ ವರವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನು, ಕ್ಷೇತ್ರದ ಇತಿಹಾಸದಲ್ಲಿ ಮಾಜಿ ಸಂಸದ ಎ.ವೆಂಕಟೇಶ್ ನಾಯಕ್ ಅವರು ಮಾತ್ರ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಇವರ ಪುತ್ರ ಬಿ.ವಿ.ನಾಯಕ್ 2014ರಲ್ಲಿ ಗೆಲುವು ಸಾಧಿಸಿ ಸಂಸದರಾಗಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ನಾಯಕ್ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ನಡುವೆ ನೇರ ಹಣಾಹಣಿ ನಡೆದಿದೆ.