ಬೆಂಗಳೂರು: "ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದೆ. ಝಿಕಾ, ಕಾಲರಾದಿಂದಲೂ ಜನ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ ಜನರ ರಕ್ಷಣೆಗೆ ಮುಂದಾಗಬೇಕು" ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಯನಗರದ ಸಂಜಯ್ ಗಾಂಧಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸೋಂಕಿತರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಜೊತೆಗಿದ್ದರು.
ಮಾಸ್ಕ್ ಧರಿಸದೇ ನೇರವಾಗಿ ರೋಗಿಗಳ ಬಳಿ ತೆರಳಿದ ಅಶೋಕ್, ಆರೋಗ್ಯ ವಿಚಾರಿಸಿದರು. ರೋಗಿಗಳಲ್ಲಿ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದು, "ಧೃತಿಗೆಡಬೇಡಿ, ಆದಷ್ಟು ಬೇಗ ಗುಣಮುಖರಾಗುತ್ತೀರಿ" ಎಂದು ಧೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, "ರಾಜ್ಯದಲ್ಲಿ ಜನವರಿಯಿಂದ ಡೆಂಗ್ಯೂ ಹಬ್ಬುತ್ತಿದೆ. ಜುಲೈ ವೇಳೆಗೆ ಮಹಾಮಾರಿಯಾಗಿ ಪರಿಣಮಿಸಿದೆ. ಪ್ರತಿದಿನ ಮೂರರಿಂದ ನಾಲ್ಕು ಜನ ಸಾವನ್ನಪ್ಪುತ್ತಿದ್ದಾರೆ. ಇಂದೂ ಸಹ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಜಯನಗರದ ಆಸ್ಪತ್ರೆಗೆ ಭೇಟಿ ನೀಡಿ ಪರೀಶೀಲಿಸಿದ್ದೇನೆ. ಈ ಹಿಂದೆ ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದೆ. ಡೆಂಗ್ಯೂ ಪರೀಕ್ಷೆಯನ್ನು ಉಚಿತವಾಗಿ ಮಾಡುವಂತೆ ಆದೇಶಿಸಿದ್ದೆ. ಜನ ಟೆಸ್ಟ್ ಮಾಡಿಸಿಕೊಳ್ಳದೇ ಇರುವುದರಿಂದ ಡೆಂಗ್ಯೂ ಹೆಚ್ಚಾಗುತ್ತಿದೆ."
"ನಮ್ಮ ಸರ್ಕಾರದ ಸಮಯದಲ್ಲಿ ಹೇಗೆ ಕೊರೊನಾ ಟೆಸ್ಟ್ ಉಚಿತ ಮಾಡಿದ್ದೆವೋ ಆ ರೀತಿ ಡೆಂಗ್ಯೂಗೂ ಫ್ರೀ ಟೆಸ್ಟಿಂಗ್ ಮಾಡಿಸಿ. ಅದಕ್ಕೂ ಆಮೇಲೆ ಟ್ಯಾಕ್ಸ್ ಹಾಕಬೇಡಿ. ಡೆಂಗ್ಯೂ ಟೆಸ್ಟಿಂಗ್ಗೆ ಚಿಕಿತ್ಸೆಗೆ 10 ಕೋಟಿ ಆಗಬಹುದಾ? ಅದಕ್ಕೆ ಖರ್ಚು ಮಾಡಿ. ಸರ್ಕಾರವೇ ಜನರಿಗೆ ಅಭಯ ನೀಡಬೇಕು. ಕೋವಿಡ್ ಮಾದರಿಯಲ್ಲಿ ಡೆಂಗ್ಯೂಗೆ ಪ್ರತ್ಯೇಕ ವಾರ್ಡ್ ಮಾಡಿಸಬೇಕು."
"ಅಧಿಕಾರಿಗಳು ಎಸಿ ರೂಮ್ನಿಂದ ಹೊರಬಂದು ಕೆಲಸ ಮಾಡಬೇಕು. ನಗರದಲ್ಲಿ ಸ್ವಚ್ಚತೆ ಇಲ್ಲ. ಸ್ವಚ್ಚತೆ ಕಾಪಾಡಿಕೊಳ್ಳುವುದಕ್ಕೆ ಮುಂದಾಗಬೇಕು. ಉಚಿತ ಟೆಸ್ಟಿಂಗ್, ಚಿಕಿತ್ಸೆ ಮತ್ತು ಔಷಧವನ್ನು ಮಾಡಿ. ಮಕ್ಕಳಿಗೂ ಡೆಂಗ್ಯೂ ಹಬ್ಬುತ್ತಿದೆ. ಇದನ್ನು ಸರ್ಕಾರ ಗಮನಿಸಬೇಕು. ಪ್ರತಿಪಕ್ಷದ ನಾಯಕನಾಗಿ ನಾನು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇನೆ. ಈ ಸರ್ಕಾರ ಪ್ರತಿಪಕ್ಷ ಎಚ್ಚರಿಸಿದರೆ ಮಾತ್ರ ಕೆಲಸ ಮಾಡುತ್ತದೆ. ನಮ್ಮ ರಾಜ್ಯಾಧ್ಯಕ್ಷರು, ಸೇರಿದಂತೆ ಉಳಿದ ನಾಯಕರು ಸಹ ನಾಳೆಯಿಂದ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದಾರೆ. ಇದರಿಂದ ಆಸ್ಪತ್ರೆಯವರೂ ಸಹ ಆ್ಯಕ್ಟಿವ್ ಆಗುತ್ತಾರೆ" ಎಂದು ಹೇಳಿದರು.