ಬೆಂಗಳೂರು: ''ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಬಾಯಲ್ಲಿ ಸುಳ್ಳುಗಳನ್ನ ಹೇಳಿಸಿದ್ದಾರೆ. ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ನಾವೇ ತಂದಿದ್ದೇವೆ, ನಾವೇ ಮಾಡಿದ್ದು ಎಂದು ಬೆನ್ನು ತಟ್ಟಿಕೊಂಡಿದ್ದಾರೆ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ರಾಜ್ಯಪಾಲರ ಭಾಷಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೋಮುವಾದಕ್ಕೆ ಉತ್ತೇಜನ ನೀಡುವ ಕೆಲಸ ಆಗಿದೆ. ಐದನೇ ಗ್ಯಾರಂಟಿ ಪ್ರಾರಂಭ ಆಗಿಲ್ಲ. ಒಬ್ಬ ನಿರುದ್ಯೋಗಿ ಯುವಕನಿಗೆ ಒಂದು ರೂಪಾಯಿ ಸಿಕ್ಕಿಲ್ಲ. ಬರದ ವಿಚಾರದಲ್ಲಿ ಎರಡು ಸಾವಿರ ಹಣ ಕೊಟ್ಟಿಲ್ಲ. ಕಂತು ಕಂತು ಆಗಿ ಹೋಗಿದೆ ಅಂತಾರೆ, ಆದರೆ ರೈತರಿಗೆ ಮೋಸ ಮಾಡ್ತಾ ಇದ್ದಾರೆ'' ಎಂದು ಗಂಭೀರವಾಗಿ ಆರೋಪ ಮಾಡಿದರು.
''ಬರ ಪರಿಸ್ಥಿತಿ ಇದ್ದು, ರೈತರಿಗೆ 25 ಸಾವಿರ ಪರಿಹಾರ ನೀಡಬೇಕು ಅಂತ ಒತ್ತಾಯ ಮಾಡಿದ್ದೆವು, ಕೇಂದ್ರದ ಮೇಲೆ ಗೂಬೆ ಕುರಿಸುವ ಕೆಲಸ ಆಗಿದೆ. ಅಭಿವೃದ್ಧಿ ಕುಂಠಿತ ಆಗಿದೆ. ಶಿವಮೊಗ್ಗ ಏರ್ಪೋರ್ಟ್ ಮುಗಿದಿದ್ದು ನಮ್ಮ ಕಾಲದಲ್ಲಿ. ಆದರೆ, ಅದು ನಮ್ಮದು ಅಂತ ಹೇಳಿದ್ದಾರೆ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಹಣ ನೀಡೋದು ಅದು ನಮ್ಮದೇ ಅಂತ ಹೇಳಿದ್ದಾರೆ. ಎಸಿ, ಎಸ್ಟಿ ಹಣ ಬೇರೆ ಯೋಜನೆಗಳಿಗೆ ಇಟ್ಟು, ಹಣ ಬೇರೆ ಕಡೆ ಬಳಸುವ ಮೂಲಕ ಎಸಿ, ಎಸ್ಟಿಗಳಿಗೆ ಮೋಸ ಮಾಡಿದ್ದಾರೆ. ಕಳೆದು ಎಂಟು ತಿಂಗಳಲ್ಲಿ ಒಂದು ರೂಪಾಯಿ ಅಭಿವೃದ್ಧಿಗೆ ಕೊಟ್ಟಿಲ್ಲ. ರಾಜ್ಯಪಾಲರಿಗೆ ಅವಮಾನ ಮಾಡಿದ್ದಾರೆ, ಈ ಸರ್ಕಾರದಿಂದ ಒಂದೇ ಒಂದು ಕಾಮಗಾರಿ ಆಗಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ'' ಎಂದು ಟೀಕಿಸಿದರು.
''ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಈ ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿದ್ದಾರೆ. ಶೇ 40ರಷ್ಟು ಲೂಟಿ ಸರ್ಕಾರ, ಕಮಿಷನ್ ಸರ್ಕಾರ ಎಂದಿದ್ದಾರೆ. ಆದರೂ ರಾಜ್ಯಪಾಲರ ಬಾಯಲ್ಲಿ ಸುಳ್ಳುಗಳನ್ನ ಹೇಳಿಸಿದ್ದಾರೆ'' ಎಂದು ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ: ರಾಜ್ಯಪಾಲರ ಭಾಷಣ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ''ರಾಜ್ಯಪಾಲರ ಭಾಷಣ ಸಪ್ಪೆ ನಿರಾಸೆಯ ಭಾಷಣವಾಗಿದೆ. ಇಂತಹ ಭಾಷಣ ಯಾವತ್ತೂ ಕೇಳಿರಲಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿರುವ ಜನ ವಿರೋಧಿ ಸರ್ಕಾರ ಇರುವುದನ್ನು ತೋರಿಸುತ್ತದೆ. ಯಾವುದೇ ವಿಚಾರದಲ್ಲಿ ಸಾಧನೆ ಮಾಡಿರುವುದು ಕಾಣಿಸುವುದಿಲ್ಲ. ನಾವು ಮಾಡಿರುವ ಯೋಜನೆಗಳನ್ನು ತಮ್ಮ ಸಾಧನೆ ಎಂದು ಹೇಳಿಕೊಂಡಿದ್ದಾರೆ. ಜಲಜೀವನ್ ಮಿಷನ್, ಮನೆ ನಿರ್ಮಾಣ ಎಲ್ಲವೂ ನಮ್ಮ ಯೋಜನೆಗಳು, ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ನಮ್ಮ ಅವಧಿಯಲ್ಲಿ ಆರಂಭಿಸಿದ್ದೇವೆ. ಅದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಂಡಿದ್ದಾರೆ. ನೀರಾವರಿಗೆ 10 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ. ಯಾವ ಯೋಜನೆಗೆ ಎಷ್ಟು ಖರ್ಚು ಮಾಡಿದ್ದಾರೆ ಎಂದು ದಾಖಲೆ ನೀಡಲಿ'' ಎಂದು ಗರಂ ಆದರು.
''ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರು ಕ್ಷೇತ್ರದಲ್ಲಿ ತಿರುಗಾಡದಂತಹ ಪರಿಸ್ಥಿತಿ ಇದೆ. ಅವರನ್ನು ಕೇಳಿದರೆ ಸರ್ಕಾರದ ಸಾಧನೆ ಏನು ಅಂತಾ ಗೊತ್ತಾಗುತ್ತದೆ. ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಲ್ಲ. ಡಿಸಿ ಅಕೌಂಟ್ನಲ್ಲಿ ಹಣ ಇದೆ ಅಂತಾರೆ. ಆದರೆ, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ರಾಜ್ಯಪಾಲರಿಂದ ಸುಳ್ಳು ಹೇಳಿಸುವ ಕೆಲಸ ಮಾಡಿದ್ದಾರೆ'' ಎಂದು ಆರೋಪಿಸಿದರು.
''ಕೇಂದ್ರದ ಅನುದಾನದ ಕುರಿತು ಸದನದಲ್ಲಿ ಚರ್ಚೆ ಮಾಡುತ್ತೇವೆ. ಯುಪಿಎ ಅವಧಿಯಲ್ಲಿ ಎಷ್ಟು ಬಂದಿದೆ. ಎನ್ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಎನ್ನುವುದು ದಾಖಲೆ ಇದೆ. ಕೇಂದ್ರದ ಆಯುಷ್ಮಾನ್ ಭಾರತ, ಜಲ ಜೀವನ್ ಮಿಷನ್ ಸೇರಿದಂತೆ ಅನೇಕ ಯೊಜನೆಗಳು ಜಾರಿಯಲ್ಲಿವೆ. ಧರ್ಮದ ವಿಚಾರದಲ್ಲಿ ಸಂವಿಧಾನದಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವಂತೆ ಹೇಳಿದೆ. ಆದರೆ, ಇವರು ಒಂದೇ ಧರ್ಮವನ್ನು ತುಷ್ಟೀಕರಣ ಮಾಡುವ ಕೆಲಸ ಮಾಡುತ್ತಾರೆ ಇದೆಲ್ಲವನ್ನೂ ಸದನದಲ್ಲಿ ಪ್ರಶ್ನಿಸುತ್ತೇವೆ'' ಎಂದರು.
ಬಿವೈ ವಿಜಯೇಂದ್ರ ಗರಂ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ''ಪ್ರತಿಕ್ರಿಯೆ ಕೊಡುವುದಕ್ಕೂ ಸಹ ಆಗದೇ ಇರುವಂತಹ ಭಾಷಣವಾಗಿದೆ. ರಾಜ್ಯಪಾಲರ ಭಾಷಣ ಬರೀ ಸುಳ್ಳಿನಿಂದ ಕೂಡಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರ ಇದೆ. ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಹೊರಟಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಜಲಜೀವನ್ ಯೋಜನೆ ನಮ್ದು ಅಂತಾ ಹೇಳಿದ್ದಾರೆ.
ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೇ ಎಲ್ಲ ಕೆಲಸ ಆಗುತ್ತೆ ಅಂತಾರೆ, ಇವತ್ತು ಮಧ್ಯವರ್ತಿಗಳ ಹಾವಳಿ ಹೇಗಿದೆ ಅಂದರೆ
50 ಪರ್ಸೆಂಟ್ ಲೂಟಿ ಸರ್ಕಾರ ಅಂತಾ ಶಿವರಾಂ ಹೇಳ್ತಾರೆ. ಕೆಂಪಣ್ಣ 40 ಪರ್ಸೆಂಟ್ ಸರ್ಟಿಪೀಕೆಟ್ ಕೊಟ್ಟಿದ್ದಾರೆ. ಸರ್ಕಾರ ಬಂದು 8 ತಿಂಗಳಾಗಿದೆ 1.5 ಲಕ್ಷ ಕಡತಗಳು ವಿಲೇವಾರಿಯಾಗದೇ ಇದೆ. ಎಲ್ಲ ಕ್ಷೇತ್ರಗಳಲ್ಲಿ ಈ ಸರ್ಕಾರ ವಿಫಲವಾಗಿದೆ. ಯಾವುದೇ ಅಭಿವೃದ್ಧಿ ಯೋಜನೆ ಮಾಡದೇ ಅಭಿವೃದ್ದಿ ಬಗ್ಗೆ ಕಿಂಚಿತ್ತೂ ಕೂಡ ಗಮನ ಹರಿಸದ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.
ವಿಫಲವಾದ ಕರ್ನಾಟಕ ಮಾಡಲ್- ಅಶ್ವತ್ಥ ನಾರಾಯಣ್: ''ಕರ್ನಾಟಕ ಮಾಡಲ್ ವಿಫಲವಾಗಿದೆ, ಅಪಕೀರ್ತಿಯ ಮಾಡೆಲ್ ಆಗಿದೆ'' ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ರಾಜ್ಯಪಾಲರ ಭಾಷಣ ಸಂಬಂಧ ವಾಗ್ದಾಳಿ ನಡೆಸಿದ ಅವರು, ''ರಾಜ್ಯಪಾಲರ ಭಾಷಣದಲ್ಲಿ ಕರ್ನಾಟಕ ಮಾಡೆಲ್ ಜನಪ್ರಿಯವಾಗಿದೆ. ದೇಶ ಅದನ್ನು ಅನುಸರಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಾಡೆಲ್ ಅಂತಹ ಕೆಟ್ಟ ಆಡಳಿತ, ಅವ್ಯವಸ್ಥೆಯ, ವಿದ್ಯುತ್ ಕೊರತೆಯ, ಭ್ರಷ್ಟ ಆಡಳಿತ ಎಲ್ಲೂ ಇಲ್ಲ'' ಎಂದು ಕಿಡಿ ಕಾರಿದರು.
''ಕಾಂಗ್ರೆಸ್ ಸರ್ಕಾರ ಬರದ ನಿರ್ವಹಣೆಯಲ್ಲಿ ವಿಫಲವಾಗಿದೆ. ಕಡತ ವಿಲೇವಾರಿಯಾಗುತ್ತಿಲ್ಲ. ಗ್ಯಾರಂಟಿ ಯೋಜನೆಯಲ್ಲಿ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ನೆಪ ಮಾತ್ರಕ್ಕೆ ಜಾರಿಯಾಗಿದೆ. ಶಕ್ತಿ ಯೋಜನೆಯಿಂದ ಬಸ್ಗಳ ಕೊರತೆ ಎದುರಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ತೊಂದರೆ ಆಗಿದೆ'' ಎಂದು ಆರೋಪಿಸಿದರು.
''ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಎನ್ಡಿಆರ್ಎಫ್ ಮಾನದಂಡ ಪ್ರಕಾರ ಪರಿಹಾರ ಸಿಗಲಿದೆ. ಅದಕ್ಕಿಂತ ಹೆಚ್ಚಿಗೆ ಹಣವೇ ಸಿಗಲಿದೆ. ಸರ್ಕಾರವಾಗಿ ಇವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ನಾವೇ ಮೊದಲು ಖರ್ಚು ಮಾಡಿದ್ದೆವು. ಆದರೆ, ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ. ಹಾಗಾಗಿ ಹಾಲು ಉತ್ಪಾದಕರಿಗೆ ಹಣ ಬಿಡುಗಡೆ ಇಲ್ಲ. ರೈತರಿಗೆ ಹಣ ಬಿಡುಗಡೆ ಮಾಡಿಲ್ಲ. ಹಣಕಾಸಿನ ಮೇಲೆ ಶ್ವೇತಪತ್ರ ಹೊತಡಿಸಲಿ'' ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವಿಧಾನ ಮಂಡಲ ಜಂಟಿ ಅಧಿವೇಶನ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊಗಳಿದ ರಾಜ್ಯಪಾಲರು