ಬಳ್ಳಾರಿ: ಪಶ್ಚಿಮ ಬಂಗಾಳ ಮೂಲದ ಐವಿ ಫ್ಲ್ಯೂಯೆಡ್ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗುವುದು. ಬಾಣಂತಿಯರ ಸರಣಿ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಆಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾಸ್ಪತ್ರೆಯ ಎದುರು ಶ್ರೀರಾಮುಲು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಮನವಿ ಆಲಿಸಿ, ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಅವರು, ಬಾಣಂತಿಯರ ದಿಢೀರ್ ಸಾವಾಗಿದೆ. ವೈದ್ಯರ ಮೂಲಕ ವರದಿ ಕೇಳಿದ್ವಿ. ಐವಿ ಫ್ಲ್ಯೂಯೆಡ್ ಬಗ್ಗೆ ಅನುಮಾನವಿತ್ತು, ಲ್ಯಾಬ್‌ನಲ್ಲಿ ಟೆಸ್ಟ್ ಮಾಡಲಾಗಿತ್ತು. ಲ್ಯಾಬ್‌ನಲ್ಲಿ ಟೆಸ್ಟ್ ಬಳಿಕ ಐವಿ ಬಳಕೆ ನಿಷೇಧ ಮಾಡಲಾಗಿತ್ತು. ಐವಿ ಫ್ಲ್ಯೂಯೆಡ್ ಸರಿಯಿದೆ ಅಂತಾ ಕೇಂದ್ರ ಲ್ಯಾಬ್ ರಿಪೋರ್ಟ್ ನೀಡಿದೆ. ಐವಿ ಫ್ಲ್ಯೂಯೆಡ್ ಬಗ್ಗೆ ನಮಗೂ ಹಿಂಜರಿಕೆಯಿತ್ತು, ಈ ಬಗ್ಗೆ ಸಂಶಯವಿದೆ. ಈ ಪ್ರಕರಣ ಬಂದ ತಕ್ಷಣ ಎಲ್ಲಾ ಆಸ್ಪತ್ರೆಯಲ್ಲಿ ಬಳಕೆ ಸ್ಥಗಿತಗೊಳಿಸಿದ್ದೇವೆ. 327 ಬಾಣಂತಿಯರ ಸಾವು ಆಡಿಟ್ ಆಗಲಿದೆ, ಸತ್ಯ ಗೊತ್ತಾಗಬೇಕಿದೆ ಎಂದರು.
ಸಿಎಂ ಹಾಗೂ ನಾನು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ. ವಿರೋಧ ಪಕ್ಷವಾಗಿ ನೀವು ಪ್ರತಿಭಟನೆ ಮಾಡುವುದು ಸರಿಯಿದೆ. ಇದು ಭಾವನಾತ್ಮಕ, ಮಾನವೀಯತೆ ವಿಚಾರ. ಸದನದಲ್ಲಿ ಈ ವಿಚಾರ ಚರ್ಚೆ ಮಾಡುತ್ತೇವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನೀವು ಪ್ರತಿಭಟನೆ ಹಿಂಪಡೆಯಬೇಕು. ಪರಿಹಾರ ವಿಚಾರವಾಗಿ ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆರೋಗ್ಯ ವ್ಯವಸ್ಥೆ ಸುಧಾರಣೆ ಆಗಬೇಕು: ಇದಕ್ಕೂ ಮುನ್ನ ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಬಾಣಂತಿಯರ ಸಾವು ನಿಲ್ಲಬೇಕು. ಆರೋಗ್ಯ ಸಚಿವರು ರಾಜೀನಾಮೆ ಕೊಡಬೇಕಿಲ್ಲ. ಆದರೆ ಆರೋಗ್ಯ ವ್ಯವಸ್ಥೆ ಸುಧಾರಣೆ ಆಗಬೇಕು. ರಾಜ್ಯದಲ್ಲಿ ನೂರಾರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಗುಣಮಟ್ಟದ ಔಷಧಿ ಖರೀದಿ ಆಗಬೇಕು. ಪಶ್ಚಿಮ ಬಂಗಾಳದ ಕಂಪನಿಯ ಫ್ಲ್ಯೂಯೆಡ್ನಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಇದು ವೈದ್ಯರ ನಿರ್ಲಕ್ಷ್ಯ ಅಲ್ಲ. ಸರ್ಕಾರದ ಲೋಪ ಎಂದು ದೂರಿದರು.
ಈ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನಿಂದ ಜನ ಭಯಬಿದ್ದು ಇಲ್ಲಿಗೆ ಬರದಂತಾಗಿದೆ. ಎಷ್ಟು ಬಾಣಂತಿಯರು ಸತ್ತಿದ್ದಾರೆ. ಅವರ ಮರಣೋತ್ತರ ಪರೀಕ್ಷಾ ವರದಿ ಎಲ್ಲಿ?. ಬಡ ಜನರಿಗೆ ವಿಶ್ವಾಸ ತುಂಬಲು ಎಸಗಿರುವ ತಪ್ಪನ್ನು ಸರಿಯಾದ ಕ್ರಮದಲ್ಲಿ ಪತ್ತೆಹಚ್ಚಿ ಕ್ರಮ ಜರುಗಿಸಬೇಕು. ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಆಗಬೇಕು. ಸತ್ತಿರುವ ಬಾಣಂತಿಯರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಶ್ರೀರಾಮುಲು ಆಗ್ರಹಿಸಿದರು.
ಈ ವೇಳೆ ಶಾಸಕ ಗಣೇಶ್, ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: ಬಾಣಂತಿಯರ ಮರಣ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ