ಬೆಳಗಾವಿ: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ನಗರದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಭವನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಆರೋಪಿ ಫಯಾಜ್ ಅಣಕು ಪ್ರತಿಕೃತಿಗೆ ನೇಣು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು.
ಶಾಸಕ ಆಸೀಫ್ ಸೇಠ್ ಮಾತನಾಡಿ, ಬಿಜೆಪಿ ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡಬಾರದು. ಅವರ ಕುಟುಂಬಸ್ಥರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ಗಮನಿಸಬೇಕು. ನೇಹಾ ಸಾವಿಗೆ ನ್ಯಾಯ ಸಿಗಬೇಕು. ಕೊಲೆ ಮಾಡಿದ ಆರೋಪಿಗೆ ಶಿಕ್ಷೆ ಆಗಬೇಕು. ಅದೇ ರೀತಿ ಮಾರ್ಚ್ 31ರಂದು ರುಕ್ಸಾನಾ ಎಂಬ ಯುವತಿಯನ್ನು ಪ್ರದೀಪ ಎನ್ನುವ ವ್ಯಕ್ತಿ ಕೊಲೆ ಮಾಡಿದ್ದ. ಆಗ ರಾಜಕೀಯ ಮಾಡಲಿಲ್ಲ. ಕೊಲೆ ಮಾಡುವವರು ಥರ್ಡ್ ಕ್ಲಾಸ್ ಕ್ರಿಮಿನಲ್ ಮನಸ್ಥಿತಿಯವರು. ಎಲ್ಲರ ವಿರುದ್ಧ ಕ್ರಮ ಆಗಲಿ. ಈಗ ನಾವು ಪ್ರತಿಭಟನೆ ಮಾಡ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮನವಿ ಮಾಡುತ್ತಿದ್ದೇವೆ. ಸಾವಿನಲ್ಲಿ ರಾಜಕೀಯ ನಾವು ಮಾಡ್ತಿಲ್ಲ. ಯಾವುದೇ ಧರ್ಮ, ಜಾತಿ ಏನೇ ಇರಲಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ್ ಮಾತನಾಡಿ, ಚುನಾವಣೆ ಬಂದಾಗ ಹೆಣಗಳ ಮೇಲೆ, ಧರ್ಮದ ಮೇಲೆ ರಾಜಕಾರಣ ಮಾಡುವುದು ಬಿಜೆಪಿಯವರ ಚಾಳಿ. ಚುನಾವಣೆ ಬಂದಾಗ ಅಭಿವೃದ್ಧಿ ಬಗ್ಗೆ, ಯಾವುದಾದರೂ ಹಗರಣದ ಬಗ್ಗೆ ರಾಜಕಾರಣ ಮಾಡಬೇಕು. ಆದರೆ ಅವರಿಗೆ ಹೇಳಿಕೊಳ್ಳಲು ಏನೂ ಇಲ್ಲ. ಹೀಗಾಗಿ ಈ ರೀತಿ ಮಾಡ್ತಿದ್ದಾರೆ. ನಾವು ಅಭಿವೃದ್ಧಿ ಮಾಡಿದ್ದೇವೆ, ಹೇಳಿಕೊಳ್ಳುತ್ತಿದ್ದೇವೆ. ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ಅವರು ರಾಜಕಾರಣ ಮಾಡ್ತಿದ್ದಾರೆ. ಕಾನೂನಿಗೆ ತಿದ್ದುಪಡಿ ಮಾಡಿ ನೇರವಾಗಿ ಗುಂಡಿಟ್ಟು ಕೊಲ್ಲುವ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಮುಖಂಡರಾದ ಆರ್.ಪಿ.ಪಾಟೀಲ, ಪ್ರದೀಪ ಜೆ. ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: 'ವೆರಿ ಸಾರಿ, ನಿಮ್ಮೊಂದಿಗೆ ನಾವಿದ್ದೇವೆ': ಫೋನ್ ಮಾಡಿ ನೇಹಾ ತಂದೆಗೆ ಧೈರ್ಯ ತುಂಬಿದ ಸಿಎಂ - Neha Hiremath Murder Case