ರಾಯಚೂರು: ಮಂತ್ರಾಲಯ ರಾಘವೇಂದ್ರ ಸ್ವಾಮೀಜಿ ಗುರುವೈಭವೋತ್ಸವ ಕಾರ್ಯಕ್ರಮವು ಇಂದಿನಿಂದ ಮಾರ್ಚ್ 16 ರವರೆಗೆ ಆರು ದಿನಗಳ ಕಾಲ ನಡೆಯಲಿದೆ. ನಾಳೆ ಮಾ.12 ರಂದು ರಾಘವೇಂದ್ರ ಸ್ವಾಮೀಜಿ 403ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಜರುಗಲಿದೆ.
ಮಾ.16 ರಂದು ಬೆಳಗ್ಗೆ 8 ಗಂಟೆಗೆ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ ಇರಲಿದೆ. ಉತ್ಸವದ ಅಂಗವಾಗಿ ತಿರುಪತಿ ತಿರುಮಲ ದೇವಸ್ಥಾನದಿಂದ ಬಂದ ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ಶ್ರೀ ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡುವ ಕಾರ್ಯಕ್ರಮ ನಡೆಯಲಿದೆ.
ವರ್ಧಂತಿ ಉತ್ಸವದಂದು ಚೆನ್ನೈನ ಶ್ರೀರಾಘವೇಂದ್ರ ಸ್ವಾಮಿ ನಾದಹಾರ ಸೇವಾ ಟ್ರಸ್ಟ್ನ 100 ಕ್ಕೂ ಹೆಚ್ಚು ಕಲಾವಿದರಿಂದ ಶ್ರೀಮಠದ ಪ್ರಾಕಾರದಲ್ಲಿ ನಾದಹಾರ ಸಮರ್ಪಣಾ ಸೇವಾ ನಡೆಯಲಿದೆ. ಟ್ರಸ್ಟ್ ಕಲಾವಿದರು ಕಳೆದ 19 ವರ್ಷಗಳಿಂದಲೂ ನಾದಹಾರ ಸೇವೆಯನ್ನು ಯಶಸ್ವಿಯಾಗಿ ಸಲ್ಲಿಸುತ್ತಿದ್ದಾರೆ. ಆರು ದಿನಗಳ ಕಾಲ ನಡೆಯುವ ರಾಘವೇಂದ್ರ ಗರುವೈಭವೋತ್ಸವದ ಸಂದರ್ಭದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ.
ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪ್ರದಾನ: ಆಂಧ್ರಪ್ರದೇಶದ ಹೈಕೋರ್ಟ್ ನ್ಯಾಯಾಧೀಶರಾದ ಯು.ದುರ್ಗಾಪ್ರಸಾದ, ಜಿ.ನಾಗೇಂದ್ರ, ಬಿ.ಶಾಮಸುಂದರ, ಹರಿನಾಥ ನುನೆಪಲ್ಲಿ, ಕರ್ನಾಟಕ ಹೈಕೋರ್ಟ್ ಸಾಲಿಸಿಟರ್ ಜನರಲ್ ಶಾಂತಿಭೂಷಣ್, ಮಾಜಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಕರ್ನಾಟಕ ಸರ್ಕಾರದ ಉಪಕಾರ್ಯದರ್ಶಿ ನಾಗರಾಜ ಅನಕಸದೊಡ್ಡಿ, ವಕೀಲರಾದ ಎಸ್.ಪಿ ಶಂಕರ, ರಾಯಚೂರಿನ ಎಸ್.ಕೆ ಪುರೋಹಿತ, ಫಣಿರಾಜ ಕಶ್ಯಪ್, ಆಂಧ್ರಪ್ರದೇಶದ ವಿಶೇಷ ಮುಖ್ಯ ಕಾರ್ಯದರ್ಶಿ ಆರ್.ಕರಿಕಲಾ ವೆಲವೆನ್, ಐಎಎಸ್ ಅಧಿಕಾರಿ ಪಿ.ಎಸ್ ಪ್ರದ್ಯುಮನ್ ಸತ್ಯನಾರಾಯಣ, ಐಪಿಎಸ್ ಅಧಿಕಾರಿ ಕರ್ನೂಲ್‌ನ ಕೃಷ್ಣಕಾಂತ, ರಾಯಚೂರಿನ ನಿಖಿಲ್.ಬಿ., ಬಿ.ಎಲ್ ಹರಿಬಾಬು ಸೇರಿದಂತೆ ಅನೇಕ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಶ್ರೀಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ: ಪ್ರತಿದಿನ ಸಂಜೆ ವಿವಿಧ ರಾಜ್ಯಗಳ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ದಾಸವಾಣಿ ಹಾಗೂ ವಿವಿಧ ಕಲಾವಿದರಿಂದ ಭರತನಾಟ್ಯ ನಡೆಯಲಿದೆ. ಅಲ್ಲದೇ ವಿವಿಧ ಆಧ್ಯಾತ್ಮ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಸಾಂಸ್ಕೃತಿಕ ನಗರಿಯಲ್ಲಿ ಶಿವರಾತ್ರಿ ಸಂಭ್ರಮ: ಕುಟುಂಬ ಸಮೇತ ತ್ರಿನೇಶ್ವರನ ದರ್ಶನ ಪಡೆದ ಯದುವೀರ್