ಬೆಂಗಳೂರು: ಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಗಣಿ ಗುತ್ತಿಗೆಗೆ ಹೆಚ್ಡಿಕೆನೇ ಸಹಿ ಹಾಕಿದ್ದಾರೆ. ಈ ಪ್ರಕರಣದ ವಿರುದ್ಧ ಆ.31ರಂದು ಕಾಂಗ್ರೆಸ್ ಪ್ರತಿಭಟನೆ ಮಾಡಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ವಿರುದ್ಧದ ಅಕ್ರಮ ಗಣಿ ಗುತ್ತಿಗೆ ಆರೋಪ ಸಂಬಂಧ ದಾಖಲೆಗಳೊಂದಿಗೆ ವಿವರಿಸಿದರು. ಸಾಯಿ ವೆಂಕಟೇಶ್ವರ ಮಿನರಲ್ಸ್ಗೆ 550 ಎಕರೆ ಗುತ್ತಿಗೆ ನೀಡಿದ್ದಾರೆ. ನೋಂದಣಿಯೇ ಆಗದ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ. ನೀವೇ (ಹೆಚ್ಡಿಕೆ) ಗುತ್ತಿಗೆಗೆ ಕೊಟ್ಟಿರುವುದು, ನೀವೇ ಸಹಿ ಹಾಕಿ ಕೊಟ್ಟಿರುವ ದಾಖಲೆ ಇಲ್ಲಿದೆ. ಯಾಕೆ ನೀವು ಸಹಿ ಪೋರ್ಜರಿ ಅಂತ ಹೇಳ್ತೀರ?. ಬೇಕಾದಷ್ಟು ಪೊಲೀಸರು ಇದ್ದಾರೆ. ಕೇಂದ್ರದಲ್ಲಿ ನಿಮ್ಮ ಆಪ್ತರು ಇದ್ದಾರೆ. ಯಾಕೆ ಸುಮ್ಮನಿದ್ದೀರಿ ಮಾತನಾಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ಡಿಸಿಎಂ ಸವಾಲು ಹಾಕಿದರು.
ಈ ಪ್ರಕರಣದ ವಿರುದ್ಧ ನಾವು ಆ.31ರಂದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡ್ತೇವೆ. ನಮ್ಮ ಎಲ್ಲ ಸಚಿವರು, ಶಾಸಕರು ಪ್ರತಿಭಟನೆ ಮಾಡ್ತೇವೆ. ಘನವೆತ್ತ ರಾಜ್ಯಪಾಲರಿಗೆ ಮನವಿ ಮಾಡ್ತೇವೆ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಅಂತ ಬರೆದಿದ್ದಾರೆ. ಅಧಿಕಾರಿಗಳು ಅಂದು ಬರೆದಿದ್ದಾರಲ್ಲ. ಯಾಕೆ ಸುಮ್ಮನಿದ್ದೀರ?. ನಿಮ್ಮ ಸಹಿ ತಾನೇ ಫೋರ್ಜರಿ ಆಗಿರೋದು. ಯಾಕೆ ಇಲ್ಲಿಯವರೆಗೆ ಸುಮ್ಮನಿದ್ದೀರ?. ಫೋರ್ಜರಿ ಮಾಡಿದ್ದಾರೆ ಅಂತ ದೂರು ಕೊಡಿ. ಯಾಕೆ ಇನ್ನೂ ದೂರು ಕೊಡ್ತಿಲ್ಲ. ಚನ್ನಪಟ್ಟಣ, ಮಂಡ್ಯ, ದೆಹಲಿ, ಮೈಸೂರು ಎಲ್ಲಾದ್ರೂ ದೂರು ಕೊಡಿ. ದೆಹಲಿಯಲ್ಲೇ ನೀವು ದೂರು ಕೊಡಿ. ವಿಧಾನಸೌಧದಲ್ಲಾದ್ರೂ ದೂರು ಕೊಡಿ. ಯಾಕೆ ದೂರು ಕೊಡೋದಕ್ಕೆ ಮೀನಾಮೇಷ? ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ಅನೇಕ ಪ್ರಕರಣಗಳು ರಾಜ್ಯದಲ್ಲಿ ಆಗಿವೆ. ನಾಲ್ಕೈದು ಪ್ರಕರಣ ರಾಜ್ಯಪಾಲರಿಗೆ ಕಳಿಸಲಾಗಿದೆ. ತನಿಖೆಯಾಗಿ ಚಾರ್ಜ್ ಶೀಟ್ ಆಗಿರುವ ಪ್ರಕರಣಗಳು ರಾಜ್ಯಪಾಲರ ಮುಂದಿವೆ. ಮಾಜಿ ಸಚಿವೆ ಜೊಲ್ಲೆಯವರ ಮೇಲೆ ಪ್ರಾಸಿಕ್ಯೂಶನ್ಗೆ ಭೀಮಪ್ಪ ಗುಂಡಪ್ಪ ಗಡಾದ್ ಅನುಮತಿ ಕೇಳಿದ್ದರು. ಮಾಜಿ ಸಚಿವ ನಿರಾಣಿ ಮೇಲೂ ಪ್ರಾಸಿಕ್ಯೂಶನ್ಗೆ ಅನುಮತಿ ಕೇಳಲಾಗಿದೆ. ಇವೆಲ್ಲವೂ ತನಿಖೆಯಾಗಿರುವ ಕೇಸ್ಗಳು. ಗೌರವಾನ್ವಿತ ಸ್ಟೀಲ್ ಅಂಡ್ ಇಂಡಸ್ಟ್ರೀಸ್ ಮಿನಿಸ್ಟರ್ ಹೇಳ್ತಾರೆ, ನಾನು ಸಹಿಯನ್ನೇ ಮಾಡಿಲ್ಲ ಅಂತಾರೆ. ಕೇಸ್ ತನಿಖೆಯಾಗಿ 10 ವರ್ಷ ಆಗಿದೆ. ಬೇಲ್ ತೆಗೆದುಕೊಂಡಿದ್ದೇನೆ ಅಂತಾನೂ ಹೇಳಿದ್ದಾರೆ. ಅವರಂತೆ ನಾನು ಹುಡುಕೋಕೆ ಹೋಗಿಲ್ಲ. ನಿಮ್ಮ ಸಹಿಯನ್ನು ಯಾರು ಫೋರ್ಜರಿ ಮಾಡಿದ್ದಾರೆ. ಯಾಕೆ ಫೋರ್ಜರಿ ಮಾಡಿದ್ದಾರೆ ಅಂತ ಕೇಸ್ ಹಾಕಿಲ್ಲ. ಮುಖ್ಯಮಂತ್ರಿ ಸಹಿಯನ್ನೇ ಫೋರ್ಜರಿ ಮಾಡಿದ್ರೆ, ಅಂತವರ ಮೇಲೆ ಕ್ರಮ ಆಗಬೇಕಲ್ವೇ. ಯಾಕೆ ನೀವು ಅದರ ಬಗ್ಗೆ ದೂರು ಕೊಟ್ಟಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕೇಳಿದರು.