ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿಧಿಸಿರುವ ಕಡ್ಡಾಯ ವಸ್ತ್ರಸಂಹಿತೆ ಸೇರಿದಂತೆ ಮತ್ತಿತರ ನಿಯಮಗಳಿವೆ. ಈ ನಿಯಮಗಳನ್ನು ಮರೆತು ಇಂದು ಪರೀಕ್ಷೆ ಬರೆಯಲು ಬಂದವರಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಬಿಸಿ ಮುಟ್ಟಿಸಿದ್ದಾರೆ.
ನಗರದ ಸೆಂಟ್ ಜೋಸೆಫ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಫುಲ್ ಶರ್ಟ್ ಧರಿಸಿ ಬಂದಿದ್ದ ಅಭ್ಯರ್ಥಿಯೊಬ್ಬರು, "ಶರ್ಟ್ ತೋಳು ಕತ್ತರಿಸುವುದಾದರೆ ಪರೀಕ್ಷೆಯನ್ನೇ ಬರೆಯುವುದಿಲ್ಲ" ಎಂದು ಹಠ ಹಿಡಿದ ಪ್ರಸಂಗ ನಡೆಯಿತು. ಕೇಂದ್ರದ ಸಿಬ್ಬಂದಿಯೊಂದಿಗೆ ಸಾಕಷ್ಟು ವಾಗ್ವಾದ ನಡೆಸಿದ ಅಭ್ಯರ್ಥಿ, ಬಳಿಕ ಶರ್ಟ್ ತೋಳು ಕತ್ತರಿಸಲು ಸಮ್ಮತಿಸಿ ಪರೀಕ್ಷೆಗೆ ಹಾಜರಾದರು.
ಅಭ್ಯರ್ಥಿಯ ಕೈಗೆ ಗಾಯ: ಪರೀಕ್ಷೆ ಎದುರಿಸಲು ಗದಗದಿಂದ ಬೆಂಗಳೂರಿಗೆ ಬಂದಿದ್ದ ಅಭ್ಯರ್ಥಿಯೊಬ್ಬರ ಕೈಯಲ್ಲಿ ಧರಿಸಿದ್ದ ಕಡಗ ತೆಗೆಸಲು ಪರೀಕ್ಷಾ ಕೇಂದ್ರದ ಸಿಬ್ಬಂದಿ ಹರಸಾಹಸಪಟ್ಟರು. ಎರಡು ವರ್ಷದ ಹಿಂದೆ ಕೈಗೆ ಹಾಕಿದ್ದ ಕಡಗ ತೆಗೆಯಲು ಅಭ್ಯರ್ಥಿ ಪರದಾಟ ನಡೆಸಿದರು. ಬಳಿಕ ಶಾಂಪೂ ಬಳಸಿ ಕಡಗ ತೆಗೆಯಲಾಯಿತು. ಈ ವೇಳೆ ಆತನ ಕೈಗೆ ತರಚಿದ ಗಾಯಗಳಾದವು.
ಪಿಎಸ್ಐ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕೆಲವು ಕಡ್ಡಾಯ ನಿಯಮಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಧಿಸಿದೆ. ಪುರುಷ ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್ ಧರಿಸಲು ಅವಕಾಶವಿಲ್ಲ. ಅದರ ಬದಲು ಅರ್ಧ ತೋಳಿನ ಶರ್ಟ್ ಧರಿಸಬೇಕು. ಸಾಧ್ಯವಾದಷ್ಟು ಕಾಲರ್‌ರಹಿತ ಶರ್ಟ್ ಧರಿಸಬೇಕು. ಜೇಬು ಇಲ್ಲದಿರುವ/ ಕಡಿಮೆ ಜೇಬುಗಳಿರುವ ಪ್ಯಾಂಟ್ ಧರಿಸಬೇಕು. ಆದರೆ ಕುರ್ತಾ, ಪೈಜಾಮಾ, ಜೀನ್ಸ್ ಪ್ಯಾಂಟ್ ಧರಿಸಲು ಅನುಮತಿಯಿಲ್ಲ. ಅಲ್ಲದೇ ಧರಿಸುವ ಬಟ್ಟೆಗಳು ಹಗುರವಾಗಿರಬೇಕು. ಅಂದರೆ, ಜಿಪ್ ಪಾಕೆಟ್‌ಗಳು, ದೊಡ್ಡ ಬಟನ್‌ಗಳು, ವಿಸ್ತಾರವಾದ ಕಸೂತಿ ಇರುವ ಬಟ್ಟೆಯಲ್ಲಿ ಇರಬಾರದು. ಪರೀಕ್ಷಾ ಹಾಲ್‌ನೊಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ಯಾಂಡಲ್/ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸಬೇಕು. ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣ ಧರಿಸುವುದು/ ಕಿವಿಯೋಲೆ, ಉಂಗುರ, ಕಡಗಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು/ಬಟನ್‌ಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್ ಧರಿಸಬಾರದು. ಎತ್ತರವಾದ ಹಿಮ್ಮಡಿಯ ಮತ್ತು ದಪ್ಪವಾದ ಅಡಿಭಾಗ ಹೊಂದಿರುವ ಶೂ/ಚಪ್ಪಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿ ಧರಿಸಬೇಕು. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್, ಪೆನ್ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂತ್ ಡಿವೈಸ್, ವಾಚ್ ನಿಷೇಧಿಸಲಾಗಿದೆ. ಕುಡಿಯುವ ನೀರಿನ ಬಾಟಲಿ, ತಿಂಡಿ, ತಿನಿಸುಗಳನ್ನು ತರುವುದು, ತಿನ್ನುವುದನ್ನು ನಿಷೇಧಿಸಲಾಗಿದೆ. ತಲೆ ಮೇಲೆ ಟೋಪಿ, ಮುಖಕ್ಕೆ ಮಾಸ್ಕ್ ಧರಿಸಲು ಅವಕಾಶವಿಲ್ಲ ಎಂದು ಮೊದಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಪಿಎಸ್ಐ ಮರು ಪರೀಕ್ಷೆಗೆ ಆಗಮಿಸಿದ ಗರ್ಭಿಣಿ: ಸೂಕ್ತ ವ್ಯವಸ್ಥೆ ಕಲ್ಪಿಸಿದ ಪರೀಕ್ಷಾ ಸಿಬ್ಬಂದಿ