ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದಲ್ಲಿ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆಯ ಮಳಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ಆಗಿ ಚಾಲನೆ ನೀಡಿದರು. ಬಳಿಕ ಸಂಸದ ಬಿ.ವೈ.ರಾಘವೇಂದ್ರ ಅವರು ಶಿಲಾನ್ಯಾಸ ಫಲಕ ಅನಾವರಣಗೊಳಿಸಿದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಎಂಬ ಯೋಜನೆಯನ್ನು ಇಂದು ಉದ್ಘಾಟನೆ ಮಾಡಿದ್ದಾರೆ. ಇದಕ್ಕೆ ನಮ್ಮ ಕ್ಷೇತ್ರ ಜನರ ಪರವಾಗಿ ಪ್ರಧಾನ ಮಂತ್ರಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸ್ಥಳೀಯ ವಸ್ತುಗಳು ಜನರಿಗೆ ತಲುಪಿಸಬೇಕೆಂದು ಹಾಗೂ ಈ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಈ ಯೋಜನೆ ಜಾರಿಗೆ ತರಲಾಗಿದೆ. ಇದೊಂದು ರೀತಿಯ ಸಣ್ಣ ಉದ್ಯಮ ಎಂದರು.
ಸ್ಥಳೀಯವಾಗಿ ತಯಾರಿಸಿದ ಕರಕುಶಲ ವಸ್ತುಗಳು, ಕೈಮಗ್ಗ, ಬಟ್ಟೆ ಹಾಗೂ ಸ್ತ್ರಿ ಶಕ್ತಿ ಸಂಘ, ಸ್ವ ಸಹಾಯ ಸಂಘಗಳು ಉತ್ಪಾದಿಸಿದ ವಸ್ತುಗಳು ಜೊತೆ ಸ್ಥಳೀಯ ಕೃಷಿ ಉತ್ಪನ್ನ, ಆಹಾರ ಪದಾರ್ಥಗಳಿಗೆ ಆದ್ಯತೆ ನೀಡಲು ಈ ಕಾರ್ಯಕ್ರಮ ಮಾಡಲಾಗುತ್ತದೆ. ಪ್ರಸ್ತುತ ದೇಶದಲ್ಲಿ ಶೇ 3 ರಿಂದ 4 ರಷ್ಟು ಜನರು ಮಾತ್ರ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಶೇ. 75 ರಷ್ಟು ಮಂದಿ ಕೃಷಿ ವಲಯದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲ್ಲ. ನಿಮ್ಮಲ್ಲಿ ಕೌಶಲ್ಯ ಇದ್ದರೆ ಸಾಕಷ್ಟು ಅವಕಾಶಗಳು ಇವೆ. ವೋಕಲ್ ಫಾರ್ ಲೋಕಲ್ ಮೂಲಕ ಜನರಿಗೆ ಜೀವನ ಕಟ್ಟಿಕೊಡಲು, ಜನರ ಜೀವನಕ್ಕೆ ಭದ್ರತೆ ಒದಗಿಸಲು ಈ ಮಳಿಗೆಗಳು ಸಹಾಯಕವಾಗಲಿದೆ ಎಂದು ಹೇಳಿದರು.
ಈಗ ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಎಂಬಂತೆ ರೈಲ್ವೆ ಕಂಟ್ರೋಲಿಂಗ್ ಸಿಸ್ಟಮ್ ಅನ್ನು ಡಿಜಿಟಲ್ ಕಂಟ್ರೋಲ್ ಆಗಿ ಲಾಂಚ್ ಮಾಡಲಾಗಿದೆ. ರೈಲ್ವೆ ಯೋಜನೆಗೆ ಹಣವನ್ನು ನೀಡಲಾಗಿದೆ. ಮೈಸೂರು- ತಾಳಗುಪ್ಪ ರೈಲು ಕುಂಸಿ ಹಾಗೂ ಅರಸಾಳು ರೈಲು ನಿಲ್ದಾಣದಲ್ಲಿ ಮುಂದಿನ ಒಂದು ವರ್ಷದ ವರೆಗೂ ನಿಲುಗಡೆ ಆಗಲಿದೆ ಎಂದು ತಿಳಿಸಿದರು. ಇದೇ ವೇಳೆ , ರೈಲ್ವೆ ಇಲಾಖೆ ನಡೆಸಿದ ಕ್ವಿಜ್ ಸೇರಿದಂತೆ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಪರಿಷತ್ ಸದಸ್ಯರಾದ ರುದ್ರೇಗೌಡ, ಡಿ.ಎಸ್.ಅರುಣ್ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಏನಿದು ಯೋಜನೆ?: ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆ ಜಾರಿ ಮೂಲಕ ಸ್ವದೇಶಿ ವಸ್ತುಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದ್ದು, ಇದಕ್ಕಾಗಿ ಪ್ರತಿ ರೈಲ್ವೆ ನಿಲ್ದಾಣದಲ್ಲಿ ಮಾರಾಟ ಮಳಿಗೆ ಸ್ಥಾಪಿಸಲಾಗುತ್ತಿದೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ದೇಶದ ಹಲವು ರೈಲ್ವೆ ನಿಲ್ದಾಣಗಳಲ್ಲಿ ನೂರಾರು ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆಯ ಮಳಿಗೆಗಳಿಗೆ ವರ್ಚುಯಲ್ ಆಗಿ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: 10 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ: 85 ಸಾವಿರ ಕೋಟಿ ರೂ. ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ