ಬೆಂಗಳೂರು: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭೆ ಚುನಾವಣೆಗೆ ಬಹಿರಂಗ ಪ್ರಚಾರ ಮಕ್ತಾಯಗೊಂಡಿದೆ. ಈ ಬೆನ್ನಲ್ಲೇ, ಎರಡನೇ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಮತಬೇಟೆ ಜೋರಾಗಿದೆ. ವಿವಿಧ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಏಪ್ರಿಲ್ 28 ಮತ್ತು 29 ರಂದು ಪ್ರಧಾನಿ ಮೋದಿ ರಾಜ್ಯದಲ್ಲಿ ಮತಬೇಟೆ ನಡೆಸಲಿದ್ದಾರೆ. ವಿವಿಧೆಡೆ ಬೃಹತ್ ಪ್ರಚಾರ ಸಭೆಗಳಲ್ಲಿ ಭಾಷಣ ಮಾಡಲಿದ್ದಾರೆ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಮಾಹಿತಿ ನೀಡಿದರು.
28ರಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯಲ್ಲಿ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿ ಪ್ರಚಾರ ಭಾಷಣ ಮಾಡಲಿರುವ ಮೋದಿ, ಮಧ್ಯಾಹ್ನ 12 ಗಂಟೆಗೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ಹಾಗೂ ಸಂಜೆ 4 ಗಂಟೆಗೆ ಬಳ್ಳಾರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿ ಮಾತನಾಡುವರು. ಪ್ರತಿ ಸಮಾರಂಭದಲ್ಲಿಯೂ ಅಕ್ಕಪಕ್ಕದ ಕ್ಷೇತ್ರಗಳ ಜನರನ್ನೂ ಸೇರಿಸಲಾಗುತ್ತಿದೆ. ಮೂರ್ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳು ಕೂಡ ಭಾಗವಹಿಸಲಿದ್ದು, ಅವರ ಪರ ಪ್ರಧಾನಿ ಮತಯಾಚಿಸಲಿದ್ದಾರೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.
28ರಂದು ರಾತ್ರಿ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಲಿರುವ ಮೋದಿ, ಏಪ್ರಿಲ್ 29ರಂದು ಬೆಳಗ್ಗೆ 11 ಗಂಟೆಗೆ ಬಾಗಲಕೋಟೆಯಲ್ಲಿ ಏರ್ಪಡಿಸಲಾಗುವ ಸಭೆಯಲ್ಲಿ ಪಾಲ್ಗೊಂಡು ಮತಯಾಚಿಸಲಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ 14 ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ವಾಸ್ತವ್ಯಕ್ಕೆ ಸಿದ್ಧತೆ: ಬೆಳಗಾವಿಯಿಂದ ಪ್ರಚಾರ ಆರಂಭಿಸಲಿರುವ ಮೋದಿ ಏಪ್ರಿಲ್ 27 ರ ಸಂಜೆಯೇ 7.30 ರ ವೇಳೆಗೆ ಕುಂದಾನಗರಿಗೆ ಆಗಮಿಸಲಿದ್ದಾರೆ. ಅಂದು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ. ಕಾಕತಿಯಲ್ಲಿ ಜೊಲ್ಲೆ ಗ್ರೂಪ್‌ನಿಂದ ನಿರ್ಮಾಣಗೊಂಡಿರುವ ಐಟಿಸಿ ವೆಲ್ಕಂ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಸುಮಾರು 5 ಏಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ನೂತನ ಐಟಿಸಿ ವೆಲ್ಕಂ ಹೋಟೆಲ್‌ನಲ್ಲಿ 116 ರೂಮ್ಗಳಿವೆ. ಉದ್ಘಾಟನೆಗೂ ಮುನ್ನವೇ ಮೋದಿ ಆತಿಥ್ಯಕ್ಕೆ ಐಟಿಸಿ ವೆಲ್ಕಂ ಹೋಟೆಲ್ ಸಜ್ಜಾಗಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸೇರಿ ಮತ್ತಿತರ ಅಧಿಕಾರಿಗಳು ಕೂಡ ಹೋಟೆಲ್ಗೆ ಭೇಟಿ ನೀಡಿ, ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.