ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಳೆ ಹೆಚ್ಚಾಗಿರುವುದರಿಂದ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ದಿನಾಂಕ 5.07.2024 ರಿಂದ ಜಾರಿಗೆ ಬರುವಂತೆ ಜಿಲ್ಲೆಯಾದ್ಯಂತ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 12,000 ಕೆ.ಜಿ. ಗಿಂತ ಅಧಿಕ ಭಾರ ಹೊತ್ತು ಸಂಚರಿಸುವ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿ ರಸ್ತೆ, ಬೆಟ್ಟ-ಗುಡ್ಡ ಕುಸಿತ ತಪ್ಪಿಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಶಾಲಾ ಕೊಠಡಿ ಕುಸಿತ: ಮೂಡಿಗೆರೆ ತಾಲೂಕಿನ ಗಾಂಧಿಘರ್ ಸಮೀಪದ ಹಾಲೂರು ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿ ಹಾಗೂ ಮೇಲ್ಛಾವಣಿ ಕುಸಿದಿದೆ. ಶಾಲಾ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನ ಬೇರೆ ಕೊಠಡಿಗೆ ಸ್ಥಳಾಂತರಿಸಲಾಗಿದೆ.
ಕರೆಂಟ್ ಶಾಕ್‍ನಿಂದ ರಾಸುಗಳು ಸಾವು: ಕೊಪ್ಪ ತಾಲೂಕಿನ ಸಿದ್ದರಮಠ ಸಮೀಪದ ಕರಿಗೆರಸಿ ಬಳಿ ವಿದ್ಯುತ್ ಶಾಕ್‍ನಿಂದ ಮೂರು ರಾಸುಗಳು ಸಾವನ್ನಪ್ಪಿವೆ. ಭಾರೀ ಗಾಳಿ-ಮಳೆಗೆ 11 ಕೆ.ವಿ. ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಮಹೇಶ್ ಎಂಬುವರಿಗೆ ಸೇರಿದ ಒಂದು ಹಸು ಹಾಗೂ ರಾಮರಾಜ್ ಎಂಬುವರಿಗೆ ಸೇರಿದ ಎರಡು ಹಸುಗಳು ಅಸುನೀಗಿವೆ.
ನದಿಗೆ ಬಿದ್ದ ಕಾರು: ಶನಿವಾರ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಭಿನ್ನಡಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೇಮಾವತಿ ನದಿಗೆ ಬಿದ್ದಿತ್ತು. ಅದೇ ರೀತಿ ಇಂದೂ ಆಲ್ಟೋ ಕಾರೊಂದು ನದಿಗೆ ಬಿದ್ದಿದೆ. ಅದೃಷ್ಟವಶಾತ್ ಎರಡೂ ಘಟನೆಯಲ್ಲಿ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಮಳೆ ಮಾಹಿತಿ: ರಾಜ್ಯದ ಈ ಆರು ಜಿಲ್ಲೆಗಳಿಗೆ ಮುಂದಿನ 48 ಗಂಟೆ ಯೆಲ್ಲೋ ಅಲರ್ಟ್ ಘೋಷಣೆ - Karnataka Rain Forecast