ಮಂಡ್ಯ: ಕೆರಗೋಡಿನ ಘಟನೆಗೆ ಶಾಸಕ ರವಿಕುಮಾರ್ ಗಣಿಗ ಕಾರಣವೆಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಮಂಡ್ಯದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಕ್ಷಾತೀತವಾಗಿ ಧ್ವಜಸ್ತಂಭವನ್ನು ಕೆರಗೋಡಿನಲ್ಲಿ ಸ್ಥಾಪಿಸಬೇಕೆಂದು ಶಾಸಕರೇ ಸ್ಥಳ ಪರಿಶೀಲನೆ ಮಾಡಿದ್ದರು. ಅಲ್ಲದೇ ಊರಿನ ಎಲ್ಲರನ್ನೂ ಒಟ್ಟು ಸೇರಿಸಿ ಜನವರಿ 22ರಂದು ನಾನೇ ಉದ್ಘಾಟನೆ ಮಾಡುತ್ತೇನೆ ಎಂದು ವಾಗ್ದಾನ ಕೊಟ್ಟಿದ್ದರು ಎಂದರು.
ಜನವರಿ 22ರಂದು ಮಾರಗೌಡನಹಳ್ಳಿಯಲ್ಲಿ ತಿರುಪತಿ ದೇವಾಲಯ ಉದ್ಘಾಟನೆಯ ಪ್ರಯುಕ್ತ ಕುಮಾರಸ್ವಾಮಿಯವರು ಬರಬೇಕಿತ್ತು. ಅಯೋಧ್ಯೆಗೆ ತೆರಳಬೇಕಿದ್ದ ಕಾರಣ ಅವರು ಬರಲು ಸಾಧ್ಯವಾಗಲಿಲ್ಲ. ನೀವೇ ಮುಖಂಡರು ನೆರವೇರಿಸಿ ಎಂದು ಸೂಚನೆ ನೀಡಿದ್ದರು. ಅದರಂತೆ ನಾವೆಲ್ಲಾ ಮಾರಗೌಡನಹಳ್ಳಿಗೆ ತೆರಳುತ್ತಿದ್ದಾಗ ಕರೆಗೋಡಿನ ಜನರು ಅಡ್ಡಬಂದು ಹನುಮಧ್ವಜ ಉದ್ಘಾಟನೆಯಾಗಿದೆ, ನೀವು ಬಂದು ಪೂಜೆ ಸಲ್ಲಿಸಿ ಎಂದರು. ಹೀಗಾಗಿ ನಾವು ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿ ತಿರುಪತಿ ದೇವಾಲಯಕ್ಕೆ ತೆರಳಿದ್ದೆವು.
ಇಲ್ಲಿಂದ ವಿವಾದದ ಮೂಲ ಆರಂಭವಾಗಿತ್ತು. ಶಾಸಕ ರವಿಕುಮಾರ್ ಗಾಣಿಗ ಅವರು ತಮ್ಮನ್ನು ಬಿಟ್ಟು ಧ್ವಜ ಉದ್ಘಾಟಿಸಿದರು ಎಂಬ ಅಸಮಾಧಾನದಿಂದ ಇಲ್ಲಸಲ್ಲದ ಹೇಳಿಕೆ ಕೊಟ್ಟರು. ಇವರೇ ಕೆರಗೋಡಿನಲ್ಲಿ ಇಂಥ ಪರಿಸ್ಥಿತಿಗೆ ಮೂಲ ಕಾರಣ. ಧ್ವಜ ಉದ್ಘಾಟನೆಯಾಗಿ ಜನವರಿ 27ರ ತನಕವೂ ಹನುಮಧ್ವಜ ಹಾರಾಟವಾಗಿದೆ. ಅಯೋಧ್ಯೆಯಲ್ಲೂ ರಾಮಮಂದಿರ ಉದ್ಘಾಟನೆಯಾಯಿತು. ಪ್ರತಿ ಹಳ್ಳಿಹಳ್ಳಿಯಲ್ಲೂ ರಾಮನ ಪೂಜೆ ನಡೆಯಿತು. ಇದನ್ನು ಸಹಿಸಿಕೊಳ್ಳಲಾಗದ ರವಿ ಗಣಿಗ ಏಕಾಏಕಿ ಬಂದು ಧ್ವಜ ತೆಗಿಸುವ ಕಾರ್ಯಕ್ಕೆ ಮುಂದಾದರು ಎಂದು ಆರೋಪಿಸಿದರು.
ಇದನ್ನೂ ಓದಿ: ಜಿಲ್ಲೆಯ ಜನರ ಮನಪರಿವರ್ತನೆ ಮಾಡಲು ಸಾಧ್ಯವಿಲ್ಲ: ಚಲುವರಾಯಸ್ವಾಮಿ