ಬಾಗಲಕೋಟೆ: ಮಠಾಧಿಪತಿ ನೇಮಕ ವಿಚಾರ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ವಿರುದ್ಧ ಸ್ಥಳೀಯ ಭಕ್ತರ ಗುಂಪೊಂದು ಪ್ರತಿಭಟನೆ ನಡೆಸಿದೆ. ತಾಲೂಕಿನ ಉದಗಟ್ಟಿ ಗ್ರಾಮದಲ್ಲಿನ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆಂದು ರಂಭಾಪುರಿ ಶ್ರೀಗಳು ಹೊರಟಿದ್ದ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಟನಾನಿರತರು ಶ್ರೀಗಳ ಕಾರಿನತ್ತ ಚಪ್ಪಲಿ ತೂರಿದ್ದು ಕಂಡು ಬಂದಿದೆ.
ಗ್ರಾಮದ ಪ್ರವಾಸಿ ಮಂದಿರದ ಬಳಿ ಸೇರಿದ್ದ ಪ್ರತಿಭಟನಾಕಾರರು, ರಂಭಾಪುರಿ ಶ್ರೀಗಳು ಅದೇ ಮಾರ್ಗದಲ್ಲಿ ಸಂಚರಿಸುವಾಗ ಪ್ರತಿಭಟಿಸಿದರು. ಅದೇ ಮಾರ್ಗದಲ್ಲಿ ಉದಗಟ್ಟಿ ಗ್ರಾಮಸ್ಥರು ಶ್ರೀಗಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಮುಂದಾದರೆ, ಪ್ರತಿಭಟನಾನಿರತ ಭಕ್ತರು ಸ್ವಾಮೀಜಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇದರಿಂದ ಕೆಲ ಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಗುರುಲಿಂಗೇಶ್ವರ ಮಠದ ಪೀಠಾಧಿಪತಿಯ ನೇಮಕ ವಿಚಾರ ಸಂಬಂಧ ಕಳೆದ 10 ವರ್ಷಗಳಿಂದ ಮಠದ ಸ್ಥಳೀಯ ಭಕ್ತರ ಬಣ ಹಾಗೂ ರಂಭಾಪುರಿ ಶ್ರೀಗಳ ನಡುವಿನ ವ್ಯಾಜ್ಯವೇ ಪ್ರತಿಭಟನೆಗೆ ಕಾರಣ ಎನ್ನಲಾಗುತ್ತಿದೆ. ತಮ್ಮ ಒಪ್ಪಿಗೆ ಇಲ್ಲದಿದ್ದರೂ ಗಂಗಾಧರ ಸ್ವಾಮೀಜಿಯವರನ್ನು ರಂಭಾಪುರಿ ಶ್ರೀಗಳು ಮಠಕ್ಕೆ ನೇಮಿಸಿದ್ದಾರೆ. ಹಾಗೂ ನ್ಯಾಯಾಲಯದ ಆದೇಶ ಧಿಕ್ಕರಿಸಲಾಗಿದೆ ಎಂದು ಪ್ರತಿಭಟನಾನಿರತ ಭಕ್ತರು ಆರೋಪಿಸಿದ್ದಾರೆ.
ಇದನ್ನೂ ಓದಿ; ಜೆರೋಸಾ ಶಾಲೆಯ ಪ್ರಕರಣದ ವಿಶೇಷ ತನಿಖೆಗೆ ಐಎಎಸ್ ಅಧಿಕಾರಿ ನೇಮಕ: ದಿನೇಶ್ ಗುಂಡೂರಾವ್