ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಪಾಕ್ ಪರ ಘೋ಼ಷಣೆ ಕೂಗಿದ ಆರೋಪದಡಿ ಬಂಧಿಸಲಾಗಿದ್ದ ಮೂವರು ಆರೋಪಿಗಳ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಇಂದು ವಿಧಾನಸೌಧ ಪೊಲೀಸರು 39ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧಿತರಾಗಿದ್ದ ಮೂವರ ಪೈಕಿ ಮುನಾವರ್ ಅಹಮ್ಮದ್ ಹಾಗೂ ಇಲ್ತಿಯಾಜ್ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದರೆ, ಮತ್ತೋರ್ವ ಮೊಹ್ಮದ್ ಶಫಿ ನಾಶಿಪುಡಿಯನ್ನು ಒಂದು ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ.
ಫೆ. 27 ರಂದು ನಡೆದಿದ್ದ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪರವಾಗಿ ಅವರ ಹಿಂಬಾಲಕರು ಜೈಕಾರ ಕೂಗುವಾಗ ಮೂವರು ಆರೋಪಿಗಳು ಪಾಕ್ ಪರ ಘೋಷಣೆ ಕೂಗಿದ ಆರೋಪ ಕೇಳಿಬಂದಿತ್ತು. ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಡಿಯೋ ಸ್ಯಾಂಪಲ್ಗಳನ್ನ ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳುಹಿಸಿದ್ದರು. ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ಸ್ಪಷ್ಟ ಎಂದು ಕಂಡುಬಂದಿದ್ದರಿಂದ ಕಳೆದ ಸೋಮವಾರ ಮೂವರನ್ನು ಬಂಧಿಸಲಾಗಿತ್ತು.
ಮೊಹ್ಮಮದ್ ಶಫಿ ನಾಶಿಪುಡಿಯನ್ನ ಪೊಲೀಸರು ಮತ್ತೊಂದು ದಿನ ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಾಯ್ಸ್ ಸ್ಯಾಂಪಲ್ಸ್ ಹಾಗೂ ಘೋಷಣೆ ಕೂಗಿದ ವಾಯ್ಸ್ಗೂ ಸಾಮ್ಯತೆ ಕಂಡುಬಂದಿದೆ. ತನಿಖೆಯಲ್ಲಿ ನಾಶಿಪುಡಿಯೇ ಪಾಕ್ ಪರ ಜೈಕಾರ ಕೂಗಿರುವುದು ಗೊತ್ತಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಒಂದು ದಿನ ಪೊಲೀಸ್ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಓದಿ: ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ: ಗೃಹ ಸಚಿವ ಜಿ.ಪರಮೇಶ್ವರ್