ಬೆಂಗಳೂರು: ದೇಶದ ದೊಡ್ಡ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳು ಹೊರ ದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಬಿಡಿಭಾಗಗಳ ಸಂಗ್ರಹಣೆಗೆ ದೇಶದಲ್ಲಿರುವ ಎಂಎಸ್‌ಎಂಇ ಗಳಿಗೆ ಆದ್ಯತೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕೇಂದ್ರ ಎಂಎಸ್‌ಎಂಇ ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಭಾರತ ಸರ್ಕಾರ ಎಂಎಸ್‌ಎಂಇ ಮಂತ್ರಾಲಯದ ಸಹಯೋಗದೊಂದಿಗೆ ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ಆಯೋಜಿಸಿರುವ ಎರಡು ದಿನಗಳ "ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಮಾವೇಶ - 2024"ಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಕೈಗಾರಿಕಾ ಕ್ಷೇತ್ರಕ್ಕೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೊಡುಗೆ ಅಪಾರ ಎಂದರು.
ಹೆಚ್ಚಿನ ಉದ್ಯೋಗ ಸೃಷ್ಟಿಗೆ ಎಂಎಸ್‌ಎಂಇಗಳೂ ಕಾರಣ. ಇವುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಬಾರಿಯ ಆಯವ್ಯಯದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ನನಸಾಗುವ ನಿಟ್ಟಿನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸಲಿವೆ ಎಂದು ತಿಳಿಸಿದರು.
ಈ ಕ್ಷೇತ್ರದಲ್ಲಿರುವ ಮಾನವ ಸಂಪನ್ಮೂಲದ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ನಮ್ಮ ದೇಶದ ಜಿಡಿಪಿಯಲ್ಲಿ ಹೆಚ್ಚಿನ ಕೊಡುಗೆ ನೀಡುವುದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ಕೈಗಾರಿಕೆಗಳನ್ನು ಪ್ರಾರಂಭಿಸಲು ಇರುವ ಸಬ್ಸಿಡಿಗಳನ್ನು ಪಡೆಯಲು ಪ್ರತಿ ವರ್ಷ ಸುಮಾರು 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ನಮ್ಮ ಇಲಾಖೆಯಿಂದ ಕೇವಲ 90 ಸಾವಿರ ಜನರಿಗೆ ಮಾತ್ರ ಸಬ್ಸಿಡಿ ನೀಡಲು ಸಾದ್ಯವಾಗುತ್ತಿದೆ. ಇದನ್ನ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ದೇಶದಲ್ಲಿರುವ ದೊಡ್ಡ ಹಾಗೂ ಸಾರ್ವಜನಿಕ ಉದ್ದಿಮೆಗಳು ತಮಗೆ ಬೇಕಾದ ಬಹುತೇಕ ಕಚ್ಚಾವಸ್ತುಗಳನ್ನ ಹೊರ ದೇಶದಿಂದ ಆಮದು ಮಾಡಿಕೊಳ್ಳುತ್ತಿವೆ. ನಮ್ಮ ದೇಶದಲ್ಲಿರುವ ಎಂಎಸ್‌ಎಂಇಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಾರ್ವಜನಿಕ ಉದ್ದಿಮೆಗಳು ದೇಶದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ಕಚ್ಚಾವಸ್ತುಗಳನ್ನು ಖರೀದಿಸುವಂತೆ ಸೂಚನೆ ನೀಡಲು ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ರೀತಿಯಲ್ಲಿ ಆಯಾ ರಾಜ್ಯಗಳು ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಅಗತ್ಯ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿ ಈ ರೀತಿಯ ಸಭೆ ನಡೆಸಲಾಗುತ್ತಿದೆ ಎಂದರು.
ಎಫ್‌ಕೆಸಿಸಿಐ ಅಧ್ಯಕ್ಷರಾದ ರಮೇಶ್ ಚಂದ್ರ ಲಹೋಟಿ ಮಾತನಾಡಿ, ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಅವುಗಳ ಅಭಿವೃದ್ದಿಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯುವಂತಹ ವೇದಿಕೆಯನ್ನು ಒದಗಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಪ್ರೆಸಿಡೆಂಟ್ ಎಲೆಕ್ಟ್ ಎಂ.ಜಿ ಬಾಲಕೃಷ್ಣ, ಹಿರಿಯ ಉಪಾಧ್ಯಕ್ಷ ಉಮಾ ರೆಡ್ಡಿ, ಎಫ್‌ಕೆಸಿಸಿಐ ಇಂಡಸ್ಟ್ರಿ ಕಮಿಟಿ ಅಧ್ಯಕ್ಷ ಅರವಿಂದ ಬುರ್ಜಿ, ಕಾಸಿಯಾ ಅಧ್ಯಕ್ಷರಾದ ಎಂ.ಜಿ ರಾಜಗೋಪಾಲ್, ಪೀಣ್ಯ ಇಂಡಸ್ಟ್ರಿಯ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಉಪಸ್ಥಿತರಿದ್ದರು.
ಓದಿ: ವಿಜಯೇಂದ್ರ ಕೇಳಿದ ಕೂಡಲೇ ನಾನು ರಾಜೀನಾಮೆ ಕೊಡಬೇಕಾ?: ಸಿಎಂ ಸಿದ್ದರಾಮಯ್ಯ - CM Siddaramaiah