ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಾದ ಮೈಸೂರಿಗೆ ಕಳೆದ ಬಾರಿ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳಲ್ಲಿ ಕಾರ್ಯರೂಪಕ್ಕೆ ಬಂದಿರುವ ಮತ್ತು ವಿಳಂಬವಾಗಿರುವ ಯೋಜನೆಗಳ ಸಂಪೂರ್ಣ ವಿವರ ಹೀಗಿದೆ.
ಚಾಮುಂಡಿ ಬೆಟ್ಟ ಪ್ರಾಧಿಕಾರ: ಕಳೆದ ಬಜೆಟ್‌ನಲ್ಲಿ ಸಿಎಂ, ಚಾಮುಂಡಿ ಬೆಟ್ಟ ಹಾಗೂ ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕ್ರಮ ವಹಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ ಪ್ರಾಧಿಕಾರ ರಚನೆಯಾಗದೇ ಹಾಗೆಯೇ ಉಳಿದಿದೆ.
ಚಿತ್ರನಗರಿ: ಸಿಎಂ ತವರು ಕ್ಷೇತ್ರ ವ್ಯಾಪ್ತಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಘೋಷಿಸಿದ್ದರು. ವರುಣಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲೇ ಚಿತ್ರನಗರಿ ನಿರ್ಮಿಸಲಾಗುವುದು. ಬೇರೆಲ್ಲಿಗೂ ಸ್ಥಳಾಂತರ ಮಾಡುವುದಿಲ್ಲ ಎಂದೂ ಹೇಳಿದ್ದರು. ಸ್ಥಾಪನೆಯ ವಿಚಾರದಲ್ಲಿ ಗಮನಾರ್ಹ ಬೆಳವಣಿಗೆಗಳೇನೂ ನಡೆದಿಲ್ಲ.
ಆಸ್ಪತ್ರೆಗೆ ಅನುದಾನ: ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಕ್ಕೆ ಕ್ರಮ ವಹಿಸಲಾಗಿದೆ. ಸುಟ್ಟ ಗಾಯಗಳ ಚಿಕಿತ್ಸಾ ಘಟಕಕ್ಕೆ ಅನುದಾನ ಒದಗಿಸಲಾಗುವುದು. ಟ್ರಾಮಾ ಕೇರ್ ಸೆಂಟರ್ ಕಾರ್ಯಾಚರಣೆಗೆ ಅನುದಾನ ನೀಡಲಾಗುವುದು ಎಂದು ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆಸ್ಪತ್ರೆ ಹಾಗೂ ಘಟಕಗಳು ಕಾರ್ಯಾರಂಭಿಸಿವೆ. ಆದರೆ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನ ಇನ್ನೂ ಬಂದಿಲ್ಲ.
ರೇಷ್ಮೆ ಕೃಷಿ ಅಭಿವೃದ್ಧಿಗೆ ಮೈಸೂರಿನ ಬಿತ್ತನೆ ಪ್ರದೇಶದಲ್ಲಿ ಮೂಲಸೌಕರ್ಯ ಬಲಪಡಿಸಲಾಗುವುದು. ಇದರಿಂದ ಉತ್ತಮ ಗುಣಮಟ್ಟದ, ರೋಗರಹಿತವಾದ ಮೈಸೂರು ಬಿತ್ತನೆ ಗೂಡುಗಳನ್ನು ಉತ್ಪಾದಿಸಿ, ವಾಣಿಜ್ಯ ರೇಷ್ಮೆ ಬೆಳೆಗಾರರಿಗೆ ವಿತರಿಸಲು ಮತ್ತು ಉತ್ತಮ ಗುಣಮಟ್ಟದ ಮಿಶ್ರ ತಳಿ ಕಚ್ಚಾ ರೇಷ್ಮೆ ಉತ್ಪಾದಿಸಲು ಅನುಕೂಲ ಆಗಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಆದರೆ ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರ ತವರು ಜಿಲ್ಲೆಯಲ್ಲೇ ಇದು ನೆನೆಗುದಿಗೆ ಬಿದ್ದಿದೆ.
ನಗರದ ಗುರುದ್ವಾರದ ಅಭಿವೃದ್ಧಿಗೆ ಅನುದಾನ, ಮೈಸೂರಿನಲ್ಲಿ ಸೈಕ್ಲಿಂಗ್ ವೇಲೋಡ್ರೋಮ್ ಸ್ಥಾಪನೆಗೆ 10 ಕೋಟಿ ರೂ ಅನುದಾನ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಇದು ಕೂಡಾ ವಿಳಂಬವಾಗಿದೆ.
ನಜರ್ಬಾದ್ನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಎಆರ್ ಮತ್ತು ವಿಆರ್ ತಂತ್ರಜ್ಞಾನದೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ಬಗ್ಗೆ ಘೋಷಿಸಲಾಗಿತ್ತು. ಆದರೆ ಅನುದಾನದ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ದಪಡಿಸುವ ಕೆಲಸ ಪ್ರಗತಿಯಲ್ಲಿದೆ.
ಸಿಎಂ ಅವರು ದಸರಾ ವಸ್ತು ಪ್ರದರ್ಶನದ ಆವರಣವನ್ನು ದೆಹಲಿಯ ಪ್ರಗತಿ ಮೈದಾನದ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಅಲ್ಲಿ ಏಕತಾ ಮಾಲ್ ರಚನೆಗೆ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. 6.5 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ.
ಕೂರ್ಗಳ್ಳಿಯಲ್ಲಿರುವ ವನ್ಯಜೀವಿ ಪುನರ್ವಸತಿ ಕೇಂದ್ರದ ಬಲವರ್ಧನೆ ಮಾಡಲಾಗುವುದು. ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಕಿದ್ವಾಯಿ ಮಾದರಿ ಕ್ಯಾನ್ಸರ್ ಘಟಕಕ್ಕೆ 20 ಕೋಟಿ ಮಿಸಲಿಡಲಾಗಿದೆ ಎಂದು ಹೇಳಿದ್ದರು. ಆದರೆ ಅನುದಾನದ ಕೊರತೆಯಿಂದ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಹೊಸ ಕಾರ್ಯಕ್ರಮಗಳ ಜೊತೆಗೆ ಹಳೆ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬಹುದು ಎಂಬ ಆಶಾಭಾವನೆಯನ್ನು ಮೈಸೂರಿಗರು ಹೊಂದಿದ್ದಾರೆ.
ಈ ಬಗ್ಗೆ ಮೈಸೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಪ್ರತಿಕ್ರಿಯಿಸಿ, "ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ ಕೆಲವು ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬಂದಿಲ್ಲ. ಆದ್ದರಿಂದ ಈ ಬಾರಿಯಾದರೂ ಮತ್ತೆ ಆ ಯೋಜನೆಗಳನ್ನು ಘೋಷಣೆ ಮಾಡಿ ಕಾರ್ಯರೂಪಕ್ಕೆ ತರಬೇಕು. ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು" ಎಂದು ಒತ್ತಾಯಿಸಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಪ್ರತಿಕ್ರಿಯಿಸಿ, "ಪಂಚ ಗ್ಯಾರಂಟಿಗಳ ಅನುಷ್ಠಾನದ ದೃಷ್ಟಿಯಿಂದ ಕಳೆದ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಗೆ ಘೋಷಣೆ ಮಾಡಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬವಾಗಿದೆ. ನಾಳೆ ಮಂಡನೆಯಾಗುವ ಬಜೆಟ್‌ನಲ್ಲಿ ಜಿಲ್ಲೆಯ ಘೋಷಿತ ಬಜೆಟ್ ಯೋಜನೆಗಳ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಿದ್ದಾರೆ" ಎಂದಿದ್ದಾರೆ.
ಇದನ್ನೂ ಓದಿ: ಒಪಿಎಸ್ ಮರುಜಾರಿ ಸೇರಿ ಹಲವು ಬೇಡಿಕೆ: ಸಿದ್ದರಾಮಯ್ಯ ಬಜೆಟ್‌ನಲ್ಲಿ ಈಡೇರುತ್ತಾ ಸರ್ಕಾರಿ ನೌಕರರ ನಿರೀಕ್ಷೆ?