ಬೆಂಗಳೂರು: ರಾಜ್ಯದ 1127 ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೆ ಏರಿಸುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಸ್ತಾವನೆ ಆರ್ಥಿಕ ಇಲಾಖೆಯಿಂದ ಹಿಂದಕ್ಕೆ ಬಂದಿದ್ದು, ಅಗತ್ಯ ಮಾಹಿತಿಗಳೊಂದಿಗೆ ಮತ್ತೊಮ್ಮೆ ಪ್ರಸ್ತಾಪವನ್ನು ಆರ್ಥಿಕ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದರು.
ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಚಿವರು ಇಂದು ಸಂಜೆ ವಿಕಾಸಸೌಧದದಲ್ಲಿ ಸಭೆ ನಡೆಸಿ, ಸಂಘದ ಬೇಡಿಕೆಗಳನ್ನು ಆಲಿಸಿದರು. ಸೇವಾ ಹಿರಿತನದ ಬಗ್ಗೆ ಮಾಡಿದ ಮನವಿಗೆ ಉತ್ತರಿಸಿದ ಸಚಿವರು ಸಿ ಅಂಡ್ ಆರ್ ನಿಯಮಗಳನ್ನು ಅಂತಿಮಗೊಳಿಸಲಾಗುತ್ತಿದ್ದು ಅದರಂತೆ ಹಿರಿತನವನ್ನು ಪರಿಗಣಿಸಲಾಗುವುದು ಎಂದು ಹೇಳಿದರು. ನೌಕಕರು ಸೇವೆಯ ಮೇಲಿದ್ದಾಗ ಆಗುವ ಪ್ರಾಣಹಾನಿ ಸಮಯದಲ್ಲಿ ಸೂಕ್ತ ಪರಿಹಾರ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಂಘದ ಅಡಿ ಗ್ರಾಮ ಪಂಚಾಯತಿಗಳ ವಾಟರ್‌ಮ್ಯಾನ್‌ಗಳು, ಬಿಲ್ ಕಲೆಕ್ಟರ್‌ಗಳು, ಡಾಟ ಎಂಟ್ರಿ ಆಪರೇಟರ್‌ಗಳು, ಅಟೆಂಡರ್‌ಗಳು ಹಾಗೂ ಸ್ವೀಪರ್‌ಗಳು ಬರಲಿದ್ದು ಈ ವೃಂದದ ನೌಕರರಿಗೆ ಇ-ಅಟೆಂಡೆನ್ಸ್ ವ್ಯಾಪ್ತಿಯಿಂದ ವಿನಾಯತಿ ನೀಡಬೇಕೆಂದು ಕೋರಿದ ಸಂಘದ ಅಧ್ಯಕ್ಷರ ಮನವಿಗೆ ಉತ್ತರಿಸಿದ ಸಚಿವರು ಸರ್ಕಾರ ಪಂಚಾಯತಿ ನೌಕರರ ಮೇಲೆ ಹೆಚ್ಚಿನ ಭರವಸೆಯನ್ನು ಹೊಂದಿದ್ದು, ವಿಶ್ವಾಸರ್ಹತೆಯಿಂದ ಸಾರ್ವಜನಿಕರ ಸೇವೆ ಸಲ್ಲಿಸಬೇಕೆಂದು ಕೋರಿದರು.
ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳನ್ನು ಶೀಘ್ರದಲ್ಲಿಯೇ ಇ-ಅಟೆಂಡೆನ್ಸ್ ವ್ಯಾಪ್ತಿಗೆ ತರುವುದಾಗಿ ಈ ಸಂದರ್ಭದಲ್ಲಿ ಸಚಿವರು ಹೇಳಿದರು. ಸಾರ್ವಜನಿಕರಲ್ಲಿ ಗ್ರಾಮ ಪಂಚಾಯತಿ ಕಚೇರಿಗಳ ಬಗ್ಗೆ ಹೆಚ್ಚು ವಿಶ್ವಾಸ ಮೂಡುವ ಅವಶ್ಯಕತೆ ಇರುವುದರಿಂದ ಗ್ರಾಮ ಪಂಚಾಯತಿಗಳ ಎಲ್ಲ ವೃಂದದ ನೌಕರರನ್ನೂ ಇ-ಅಟೆಂಡೆನ್ಸ್ ಅಡಿ ತರಲಾಗುತ್ತಿದೆ ಎಂದೂ ಸಚಿವರು ತಿಳಿಸಿದರು. ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಉಮಾ ಮಹೇಶ್ವರನ್, ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಕಮಿಷನ್ ವಿಚಾರ: ಯತ್ನಾಳ್ - ಡಿಕೆಶಿ ಮಧ್ಯೆ ಪರಸ್ಪರ ಏಕವಚನದಲ್ಲೇ ವಾಕ್ ಸಮರ