ಬೆಂಗಳೂರು: ''ಬಾಯಲ್ಲಿ ರಾಮ ಇದ್ದರೆ ಆಗಲ್ಲ. ಹೃದಯದಲ್ಲಿ ಇರಬೇಕು. ನಿಮ್ಮ ಹೃದಯದಲ್ಲಿ ಟಿಪ್ಪು ಸುಲ್ತಾನ್ ಇದ್ದಾರೆ'' ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಹನುಮ ಧ್ವಜವನ್ನು ತೆರವು ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ''ಅಯೋಧ್ಯೆಯಲ್ಲಿ ರಾಮಮಂದಿರ ಆಗಿದೆ. ತಿರುಪತಿ ಬಿಟ್ಟರೆ ಅಯೋಧ್ಯೆಗೆ ಹೆಚ್ಚಿನ ಜನ ಬರುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹನುಮ ಧ್ವಜವನ್ನು ಗ್ರಾಮಸ್ಥರು ಹಾರಿಸಿದ್ದರು. ಗ್ರಾಮ ಪಂಚಾಯತಿ ಅನುಮೋದನೆಯೊಂದಿಗೆ ಹಾರಾಟ ಮಾಡಿದ್ದಾರೆ. ಕಾಂಗ್ರೆಸ್ನವರು ಏಕಾಏಕಿ ಹನುಮ ಧ್ವಜ ಕಿತ್ತು, ಕಂಬ ಧ್ವಂಸ ಮಾಡಿದ್ದಾರೆ'' ಎಂದು ಕಿಡಿಕಾರಿದರು.
''ಸಿದ್ದರಾಮಯ್ಯ ಜೈಶ್ರೀರಾಮ ಎಂದರು. ನನ್ನ ಹೆಸರಲ್ಲೇ ರಾಮ ಇದ್ದಾನೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ನನ್ನ ಹೆಸರಲ್ಲಿ ಶಿವ ಇದ್ದಾನೆ ಅಂದ್ರು. ಅಯೋಧ್ಯೆಯಲ್ಲಿ ಮಸೀದಿ ಕೆಡವಿ ರಾಮಮಂದಿರ ನಿರ್ಮಿಸಿದ್ದಾರೆ ಅಂತ ಹೇಳಿದ್ರು. ಊರಲ್ಲಿ ನಾನೇ ರಾಮ ಮಂದಿರ ಕಟ್ಟಿದ್ದೇನೆ ಅಂತಿರುತ್ತಾರೆ. ಈಗ ಊರಲ್ಲಿರುವ ಹನುಮಂತನ ಬಾವುಟ ಕಿತ್ತು ಹಾಕುತ್ತೀರಾ? ಗ್ರಾಮಸ್ಥರು ಬಾವುಟ ಹಾರಿಸಿದ್ದರು. ಬಿಜೆಪಿಯವರೇನೂ ಹಾರಿಸಿರಲಿಲ್ಲ. ಅದನ್ನೇ ಕಿತ್ತು ಹಾಕಿದ್ದೀರಾ? ಕಾಂಗ್ರೆಸ್ನ ಈ ಹಿಂದೂ ವಿರೋಧಿ, ರಾಮ ವಿರೋಧಿ ನೀತಿಯನ್ನು ಖಂಡಿಸುತ್ತೇನೆ. ಇದರ ವಿರುದ್ದ ಹೋರಾಟ ಮಾಡುತ್ತೇವೆ'' ಎಂದರು.
ಸಿದ್ದರಾಮಯ್ಯ ತಮಗೆ ಬೇಕಾದ ಜಾತಿಯನ್ನು ಮೇಲಕ್ಕೆತ್ತುತ್ತಾರೆ- ಅಶೋಕ್: ''ಸಿಎಂ ಸಿದ್ದರಾಮಯ್ಯ ತಮಗೆ ಬೇಕಾದ ಜಾತಿಯನ್ನು ಮೇಲಕ್ಕೆ ಏರಿಸುತ್ತಾರೆ. ಬೇರೆ ಜಾತಿಗಳನ್ನು ಕೆಳಗಿಳಿಸುತ್ತಾರೆ'' ಎಂದು ಅಶೋಕ್ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ''ಜಾತಿ ಗಣತಿ ವರದಿ ವಿಚಾರವಾಗಿ ಪ್ರತಿಕ್ರಿಯಿಸಿ, ''ಎಲ್ಲರೂ ಜಾತಿ ಗಣತಿಗೆ ವಿರೋಧ ಮಾಡುತ್ತಿದ್ದಾರೆ. ಅದು ಸಿದ್ದರಾಮಯ್ಯ ಹೇಳಿ ಬರೆಸಿದ ವರದಿ. ವೈಜ್ಞಾನಿಕವಾಗಿ ಸರ್ವೆ ಮಾಡಬೇಕು. ಇವರಿಗೆ ಬೇಕಾದ ಜಾತಿಯನ್ನು ಮೇಲಕ್ಕೆ ಏರಿಸುವುದು. ಬೇರೆ ಜಾತಿಗಳನ್ನು ಕೆಳಗಿಳಿಸುವುದು. ಸಿದ್ದರಾಮಯ್ಯ ಯಾವತ್ತೂ ವೀರಶೈವ ಲಿಂಗಾಯತರ ವಿರೋಧಿಯಾಗಿದ್ದಾರೆ'' ಎಂದು ಹೇಳಿದರು.
''ಒಕ್ಕಲಿಗರೂ ಜಾತಿ ಗಣತಿಗೆ ವಿರೋಧ ಮಾಡಿದ್ದಾರೆ. ಜಾತಿ ಗಣತಿ ವಿರೋಧಿಸಿ ಎಲ್ಲರೂ ಸಹಿ ಹಾಕಿದ್ದಾರೆ. ಡಿಕೆಶಿಯವರೇ ಸಹಿ ಹಾಕಿದ್ದಾರೆ. ಡಿಸಿಎಂ ಸಚಿವ ಸಂಪುಟ ಸಚಿವರುಗಳೇ ಅವೈಜ್ಞಾನಿಕ ಎಂದು ಸಹಿ ಹಾಕಿರುವುದರಿಂದ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ಇಲ್ಲಾ ಕ್ಯಾಬಿನೆಟ್ ನಿಂದ ಸಚಿವರನ್ನು ವಜಾ ಮಾಡಬೇಕು'' ಎಂದು ಆಗ್ರಹಿಸಿದರು.
ಪರಿಹಾರ ಕೊಡಿ, ಖುರ್ಚಿ ಬಿಡಿ ಹೋರಾಟ: ''ರಾಜ್ಯದಲ್ಲಿ ಬರ ಇದೆ. ನೀರಿಗೆ ಹಾಹಾಕಾರ ಇದೆ. ಏಳು ತಿಂಗಳಿಂದ ರೈತರು ಬರದ ಬವಣೆಯಿಂದ ಸುಸ್ತಾಗಿದ್ದಾರೆ. ರಾಜ್ಯ ಸರ್ಕಾರ ಸಹಾಯ ಹಸ್ತಕ್ಕೆ ನೀಡುತ್ತೆ ಎಂದು ಕಾಯುತ್ತಿದ್ದಾರೆ. ಬರ ಘೋಷಣೆಯನ್ನು ತಡವಾಗಿ ಮಾಡಿದ್ದರು. ಎರಡು ಸಾವಿರ ಕೊಡುತ್ತೇನೆ ಎಂದು ಅಧಿವೇಶನದ ಮುಂಚೆ ಘೋಷಿಸಿದರು. ಮನೆ ಬಾಗಿಲಿಗೆ ಹೋಗಲಿ ಸರ್ಕಾರದ ಖಜಾನೆಗೆ ಬಂದಿಲ್ಲ'' ಎಂದು ಗರಂ ಆದರು.
''ರಾಜ್ಯ 20 ವರ್ಷಗಳಲ್ಲಿ ವಿತ್ತೀಯ ಶಿಸ್ತು ನಾವು ಮೀರಿಲ್ಲ. ಈ ಬಾರಿ ಅದಲ್ಲಾ ಉಲ್ಲಂಘನೆಯಾಗಲಿದೆ. ನಾವು ಸರ್ಪ್ಲಸ್ ಬಜೆಟ್ ಕೊಟ್ಟಿದ್ದೆವು. ಈ ಬಾರಿ ಹೋಪ್ ಲೆಸ್ ಬಜೆಟ್ ಮಂಡಿಸಲಿದ್ದಾರೆ. ಎಲ್ಲಾ ಕಾಮಗಾರಿಗಳು ನಿಂತು ಹೋಗಿವೆ. ಸರ್ಕಾರ ದಿವಾಳಿಯಾಗಿದೆ. ಬರ ಪರಿಹಾರ ವಿಳಂಬ ಖಂಡಿಸಿ ಸರ್ಕಾರದ ವಿರುದ್ಧ ಕೋಲಾರದಲ್ಲಿ ನಾಳೆ ಬೃಹತ್ ಪ್ರತಿಭಟನೆ ಮಾಡುತ್ತೇವೆ. ರೈತರಿಗೆ ಪರಿಹಾರ ಕೊಡಿ ಇಲ್ಲ ಕುರ್ಚಿ ಬಿಡಿ ಎಂಬ ಹೋರಾಟ ಮಾಡುತ್ತೇವೆ. ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ದೊಡ್ಡಬಳ್ಳಾಪುರದಲ್ಲಿ ಫೆ.30ಕ್ಕೆ ನಿರಂತರ ವಿದ್ಯುತ್ ಕೊಡದೇ ಇರುವುದಕ್ಕಾಗಿ ಹೋರಾಟ ಮಾಡುತ್ತೇವೆ'' ಎಂದರು.
ಮೋದಿಯವರ ಗ್ಯಾರಂಟಿ ಪಕ್ಕಾ ಗ್ಯಾರಂಟಿ: ''ಮೋದಿಯವರ ಗ್ಯಾರಂಟಿ ಪಕ್ಕಾ ಗ್ಯಾರಂಟಿ. ರಾಮಮಂದಿರ ಕಟ್ಟುತ್ತೇನೆ ಅಂದ್ರು ಕಟ್ಟಿದರು, 371 ತೆಗೆದು ಹಾಕುತ್ತೇನೆ ಅಂದ್ರು ತೆಗೆದರು. ಮೋದಿ ಈಸ್ ದಿ ಗ್ಯಾರಂಟಿ. ಕಾಂಗ್ರೆಸ್ ಅವರದ್ದು ಡುಬ್ಲಿಕೇಟ್. ಸುಳ್ಳು ಗ್ಯಾರಂಟಿ. ಅದಕ್ಕೆ ಕೂಪನ್ ನೀಡಿದ ರಾಮನಗರದ ಕೈ ಶಾಸಕ ಇಕ್ಬಾಲ್ ಹುಸೇನ್ ಸಾಕ್ಷಿ'' ಎಂದು ಕಿಡಿ ಕಾರಿದರು.
''ರಾಮನಗರದಲ್ಲಿ ರಾಮಮಂದಿ ನಿರ್ಮಾಣ ಮಾಡುತ್ತೇವೆ ಅನ್ನುತ್ತಿದ್ದಾರೆ. ಅವರಿಗೆ ಈಗ ರಾಮನಗರದ ರಾಮನ ಬೆಟ್ಟ ಕಾಣಿಸುತ್ತಿದೆ. ಎಪ್ಪತ್ತು ವರ್ಷದಲ್ಲಿ ಅವರಿಗೆ ಕಂಡಿಲ್ಲ. ಈಗ ಅವರಿಗೆ ರಾಮನ ಬಗ್ಗೆ ನೆನಪಾಗಿದೆ. ಜನ ಅವರನ್ನು ನಂಬಲ್ಲ. ಹೃದಯದಿಂದ ರಾಮ ಬರಬೇಕು. ಇವರಿಗೆ ಹೃದಯದಲ್ಲಿ ಟಿಪ್ಪು ಇರುವುದು. ರಾಮಮಂದಿರ ಹೋರಾಟ ಮಾಡಿದ್ದು ನಾವೇ. ನಿಮ್ಮ ಮನೆಯಿಂದ ಒಬ್ಬರೂ ಬಂದಿಲ್ಲ'' ಎಂದು ವಾಗ್ದಾಳಿ ನಡೆಸಿದರು.
ಬಿಹಾರ ಸಿಎಂ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ''ನೆಹರು ಕುಟುಂಬದ ಪಳೆಯುಳಿಕೆ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಭಾರತ್ ಜೋಡೋ ಮಾಡುತ್ತಿದ್ದಾರೆ. ಒಂದು ಭಾರತ್ ಜೋಡೋ ಮಾಡಿದಾಗ ಮೂರು ರಾಜ್ಯಗಳು ಒಡೆಯಿತು. ಈಗ ನಿತೀಶ್ ಕುಮಾರ್ ಕಾಂಗ್ರೆಸ್ ಚೋಡೋ ಹೇಳುತ್ತಿದ್ದಾರೆ. ಈ ಮಹಾಪುರುಷ ಎಲ್ಲಿ ಕಾಲು ಇಡ್ತಾರೆ ಅಲ್ಲಿ ಸೋಲುತ್ತಿದೆ. ಬಿಹಾರ ಸರ್ಕಾರವೇ ಪತನವಾಗಿದೆ. ಅವರು ಮುಂದಕ್ಕೆ ಬರಲಿ ಇನ್ನು ಯಾವ ಯಾವ ಸರ್ಕಾರ ಬೀಳುತ್ತೆ ನೋಡೋಣ'' ಎಂದು ಕುಡುಕಿದರು.
ಸುಮಲತಾ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಅವರ ಭಾವನೆ ವ್ಯಕ್ತ ಮಾಡುತ್ತಾರೆ. ಕೇಂದ್ರದ ನಾಯಕರು ಆ ಬಗ್ಗೆ ನಿರ್ಧಾರ ಮಾಡುತ್ತಾರೆ. ಅದೇ ಅಂತಿಮ. ಯಾರಿಗೆ ಕೊಟ್ಟರು ನಾವು ಗೆಲ್ಲಿಸುತ್ತೇವೆ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೇ ಗೆಲ್ಲಿಸತ್ತೇವೆ. ಎನ್ಡಿಎ ಅಭ್ಯರ್ಥಿ ಅಲ್ಲಿ ನಿಲ್ಲುತ್ತಾರೆ'' ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: 'ಆಯಾ ರಾಮ್-ಗಯಾ ರಾಮ್': ನಿತೀಶ್ ಕುಮಾರ್ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ