ಮೈಸೂರು: ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು. ಇದಕ್ಕೆ ಹೈಕಮಾಂಡ್ ಅವಕಾಶ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡಬೇಕು. ಆದರೆ ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದರು.
ಇಂದು ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಇತ್ತೀಚಿನ ರಾಜಕೀಯ ಬೆಳವಣಿಗೆಯ ನಂತರ ಮುಖ್ಯಮಂತ್ರಿ ಬದಲಾವಣೆ ಆಗಬಹುದಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ಸಚಿವನಾಗಿ ಬಹಳ ವರ್ಷ ಕೆಲಸ ಮಾಡಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿಯಾಗಬೇಕು. ನನಗೂ ಆಸೆ ಇದೆ. ನಾನು ಸಿದ್ದರಾಮಯ್ಯ ಅವರಿಗಿಂತ ಎರಡು ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡಬೇಕು. ಆದರೆ ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯಿಲ್ಲ, ಆ ಬಗ್ಗೆ ಚರ್ಚೆ ನಡೆದಿಲ್ಲ. ನಾನು ಸಿದ್ದರಾಮಯ್ಯ ಒಳ್ಳೆಯ ಸ್ನೇಹಿತರು ಎಂದು ನಗುತ್ತಲೇ ಉತ್ತರಿಸಿದರು.
ಪರಮೇಶ್ವರ್ ಹಾಗೂ ಜಾರಕಿಹೊಳಿ ಮನೆಯಲ್ಲಿ ನಡೆದಿರುವುದು ಅವರ ಇಲಾಖೆಗೆ ಸಂಬಂಧಿಸಿದ ಸಭೆ ಅಷ್ಟೇ. ಇದಕ್ಕೆ ರಾಜಕೀಯ ಬಣ್ಣ ಬೇಡ ಎಂದು ಆರ್.ವಿ. ದೇಶ್ ಪಾಂಡೆ ಸ್ಪಷ್ಟಪಡಿಸಿದರು.
ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ತಪ್ಪು ಮಾಡಿಲ್ಲ: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಏನೂ ತಪ್ಪು ಮಾಡಿಲ್ಲ. ಸಾವಿರಾರು ಕೋಟಿ ಹಗರಣ ನಡೆದಿದೆ ಎಂದು ಹೇಳುತ್ತಾರೆ. ಆದರೆ ಆರೋಪದ ಬಗ್ಗೆ ದಾಖಲೆ ಕೊಟ್ಟರೆ ಸರ್ಕಾರಕ್ಕೆ ನಾನೇ ಪತ್ರ ಬರೆಯುತ್ತೇನೆ ಎಂದು ಆರ್.ವಿ. ದೇಶಪಾಂಡೆ ಸವಾಲೆಸೆದರು.
ಮುಖ್ಯಮಂತ್ರಿಯಾಗಿದ್ದಾಗ ರಾಮಕೃಷ್ಣ ಹೆಗಡೆ ಮೇಲೆ ಫೋನ್ ಟ್ಯಾಪಿಂಗ್ ಆರೋಪ ಬಂದಿತ್ತು, ಅವರು ತಕ್ಷಣ ರಾಜೀನಾಮೆ ನೀಡಿದರು. ಈಗ ದಿನವೂ ಫೋನ್ ಟ್ಯಾಪಿಂಗ್ ನಡೆಯುತ್ತಿರುತ್ತದೆ. ಈಗ ಮೌಲ್ಯಾಧಾರಿತ ರಾಜಕಾರಣ ನಡೆಯುತ್ತಿಲ್ಲ. ಹಿಂದೆ ಮೌಲ್ಯಾಧಾರಿತ ರಾಜಕಾರಣದ ರೀತಿಯಲ್ಲೇ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದರು ಎಂದು ಆರ್.ವಿ. ದೇಶಪಾಂಡೆ ತಿಳಿಸಿದರು.
ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆ; ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಭಾರ ಆಗಿರುವುದು ನಿಜ. ಐದು ಯೋಜನೆಗಳಿಗೆ 50-60 ಸಾವಿರ ಕೋಟಿ ರೂ. ಬೇಕು. ಇದರಿಂದ ಬೇರೆ ಅಭಿವೃದ್ಧಿಗೆ ತೊಡಕಾಗುವುದು ಸಹಜ. ಆದರೂ ಅದನ್ನ ಸರಿದೂಗಿಸಿಕೊಂಡು ಸರ್ಕಾರ ಹೋಗುತ್ತಿದೆ. ಗ್ಯಾರಂಟಿ ಯೋಜನೆ ಬೆಲೆಯೇರಿಕೆಗೆ ಕಾರಣ ಅಲ್ಲ. ದೇಶದಲ್ಲೇ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಎಂ.ಬಿ. ಪಾಟೀಲ್ ನಿನ್ನ ಗೌಡಿಕೆ, ಅಧಿಕಾರ ದರ್ಪ ನಮ್ಮ ಮುಂದೆ ತೋರಿಸಬೇಡ: ಮುರುಗೇಶ್ ನಿರಾಣಿ - Murugesh Nirani