ಹುಬ್ಬಳ್ಳಿ/ಧಾರವಾಡ: ಜಿಲ್ಲೆಯಲ್ಲಿ ಇತ್ತಿಚೆಗೆ ಡೆಂಘೀ ಜ್ವರದ ಹಾವಳಿ ಹೆಚ್ಚಾಗಿದ್ದು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯು ಅದರ ನಿಯಂತ್ರಣಕ್ಕೆ ಪ್ರಯತ್ನ ನಡೆಸಿದೆ. ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಳೆಗಾಲ ಆರಂಭ ಆಗಿರುವುದರಿಂದ ಮನೆಯ ಮುಂದೆ, ಮನೆಯ ಮೇಲೆ, ಮನೆಯ ಸುತ್ತ ಎಸೆಯಲಾದ ತೆಂಗಿನ ಚಿಪ್ಪು, ಟಯರ್, ಮುರಿದ ಬಕೆಟ್ ಸೇರಿದಂತೆ ಇತರೇ ಧೀರ್ಘ ದಿನಗಳ ಕಾಲ ನೀರು ಸಂಗ್ರಹವಾಗುವ ಘನ ತ್ಯಾಜ್ಯಗಳನ್ನು ಇಟ್ಟಿದ್ದರೆ ಈಡೀಸ್ ಎಂಬ ಸೊಳ್ಳೆಗಳು ಉದ್ಭವಾಗುತ್ತವೆ. ಈ ಸೊಳ್ಳೆಗಳು ಕಚ್ಚಿದರೆ ಡೆಂಘೀ ಜ್ವರ ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ಘನ ತ್ಯಾಜ್ಯಗಳಲ್ಲಿ ನೀರು ಸಂಗ್ರಹವಾಗದಂತೆ, ತಮ್ಮ ಸುತ್ತಮುತ್ತಲಿನ ಪರಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಚಿಕ್ಕ ಮಕ್ಕಳು, ವೃದ್ಧರು, ಬಾಣಂತಿಯರು, ಗರ್ಭಿಣಿಯರು ಮೈ ಮುಚ್ಚುವ ಬಟ್ಟೆಗಳನ್ನು ಧರಿಸುವುದು, ಹಗಲು ಮತ್ತು ರಾತ್ರಿ ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಬಳಸುವುದರಿಂದ ಡೆಂಘೀ ತಡೆಗಟ್ಟಬಹುದೆಂದು ಪಾಲಿಕೆ ಮುಖ್ಯ ವೈದ್ಯಾಧಿಕಾರಿಗಳು ಹಳೇ ಹುಬ್ಬಳ್ಳಿ, ಎಸ್.ಎಂ. ಕೃಷ್ಣನಗರ ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕೆಲವು ಪ್ರದೇಶಗಳಲ್ಲಿ ಜನರು ಒಡೆದ ಬಕೆಟ್, ಡ್ರಮ್, ಟಯರ್, ಹೀಗೆ.. ನೀರು ಸಂಗ್ರಹವಾಗುವ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಎಸೆದಿದ್ದರು. ಅದರಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿತ್ತು. ಇದನ್ನು ಗಮನಿಸಿದ ಆರೋಗ್ಯ ಅಧಿಕಾರಿಗಳು, ಎಲ್ಲ ವಸ್ತುಗಳನ್ನು ತೆರವು ಮಾಡಿ ಅಲ್ಲಿನ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.
ಅಲ್ಲದೇ ನೀರು ಸಂಗ್ರಹವಾದ ವಸ್ತುಗಳನ್ನು ತೆರವು ಕೂಡ ಮಾಡಿದ್ದಾರೆ. ಈಗ ಮಳೆಗಾಲ ಆರಂಭವಾಗಿದೆ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಡೆಂಘೀ ಜ್ವರದ ಹಾವಳಿ ಹೆಚ್ಚಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಮನೆ ಸುತ್ತಲಿನ ಪರಿಸರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಡೆಂಘೀ ಹಾವಳಿ ತಡೆಗೆ ಈಗಾಗಲೇ ಮಹಾನಗರ ಪಾಲಿಕೆಯ ಅವಿರತವಾಗಿ ಶ್ರಮಿಸುತ್ತಿದೆ. ಪ್ರತಿ ವಾರ್ಡ್ಗೆ ಫಾಗಿಂಗ್ ಮಷಿನ್ ಮೂಲಕ ಫಾಗಿಂಗ್ ಮಾಡಲಾಗುತ್ತಿದೆ. ಇದರ ಮಧ್ಯೆ ಸಾರ್ವಜನಿಕರು ಕೂಡ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಡೆಂಘೀಯಿಂದ ಮಗು ಸಾವು: ಧಾರವಾಡದ ಮುಮ್ಮಿಗಟ್ಟಿ ಗ್ರಾಮಕ್ಕೆ ಡಿಹೆಚ್ಒ ಭೇಟಿ - Dengue Cases
ವಾರದ ಹಿಂದೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಈ ರೋಗಕ್ಕೆ ಬಲಿಯಾದ ವರದಿಯಾಗಿತ್ತು. ಗ್ರಾಮಕ್ಕೆ ಭೇಟಿ ನೀಡಿದ್ದ ಡಿಹೆಚ್ಒ ಡಾ.ಶಶಿಪಾಟೀಲ್, ಪರಿಶೀಲನೆ ನಡೆಸಿದ್ದರು. ಸದ್ಯ ಹಲವರು ಡೆಂಘೀ ಜ್ವರದಿಂದ ಬಳಲುತ್ತಿರುವ ಮಾಹಿತಿ ಲಭ್ಯವಾಗಿದ್ದರಿಂದ ಅಧಿಕಾರಿಗಳು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.