ಬೆಂಗಳೂರು: ಹೆಚ್ಚು ನೀರು ಬಳಕೆ ಮಾಡುವ ಹಾಗೂ ಫ್ಲೋಟಿಂಗ್ ಜನಸಂಖ್ಯೆ ಹೆಚ್ಚಾಗಿರುವ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನೀರಿನ ಉಳಿತಾಯ ಬಹಳ ಮುಖ್ಯ. ಈ ನಿಟ್ಟಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಸಂಸ್ಕರಿಸಿದ ನೀರು ಬಳಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದರು.
ಗುರುವಾರ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಹೋಟೆಲ್ ಮಾಲೀಕರು ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಸಭೆಯ ನಡೆಸಿ ಮಾತನಾಡಿದ ಅವರು, ನಗರಕ್ಕೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆ ಇದೆ. ನೀರಿನ ಉಳಿತಾಯದಿಂದ ನೀರಿನ ಬಿಲ್ ಕೂಡ ಉಳಿತಾಯವಾಗುತ್ತದೆ. ನೀರು ಉಚಿತ ಎನ್ನುವ ಭಾವನೆಯಿಂದ ಜನರು ಅಮೂಲ್ಯ ಸಂಪತ್ತನ್ನು ಅನಗತ್ಯವಾಗಿ ಪೋಲು ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಕುಡಿಯುವ ಉದ್ದೇಶಕ್ಕೆ ಹೊರತುಪಡಿಸಿ ಸಂಸ್ಕರಿಸಿದ ನೀರನ್ನು ಬಹಳಷ್ಟು ಇತರ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಬೆಂಗಳೂರು ಜಲಮಂಡಳಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಕೈಜೋಡಿಸಲು ಸಿದ್ದವಿದೆ. ಅಗತ್ಯವಿರುವ ಹೋಟೆಲ್ ಗಳಿಗೆ ರಿಯಾಯಿತಿ ದರದಲ್ಲಿ ಸಂಸ್ಕರಿಸಿದ ನೀರನ್ನು ಬಾಗಿಲಿಗೆ ಕೊಡುವ ವ್ಯವಸ್ಥೆ ಮಾಡುತ್ತೇವೆ. ಈ ಬಗ್ಗೆ ಸಂಘದ ಪದಾಧಿಕಾರಿಗಳು ತಮ್ಮ ಸದಸ್ಯರುಗಳಿಗೆ ಮಾಹಿತಿ ನೀಡಬೇಕು. ಝೋನ್ ವೈಸ್ ಸಭೆಯನ್ನು ನಡೆಸಿದ್ದಲ್ಲಿ ನಾನು ಮಾಲೀಕರಿಗೆ ಖುದ್ದು ಮನವಿ ಮಾಡುವುದಾಗಿ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ನೀರು ಉಪಯೋಗವಾಗುವ ಕಡೆಗಳಲ್ಲಿ ನೀರಿನ ಉಳಿತಾಯದ ಸ್ಟಿಕ್ಕರ್ಗಳನ್ನು ಅಳವಡಿಸಲು ಜಲಮಂಡಳಿ ವತಿಯಿಂದ ಸ್ಟಿಕ್ಕರ್ ಒದಗಿಸುವಂತೆ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಾ. ರಾಮ್ ಪ್ರಸಾತ್ ಮನೋಹರ್ ಶೀಘ್ರದಲ್ಲೇ ಜಲಮಂಡಳಿಯಿಂದ ಸ್ಟಿಕ್ಕರ್ ಒದಗಿಸಲಾಗುವುದು ಎಂದರು.
ನೀರು ಉಳಿಸುವ ಹೋಟೆಲ್ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್:ನೀರು ಉಳಿತಾಯ, ಮರುಬಳಕೆ ಹಾಗೂ ಅಂತರ್ಜಲ ಅಭಿವೃದ್ದಿಗೆ ಕೊಡುಗೆ ನೀಡುವಂತಹ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಾಗುವುದು. ಈಗಾಗಲೇ ಮಂಡಳಿಯ ಬಳಿ ನೀರು ಬಳಕೆ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಮುಂದಿನ ತಿಂಗಳುಗಳಲ್ಲಿ ಉಳಿತಾಯದ ಮಾಹಿತಿ ಪಡೆದುಕೊಂಡು ಸ್ಟಾರ್ ರೇಟಿಂಗ್ ನೀಡಲಾಗುವುದು ಎಂದರು.
ಹೋಳಿ ಹಬ್ಬದ ಆಚರಣೆಗೆ ಸ್ವಾಗತ- ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ನಿಷೇಧ: ಈಗಾಗಲೇ ಸೂಚನೆ ನೀಡಿರುವಂತೆ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ನಂತರ ವಾಣಿಜ್ಯ ಉದ್ದೇಶದ ಹೋಳಿ ಆಚರಣೆಗೆ ಕಾವೇರಿ ನೀರು ಹಾಗೂ ಕೊಳವೆ ಬಾವಿಗಳ ನೀರು ಬಳಸುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಹೋಟೆಲ್ ಮಾಲೀಕರು ತಮ್ಮ ಸದಸ್ಯರುಗಳ ಗಮನಕ್ಕೆ ತಂದು ನೀರು ಅನಗತ್ಯ ದುರ್ಬಳಕೆ ಅಗದಂತೆ ಕ್ರಮ ಕೈಗೊಳ್ಳುಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಸೌತ್ ಇಂಡಿಯಾ ಹೋಟೆಲ್ ಮತ್ತು ರೆಸ್ಟೊರೆಂಟ್ ಅಸೋಷಿಯೇಷನ್ ಅಧ್ಯಕ್ಷ ಚಾಮರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.