ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಆರೋಪ ಪ್ರಕರಣದ ಕುರಿತಾಗಿ ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ತಮ್ಮ ಹೇಳಿಕೆ ವಾಪಸ್ ಪಡೆದು ವಿಷಾದಿಸಿದರೆ, ಬಿಜೆಪಿ ಸದಸ್ಯ ರವಿಕುಮಾರ್ ಕ್ಷಮೆ ಯಾಚಿಸಲು ನಿರಾಕರಿಸಿದರು. ಸರ್ಕಾರದಿಂದ ಸ್ಪಷ್ಟ ಕ್ರಮದ ಉತ್ತರಕ್ಕೆ ಅವರು ಪಟ್ಟು ಹಿಡಿದರು.
ಆದರೆ ಸರ್ಕಾರ ಎಫ್ಎಸ್ಎಲ್ ವರದಿಯ ನಂತರ ಕ್ರಮ ಎಂದಿದ್ದು, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಜೆಡಿಎಸ್ ಸದಸ್ಯರು ಕೂಡಾ ಬೆಂಬಲ ನೀಡಿದರು.
ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮೊದಲು ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, "ಇದು ಮೇಲ್ಮನೆ, ಅರ್ಥ ಮಾಡಿಕೊಂಡು ನಡೆದುಕೊಳ್ಳಿ. ಅನುಮತಿ ಪಡೆಯದೇ ಮನಬಂದಂತೆ ಎದ್ದು ಮಾತನಾಡಿದರೆ ಇನ್ನು ಮುಂದೆ ಕಠಿಣ ಕ್ರಮಕ್ಕೆ ಮುಂದಾಗುತ್ತೇನೆ" ಎಂದು ಎಚ್ಚರಿಕೆ ನೀಡಿದರು.
ಘಟನೆಯಿಂದ ಎಲ್ಲರ ಮನಸ್ಸಿಗೂ ನೋವಾಗಿದೆ-ಎಚ್.ಕೆ.ಪಾಟೀಲ್: ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, "ಭಾವಾವೇಷದಲ್ಲಿ ಕೆಲವು ಬಾರಿ ಇಂಥ ಪದ ಬಳಕೆ ಆಗುತ್ತದೆ. ಇಲ್ಲಿ ನಡೆದ ಘಟನೆಯಿಂದ ಎಲ್ಲರ ಮನಸ್ಸಿಗೂ ನೋವಾಗಿದೆ. ದೇಶದ್ರೋಹಿ ಸರ್ಕಾರ ಎಂಬ ಶಬ್ಧ ಬಳಸಿ ಸದಸ್ಯ ರವಿಕುಮಾರ್ ಮಾತನಾಡಿದರೆ, ಗೌರವ ಮೀರಿ ಅಬ್ದುಲ್ ಜಬ್ಬಾರ್ ಮಾತನಾಡಿದ್ದಾರೆ. ಅವರೆಲ್ಲ ತಮ್ಮ ತಮ್ಮ ಮಾತು ವಾಪಸ್ ಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.
ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, "ನಿರ್ದಿಷ್ಟ ಘಟನೆ ನಡೆದಾಗ ಅದನ್ನು ಉಲ್ಲೇಖಿಸುವ ಅನಿವಾರ್ಯತೆ ಬರಲಿದೆ,. ಚರ್ಚೆ ನಡೆಯುವಾಗಲೇ ಸದಸ್ಯ ಅಬ್ದುಲ್ ಜಬ್ಬಾರ್ ರವಿಕುಮಾರ್ ಅವರನ್ನು ಏಕವಚನ ಪದ ಪ್ರಯೋಗ ಮಾಡಿದ್ದು ಸರಿಯಲ್ಲ" ಎಂದರು.
ಶತ್ರುರಾಷ್ಟ್ರಕ್ಕೆ ಜಿಂದಾಬಾದ್ ಅಂದರೆ ಸಹಿಸಲು ಹೇಗೆ ಸಾಧ್ಯ?- ರವಿಕುಮಾರ್: ನಂತರ ಮಾತನಾಡಿದ ರವಿಕುಮಾರ್, ತಪ್ಪು ಮಾಡಿದ್ದರೆ ಕ್ಷಮೆ ಕೇಳಲು ನಾನು ಹಿಂದೇಟು ಹಾಕಲ್ಲ. ಆದರೆ ನಮ್ಮ ದೇಶಕ್ಕೆ ಅಪಮಾನ ಮಾಡಿ ಶತ್ರುರಾಷ್ಟ್ರಕ್ಕೆ ಜಿಂದಾಬಾದ್ ಹಾಕಿದರೆ ಸಹಿಸಲು ಹೇಗೆ ಸಾಧ್ಯ? ಕ್ಷಮೆ ಕೇಳಲು ನಾನೇನು ತಪ್ಪು ಮಾಡಿದ್ದೇನೆ. ಈ ದೇಶದ ಗೌರವಕ್ಕೆ ಧಕ್ಕೆಯಾಗುವ ವಿಚಾರ ಖಂಡಿಸಿ ಮಾತನಾಡಿದ್ದೇನೆ. ಸದಸ್ಯರು ನನ್ನ ವಿರುದ್ಧ ಏಕವಚನ ಪದ ಬಳಕೆ ಸಹಿಸುವೆ ಆದರೆ ಪಾಕಿಸ್ತಾನ ಜಿಂದಾಬಾದ್ ಸಹಿಸಲ್ಲ. ನಾನೇಕೆ ಕ್ಷಮೆ ಕೇಳಲಿ ಎಂದು ಹೆಚ್.ಕೆ.ಪಾಟೀಲ್ ಸಲಹೆಯನ್ನು ತಳ್ಳಿ ಹಾಕಿದರು.
ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ದೇಶದ್ರೋಹಿ ಸರ್ಕಾರ ಎಂದು ಚುಚ್ಚುವಂತೆ ಮಾತನಾಡಿದರು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕಾಂಗ್ರೆಸ್ನವರೇ ಮೊಳಗಿಸಿದರು ಎನ್ನುವಂತೆ ಹೇಳಿದರು. ಇದರಿಂದ ನೊಂದು ಮಾತನಾಡಿದ್ದೆ. ಹಾಗಾಗಿ ನನ್ನ ಹೇಳಿಕೆ ವಾಪಸ್ ಪಡೆಯುತ್ತೇನೆ ಎಂದು ವಿಷಾದಿಸಿದರು.
ಇದಕ್ಕೆ ಮೆಚ್ಚುಗೆ ಸೂಚಿಸಿದ ಸಭಾಪತಿ ಬಸವರಾಜ ಹೊರಟ್ಟಿ, ವಿಷಾದ ವ್ಯಕ್ತಪಡಿಸಿ ಜಬ್ಬಾರ್ ಸದನದ ಗೌರವ ಹೆಚ್ಚಿಸಿದರು. ನೀವೂ ಹಾಗೆ ಮಾಡುತ್ತೀರಾ ಎಂದುಕೊಂಡಿದ್ದೆ ಎಂದು ರವಿಕುಮಾರ್ಗೆ ತಿಳಿಸಿದರು. ಆದರೆ ಪಟ್ಟು ಸಡಿಲಿಸದ ರವಿಕುಮಾರ್, ಇದನ್ನು ದೇಶಭಕ್ತ ಸರ್ಕಾರ ಎನ್ನಬೇಕಾ? ದೇಶಕ್ಕೆ ಮಾಡಿದ ಅಪಮಾನ ಸಹಿಸಲ್ಲ. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಹೇಗೆ ಒಳಗೆ ಬಿಟ್ಟಿರಿ, ದೇಶದ್ರೋಹಿಗಳ ರಕ್ಷಣೆ ಮಾಡುವ ಸರ್ಕಾರ ಇದು ಎಂದರು.
ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸರ್ಕಾರವನ್ನು ಕಾಂಜಿಪೀಂಜಿಗಳಲ್ಲ ಆರಿಸಿರುವುದು. ಶೇ.40ರಷ್ಟು ಜನ ಮತ ಹಾಕಿ ಆಯ್ಕೆ ಮಾಡಿದ್ದಾರೆ ಎಂದರು. ಇದಕ್ಕೆ ತಿರುಗೇಟು ನೀಡಿದ ರವಿಕುಮಾರ್, ನಮ್ಮನ್ನೂ ಅವರೇ ಆಯ್ಕೆ ಮಾಡಿ ಇಲ್ಲಿ ಕೂರಿಸಿದ್ದಾರೆ. ವಿರೋಧ ಪಕ್ಷದವರನ್ನು ಕಾಂಜಿಪಿಂಜಿಗಳಲ್ಲ ಆಯ್ಕೆ ಮಾಡಿರುವುದು. ಹೇಗೆ ಬೇಕೋ ಹಾಗೆ ಆಡಳಿತ ನಡೆಸುವುದಾ? ಘೋಷಣೆ ಹೇಗೆ ಕೂಗಿದರು ಎಂದು ಕ್ರಮದ ಬದಲು ನನ್ನ ಕ್ಷಮೆಗೆ ಬೇಡಿಕೆ ಇಡುತ್ತೀರಾ? ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಉಪ ಸಭಾಪತಿ ಪ್ರಾಣೇಶ್, ಕಡತದಿಂದ ಪದ ತೆಗೆದ ನಂತರ ವಿಚಾರ ಮುಗಿದಿದೆ ಇಲ್ಲಿಗೆ ಮುಗಿಸಿ ಎಂದರು. ಆದರೂ ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದ್ದಕ್ಕೆ ಅಸಮಧಾನಗೊಂಡ ಸಚಿವ ಹೆಚ್.ಕೆ.ಪಾಟೀಲ್, ಸಂಸತ್ನಲ್ಲಿ ಪಾಸ್ ಒಡೆದು ಮೇಲಿಂದ ಜಿಗಿದ ಘಟನೆ ನಡೆಸ ವೇಳೆ ಯಾರು ಏನೆಲ್ಲಾ ಮಾತನಾಡಿದ್ದಾರೆ ಎಂದು ಯೋಚಿಸಿ, ನಾವು ಅಂದು ಪಾಸ್ ನೀಡಿದ ಸಂಸದರನ್ನು ದೇಶದ್ರೋಹಿ ಎಂದಿಲ್ಲ ಎಂದರು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ಹರಿಪ್ರಸಾದ್ ಬಳಸಿದ ಕಾಂಜಿಪೀಂಜಿ ಪದ ಸರಿಯಲ್ಲ ಎಂದರು. ಇದನ್ನು ಒಪ್ಪಿದ ಹರಿಪ್ರಸಾದ್ ಆ ಪದ ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದರು.
ನಂತರ ಉಪ ಸಭಾಪತಿ ಪ್ರಾಣೇಶ್ ಮಾತನಾಡಿ, ಏಕವಚನ ಬಳಕೆ ಬೇಡ, ಯಾರೇ ಆದರೂ ಗೌರವ ಕೊಟ್ಟು ಗೌರವ ಪಡೆಯುವ ಕೆಲಸ ಆಗಲಿ. ಆಗ ಇಂತಹ ಗೊಂದಲ ನಿವಾರಣೆಯಾಗುತ್ತದೆ ಎಂದರು.
ದೇಶಭಕ್ತಿ ಸರ್ಟಿಫಿಕೇಟ್ ಬೇಕಿಲ್ಲ- ಹರಿಪ್ರಸಾರ್: ಹರಿಪ್ರಸಾದ್ ಮಾತು ಮುಂದುವರೆಸಿ, ಬಿಜೆಪಿಯವರಿಂದ ದೇಶಭಕ್ತಿಯ ಸರ್ಟಿಫಿಕೇಟ್ ಪಡೆಯುವ ಸ್ಥಿತಿ ಬೇಕಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದವರಿಂದ ನಮಗೆ ಸರ್ಟಿಫಿಕೇಟ್ ಬೇಕಿಲ್ಲ. ಶ್ಯಾಮ್ ಪ್ರಸಾದ್ ಮುಖರ್ಜಿ ದೇಶ ವಿಭಜನೆ ರೆಸೆಲ್ಯೂಷನ್ ಪರ ಇದ್ದು ಸಹಿ ಹಾಕಿದ್ದರು. ಮುಸ್ಲಿಂ ಲೀಗ್ ಜೊತೆ ಇವರ ಸಂಘಟನೆ ಇತ್ತು. ನಮ್ಮದು ದೇಶದ್ರೋಹಿ ಸರ್ಕಾರ ಆಗಿದ್ದರೆ 56 ಇಂಚಿನ ಪ್ರಧಾನಿ ಇದ್ದಾರೆ, ದೇಶದ್ರೋಹಿ ಸರ್ಕಾರ ಎಂದು ಸರ್ಕಾರ ವಜಾಗೊಳಿಸಲಿ ಎಂದು ಸವಾಲು ಹಾಕಿದರು.
ದೇಶದ್ರೋಹಿ, ದೇಶಭಕ್ತಿ ಎನ್ನುವ ಸರ್ಟಿಫಿಕೇಟ್ ಕೊಡುವ ಗುತ್ತಿಗೆ ಇವರಿಗೆ ಕೊಟ್ಟಿದ್ದು ಯಾರು? ಇಂತಹ ವಿಷಯ ಬಿಟ್ಟು ಬೇರೆ ಚರ್ಚೆಗೆ ಸಿದ್ದ ಇಲ್ಲ. ಕನಿಷ್ಟ ವೇತನದಲ್ಲಿ ಜನ ಬದುಕುವ ಬಗ್ಗೆ, ಚೀನಾ ಭೂ ಕಬಳಿಕೆ ಬಗ್ಗೆ ಮಾತನಾಡುತ್ತಾರೆ. ನಮಗೆ ಪಾಕಿಸ್ತಾನ ಶತ್ರು ರಾಷ್ಟ್ರ ಅಲ್ಲ, ಪಕ್ಕದ ರಾಷ್ಟ್ರ. ಅಡ್ವಾಣಿ ಜಿನ್ನಾ ಸಮಾಧಿಗೆ ಹೋಗಿ ಇಂತಹ ಜಾತ್ಯತೀತ ವ್ಯಕ್ತಿ ಜಗತ್ತಿನಲ್ಲಿ ಮತ್ತೆಲ್ಲೂ ಇಲ್ಲ ಎಂದಿದ್ದರು. ನವಾಜ್ ಷರೀಫ್ ಕರೆದೇ ಇಲ್ಲ, ಮೊಮ್ಮಗಳ ಮದುವೆಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದು ಯಾರು? ಎಂದು ಟೀಕಿಸಿದರು.
ಇದನ್ನೂಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ