ಬೆಂಗಳೂರು: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಭದ್ರತೆಯ ಸಲುವಾಗಿ 15 ದಿನಗಳ ಮುಂಚಿತವಾಗಿಯೇ ಮೈದಾನಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ವಹಿಸಲಾಗಿದೆ. ಅಲ್ಲದೆ ನಗರದ ಎಲ್ಲಾ ಹೋಟೆಲ್‌ಗಳು, ಲಾಡ್ಜ್, ತಂಗುದಾಣ ಮತ್ತಿತರ ಕಡೆಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ನಿಗಾ ವಹಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಇಂದು ಈ ಕುರಿತು ಮಾತನಾಡಿದ ಅವರು, ಆಗಸ್ಟ್ 15ರಂದು ನಡೆಯಲಿರುವ ಧ್ವಜಾರೋಹಣ, ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ನೆರವೇರಿಸಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 10 ಜನ ಡಿಸಿಪಿ, 17 ಎಸಿಪಿ, 42 ಇನ್ಸ್‌ಪೆಕ್ಟರ್, 112 ಸಬ್ ಇನ್ಸ್‌ಪೆಕ್ಟರ್, 62 ಸಹಾಯಕ ಸಬ್ ಇನ್ಸ್‌ಪೆಕ್ಟರ್, 511 ಕಾನ್ಸ್‌ಟೇಬಲ್, 72 ಮಹಿಳಾ ಸಿಬ್ಬಂದಿ, 129 ಸಾದಾ ಉಡುಪಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, 27 ಜನ ಕ್ಯಾಮೆರಾ ಸಿಬ್ಬಂದಿಯನ್ನ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೆ ಸಂಚಾರ ವ್ಯವಸ್ಥೆ ನಿರ್ವಹಣೆಗಾಗಿ 3 ಜನ ಡಿಸಿಪಿ, 6 ಎಸಿಪಿ, 19 ಇನ್ಸ್‌ಪೆಕ್ಟರ್, 32 ಸಬ್ ಇನ್ಸ್‌ಪೆಕ್ಟರ್, 111 ಸಹಾಯಕ ಸಬ್ ಇನ್ಸ್‌ಪೆಕ್ಟರ್, 430 ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು 1583 ಜನ ಪೊಲೀಸ್ ಸಿಬ್ಬಂದಿ ಮೈದಾನದ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಇದಲ್ಲದೆ ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 10 ಕೆಎಸ್ಆರ್ಪಿ/ಸಿಎಆರ್ ತುಕಡಿಗಳು, 2 ಅಗ್ನಿಶಾಮಕ ವಾಹನಗಳು, 2 ಆ್ಯಂಬುಲೆನ್ಸ್, 4 ಖಾಲಿ ವಾಹನಗಳು, ತಲಾ 1 ಕ್ಷಿಪ್ರ ಕಾರ್ಯಾಚರಣೆ ಪಡೆ, ಡಿ-ಸ್ವಾಟ್, ಗರುಡಾ ಫೋರ್ಸ್, ಆರ್.ಐ.ವಿ.ಆರ್ ನಿಯೋಜಿಸಲಾಗಿದೆ. ಹಾಗೂ ಮೈದಾನದ ಸುತ್ತಮುತ್ತಲಿನ ಸ್ಥಳಗಳಲ್ಲಿ 100 ಸಿಸಿಟಿವಿ ಕ್ಯಾಮೆರಾಗಳು, 4 ಬ್ಯಾಗೇಜ್ ಸ್ಕ್ಯಾನರ್ಸ್, 20 ಡಿಎಫ್ಎಂಡಿ, 40 ಹೆಚ್ಎಫ್ಎಂಡಿ ಅಳವಡಿಸಲಾಗಿದೆ.
ಮೈದಾನಕ್ಕೆ ಆಗಮಿಸುವವರು ಶಸ್ತ್ರಾಸ್ತ್ರ, ಹರಿತವಾದ ವಸ್ತು ಹಾಗೂ ಚಾಕು ಚೂರಿಗಳು, ಪಟಾಕಿ ಮತ್ತಿತರ ಸ್ಫೋಟಕಗಳು, ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರಗಳು, ಕಪ್ಪು ಕರವಸ್ತ್ರಗಳು, ಬಣ್ಣದ ದ್ರಾವಣ, ತಿಂಡಿ ತಿನಿಸುಗಳು, ವೀಡಿಯೋ/ಸ್ಟಿಲ್ ಕ್ಯಾಮೆರಾ, ನೀರಿನ ಬಾಟಲ್ ಅಥವಾ ಕ್ಯಾನ್, ಮದ್ಯ ಅಥವಾ ಮಾದಕ ಪದಾರ್ಥಗಳು, ಛತ್ರಿಗಳನ್ನ ತರುವಂತಿಲ್ಲ ಎಂದು ಸೂಚಿಸಲಾಗಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸುವವರ ಭದ್ರತೆಯ ದೃಷ್ಟಿಯಿಂದ ಪಾಸ್‌ಗಳನ್ನ ವಿತರಿಸಲಾಗಿದ್ದು, ಅದರನ್ವಯ ನಿಗದಿತ ಗೇಟ್‌ಗಳ ಮೂಲಕವೇ ಮೈದಾನ ಪ್ರವೇಶಿಸಿ ಆಸೀನರಾಗುವಂತೆ ತಿಳಿಸಲಾಗಿದೆ.
ಸಂಚಾರ ವ್ಯವಸ್ಥೆ ಮಾರ್ಪಾಡು: ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 15ರಂದು ಬೆಳಗ್ಗೆ ಕಬ್ಬನ್ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಮೈದಾನದಲ್ಲಿ ಕವಾಯತು ನಡೆಯಲಿದ್ದು, ಮೈದಾನದ ಒಳಗಡೆ ಮತ್ತು ಸುತ್ತಮುತ್ತಲು ವಾಹನಗಳ ನಿಲುಗಡೆ, ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡುಗಳನ್ನ ಮಾಡಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶಿಸಿದ್ದಾರೆ.
ವಾಹನ ನಿಲುಗಡೆ ನಿಷೆಧಿತ ರಸ್ತೆಗಳು: ಸೆಂಟ್ರಲ್ ಸ್ಟ್ರೀಟ್‌ನ ಆನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರಸ್ತೆಯ ಸಿಟಿಒ ವೃತ್ತದಿಂದ ಕೆ.ಆರ್. ರಸ್ತೆ ಹಾಗೂ ಕಬ್ಬನ್ ರಸ್ತೆ ಜಂಕ್ಷನ್‌ನವರೆಗೆ, ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನಗಳ ನಿಲುಗಡೆಗೆ ನಿಷೇಧವಿರಲಿದೆ.
ಕಾರ್ಯಕ್ರಮಕ್ಕೆ ಆಗಮಿಸುವವರು (ಕಾರ್ ಪಾಸ್‌ಗಳನ್ನು ಹೊಂದಿರುವವರು) ಪಾಸ್‌ಗಳಲ್ಲಿ ನಿಗದಿಪಡಿಸಿದ ಗೇಟ್‌ಗಳಲ್ಲಿ ಇಳಿದುಕೊಂಡು ನಿಗದಿಪಡಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತೆ ಸೂಚಿಸಲಾಗಿದೆ. ತುರ್ತು ಸೇವಾ ವಾಹನಗಳಾದ ಆಂಬ್ಯುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಕೆಎಸ್ಆರ್ಪಿ, ಕ್ಯೂ.ಆರ್.ಟಿ, ಬಿಬಿಎಂಪಿ. ಹಾಗೂ ಪಿಡಬ್ಲ್ಯೂಡಿ ವಾಹನಗಳು ಗೇಟ್ ನಂಬರ್-2ರಲ್ಲಿ ಪರೇಡ್ ಮೈದಾನ ಪ್ರವೇಶಿಸಿ ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ (ದಕ್ಷಿಣದ ಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬಹುದು. ಕಾರ್ಯಕ್ರಮಕ್ಕೆ ಬರುವ ಮಾಧ್ಯಮದವರ ವಾಹನಗಳು ಪ್ರವೇಶ ದ್ವಾರ-4 ರ ಮೂಲಕ ಒಳ ಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಹುದು.
ಮಾಣಿಕ್ ಶಾ ಪರೇಡ್ ಮೈದಾನ ಹಾಗೂ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕೊರತೆಯಿರುವುದರಿಂದ ಹಾಗೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಆಗಮಿಸುವವರು ಸಾರ್ವಜನಿಕ ಸಾರಿಗೆ (ಬಿಎಂಟಿಸಿ, ಮೆಟ್ರೋ) ಸೇವೆಯನ್ನು ಬಳಸುವಂತೆ ಕೋರಲಾಗಿದೆ.