ಬೆಂಗಳೂರು: ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಲಾಗಿದ್ದು, ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆನೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ 10 ಸಚಿವರೊಂದಿಗೆ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಮ್ಮ ಸಿಎಂ ಆಗಿದ್ದಾರೆ. ಅವರ ನೇತೃತ್ವದಲ್ಲಿ ಸರ್ಕಾರ ನಡೆಯಲಿದೆ. ರಾಜ್ಯಪಾಲರು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕವಾದ ಪತ್ರ ಕಳುಹಿಸಿದ್ದಾರೆ ಎಂದು ದೂರಿದರು.
ರಾಜ್ಯಪಾಲರು 26.7.2024ರಂದು ಕಳುಹಿಸಿರುವ ನೋಟಿಸ್ ಸಂಬಂಧ ಏ.1ರಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ದೂರಿನಲ್ಲಿ ತಿರುಳು ಇಲ್ಲ. ಇದು ರಾಜಕೀಯ ಪಿತೂರಿ. ಮುಡಾ ಪ್ರಕರಣದಲ್ಲಿ ಯಾವುದೇ ಲೋಪದೋಷ ಆಗಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಆದರೆ ಇಂದು ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಪತ್ರ ಕಳುಹಿಸಿದ್ದಾರೆ ಎಂದರು.
ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಬೇಕಾದರೆ ಪ್ರಕರಣ ಸಂಬಂಧ ತನಿಖೆ ನಡೆಸಿ, ತನಿಖಾ ರಿಪೋರ್ಟ್ ಬಂದಿದ್ದರೆ ಅನುಮತಿ ನೀಡಬಹುದು. ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತದಲ್ಲಿ ತನಿಖೆ ನಡೆದಿದೆ. ಅವರ ವಿರುದ್ಧ ಲೋಕಾಯುಕ್ತ, ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಮನವಿ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಮತ್ತು ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಲಾಗಿತ್ತು. ಅದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ ಈ ಪ್ರಕರಣದಲ್ಲಿ ದೂರು ಬಂದ ಒಂದೇ ದಿನದಲ್ಲಿ ರಾಜ್ಯಪಾಲರು ನೋಟಿಸ್ ಕಳುಹಿಸಿದ್ದಾರೆ ಎಂದು ಟೀಕಿಸಿದರು.
ಇಡೀ ಸಚಿವ ಸಂಪುಟ ಸಿಎಂ ಬೆನ್ನೆಗೆ ನಿಂತಿದೆ: ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 136 ಶಾಸಕರ ಬಲದ ವಿರುದ್ಧದ ತೀರ್ಮಾನವಾಗಿದೆ. ರಾಜ್ಯದ ಜನರ ವಿರುದ್ಧದ ತೀರ್ಮಾನವಾಗಿದೆ. ರಾಜ್ಯಪಾಲರು ಕಚೇರಿ ದುರ್ಬಳಕೆ ಮಾಡುತ್ತಿದ್ದಾರೆ. ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರ ಸಚಿವರಾದ ಜೋಶಿ, ಕುಮಾರಸ್ವಾಮಿ ಈ ಸರ್ಕಾರ ಬೀಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಪೂರಕವಾಗಿ ಈ ಪೂರ್ವಾನುಮತಿ ನೀಡಲಾಗಿದೆ. ಇಡೀ ಸಂಪುಟ ಸಚಿವರು ಸಿಎಂ ಬೆನ್ನಿಗೆ ನಿಂತಿದ್ದಾರೆ. ಪಕ್ಷವೂ ಸಿಎಂ ಬೆನ್ನಿಗೆ ನಿಂತಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಅಹಿಂದ ನಾಯಕ ಸಿಎಂ ಆಗಿರುವುದನ್ನು ಸಹಿಸಲಾಗದೆ ಷಡ್ಯಂತ್ರ: ಏನೂ ಇಲ್ಲದ ಪ್ರಕರಣದ ಮೇಲೆ ಕೇಸ್ ಮಾಡಿದ್ದಾರೆ. ಕಾನೂನು ರೀತಿಯ ಹೋರಾಟ ಮಾಡುತ್ತೇವೆ. ರಾಜಕೀಯವಾಗಿಯೂ ಹೋರಾಟ ಮಾಡುತ್ತೇವೆ. ಈ ಪ್ರಾಸಿಕ್ಯೂಷನ್ ಕಾನೂನು ವಿರುದ್ಧವಾಗಿದೆ. ಅಹಿಂದ ನಾಯಕ ಸಿಎಂ ಆಗಿರುವುದನ್ನು ಸಹಿಸಲಾಗದೆ ಈ ಷಡ್ಯಂತ್ರ ಮಾಡಲಾಗಿದೆ. ನಮಗೆ ಕಾನೂನಿನಲ್ಲಿ ಗೌರವ ಇದೆ. ಇದು ಕಾನೂನು ಹಾಗೂ ರಾಜಕೀಯ ಹೋರಾಟವಾಗಿದೆ. ಬಡವರಿಗೆ ಸಹಾಯ ಮಾಡುತ್ತಿದ್ದೇವೆ. ಅದರ ವಿರುದ್ಧ ಈ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಸರ್ಕಾರವನ್ನು ತೆಗೆಯಲು ಸಾಧ್ಯವಿಲ್ಲ ಎಂದು ಸಾಮೂಹಿಕವಾಗಿ ಹೇಳುತ್ತಿದ್ದೇವೆ. ಇತರೆ ರಾಜ್ಯಗಳಲ್ಲೂ ಸಿಎಂರನ್ನು, ಸರ್ಕಾರ ಪತನ ಮಾಡಲು ಯತ್ನಿಸಲಾಗುತ್ತಿದೆ. ನಾವು ಒಗ್ಗಟ್ಟಾಗಿ ಇದ್ದೇವೆ. ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದರು.
ಇದು ಕಾನೂನು ಬಾಹಿರ ಪ್ರಾಸಿಕ್ಯೂಷನ್ ಅನುಮತಿ: ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ಆಗಬೇಕು. ಬಳಿಕ ಪೂರ್ವಾನುಮತಿಗೆ ಮನವಿ ಮಾಡಬೇಕು. ಸೆ.3, 2021ರಂದು ಕೇಂದ್ರ ಸರ್ಕಾರದಿಂದ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದಾರೆ. ಸೆಕ್ಷನ್ 17Aರಂತೆ ಎಸ್ಒಪಿ ಹೊರಡಿಸಿದ್ದಾರೆ. ಕೇಂದ್ರ ಸರ್ಕಾರವೇ ಎಲ್ಲಾ ರಾಜ್ಯಗಳಿಗೆ ಮಾರ್ಗಸೂಚಿ ಹೊರಡಿಸಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ಪೊಲೀಸರು ತನಿಖೆ ಮಾಡುವ ಹಾಗಿಲ್ಲ.
17A ಇರುವುದೇ ಪೊಲೀಸ್ ಅಧಿಕಾರಿಗೋಸ್ಕರ. ಈ ಪ್ರಕರಣದಲ್ಲಿ ಯಾವ ಪೊಲೀಸ್ ಅಧಿಕಾರಿ ತನಿಖೆಗೆ ಅನುಮತಿ ಕೋರಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ. ತನಿಖಾ ವರದಿ ನೀಡಿಲ್ಲ. ಇದು ಕಾನೂನುಬಾಹಿರ ಪ್ರಾಸಿಕ್ಯೂಷನ್ ಅನುಮತಿ. ರಾಜ್ಯಪಾಲರ ಕಚೇರಿ ಗವರ್ನರ್ ಕಚೇರಿಯಾಗಿ ಉಳಿದಿಲ್ಲ. ಈ ಆದೇಶ ಕಾನೂನು ಬಾಹಿರ ಆದೇಶ. ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸಲಾಗುತ್ತಿದೆ. ಸುಳ್ಳು ಕೇಸ್ ಹಾಕಲು ಯತ್ನಿಸಿದರು. ಈಗ ರಾಜ್ಯಪಾಲರನ್ನು ಕೈಗೊಂಬೆಯಾಗಿ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಜನರ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಕನ್ನಡಿಗರ ಸಂಕೇತವಾಗಿದ್ದಾರೆ. ಅವರನ್ನು ಕೆಳಗಿಳಿಸಲು ಯತ್ನಿಸಲಾಗುತ್ತಿದೆ ಎಂದು ಡಿಸಿಎಂ ಆರೋಪಿಸಿದರು.
ಕಾನೂನು ಹೋರಾಟ ಮಾಡುತ್ತೇವೆ: ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ಈ ತರಹದ ತೀರ್ಮಾನ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲ ಮಾಡುತ್ತದೆ. ರಾಜ್ಯಪಾಲರ ಕಚೇರಿಯನ್ನು ರಾಜಕೀಯಕ್ಕೆ ಬಳಸಿದರೆ ಜನರ ವಿಶ್ವಾಸ ಕುಂದಲಿದೆ. ಬಿಜೆಪಿ ನಾಯಕರು ಸರ್ಕಾರ ಪತನದ ಬಗ್ಗೆ ಹೇಳಿಕೆ ನೀಡುತ್ತಿದ್ದರು. ಅದಕ್ಕೆಲ್ಲದಕ್ಕೂ ಹಿನ್ನೆಲೆ ಏನು ಎಂಬುದು ಈಗ ಗೊತ್ತಾಗುತ್ತಿದೆ. ಸರ್ಕಾರವನ್ನು ಅಭದ್ರಗೊಳಿಸುವ ಯತ್ನ ಯಶಸ್ವಿ ಆಗಲ್ಲ. ಸಿಎಂ ಸಿದ್ದರಾಮಯ್ಯರ ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟ ಮಾಡಿದ್ದರು. ಅದರ ವಿರುದ್ಧ ಈಗ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯಪಾಲರು ಪಪೆಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ: ವಿಶೇಷ ತುರ್ತು ಸಚಿವ ಸಂಪುಟ ಸಭೆ ಮುಂದೂಡಿಕೆ - Cabinet Meeting