ಬಳ್ಳಾರಿ : ಸಂಡೂರು ಬೈ ಎಲೆಕ್ಷನ್ ರಿಸಲ್ಟ್ ಮೇಲೆ ಇಡೀ ರಾಜ್ಯದ ಚಿತ್ತ ನೆಟ್ಟಿದೆ. 3 ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ ಕ್ಷಣಗಣನೆ ಶುರುವಾಗಿದೆ.
ಕಾಂಗ್ರೆಸ್‌ನ ಭದ್ರಕೋಟೆಯೆಂದು ಬಿಂಬಿತವಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಎದುರಾದ ಉಪಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ತೀವ್ರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತ್ತು. ಆಡಳಿತ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾ ಜಿದ್ದಿ ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್‌ನಿಂದ ಸಚಿವ ಸಂತೋಷ್ ಲಾಡ್ ಹಾಗೂ ಬಿಜೆಪಿಯಿಂದ ಶಾಸಕ ಜಿ. ಜನಾರ್ದನ ರೆಡ್ಡಿ ನಡುವೆ ವೈಯಕ್ತಿಕ ವರ್ಚಸ್ಸಿನ ಪ್ರಶ್ನೆಯ ಕಣವಾಗಿ ಮಾರ್ಪಟ್ಟಿತ್ತು.
ಹೀಗಾಗಿ, ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರಕೋಟೆಯನ್ನಾಗಿ ಉಳಿಸಿಕೊಳ್ಳಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸಿತ್ತು. ಇದರೊಂದಿಗೆ ಈ ಬಾರಿ ಕಾಂಗ್ರೆಸ್ ಭದ್ರಕೋಟೆ ಬೇಧಿಸಿ ಜಿಲ್ಲೆಯಲ್ಲಿ ಒಂದಾದರೂ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯುವ ಉದ್ದೇಶದೊಂದಿಗೆ ಕಮಲದ ನಾಯಕರು ತೀವ್ರ ಕಸರತ್ತು ನಡೆಸಿದ್ದರು. ಹೀಗಾಗಿ, ಕ್ಷೇತ್ರವನ್ನು ಉಭಯ ಪಕ್ಷಗಳ ಮುಖಂಡರು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದ್ದು, ಮತದಾರರು ಯಾವ ಪಕ್ಷಕ್ಕೆ ಮಣೆ ಹಾಕಲಿದ್ದಾರೆ ಎಂಬುದನ್ನು ಮಾತ್ರ ಕಾದುನೋಡಬೇಕಿದೆ.
ಶೇ.76.02 ರಷ್ಟು ಮತದಾನ : ಸಂಡೂರು ವಿಧಾನಸಭೆ ಉಪಚುನಾವಣೆಯು ಸುಸೂತ್ರವಾಗಿ ನಡೆದಿದ್ದು, ಶೇ.76.02 ರಷ್ಟು ಮತದಾನವಾಗಿದೆ. ಮತ ಎಣಿಕೆ ಕಾರ್ಯವು ನ.23 ರಂದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಡೂರು ವಿಧಾನಸಭೆ ಉಪಚುನಾವಣೆಯ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತರಾದ ರಾಜೇಶ್ ಹೆಚ್. ಡಿ ಅವರು ಹೇಳಿದ್ದಾರೆ.
ಸಂಡೂರು ವಿಧಾನಸಭೆ ಉಪಚುನಾವಣೆಯ ಮತ ಎಣಿಕೆ ಕಾರ್ಯ ಕುರಿತಂತೆ ಗುರುವಾರ ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಬೆಳಗ್ಗೆ 8 ರಿಂದ ಮತ ಎಣಿಕೆ ಆರಂಭ: ನ.23 ರಂದು ಬೆಳಗ್ಗೆ 08 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗಲಿದೆೆ. ಇದಕ್ಕೂ ಮುನ್ನ 07 ಗಂಟೆಗೆ ಭದ್ರತಾ ಕೊಠಡಿ ತೆರೆಯಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ 253 ಮತಗಟ್ಟೆಗಳ ಮತಯಂತ್ರಗಳು, 13 ಅಂಚೆ ಮತಗಳ ಎಣಿಕೆ ಮತ್ತು ಇಟಿಪಿಬಿಎಸ್ - 04 ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು 14+1 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸವರ್ಗಳನ್ನ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸಂಡೂರು ವಿಧಾನಸಭೆ ಉಪಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ 19 ಎಣಿಕಾ ಮೇಲ್ವಿಚಾರಕರು, 21 ಎಣಿಕಾ ಸಹಾಯಕರು ಮತ್ತು 20 ಎಣಿಕಾ ಮೈಕ್ರೋ ಅಬ್ಸವರ್ಗಳನ್ನ ನೇಮಕ ಮಾಡಲಾಗಿದೆ. ಮತ ಎಣಿಕೆ ಅಧಿಕಾರಿಗಳು, ಸಹಾಯಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.
ಮತ ಎಣಿಕೆಗೆ ಸಕಲ ವ್ಯವಸ್ಥೆ: ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ 19 ಸುತ್ತು ಮತ ಎಣಿಕೆ ನಡೆಯಲಿದೆ. ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ಹಂತದ ಮತ ಎಣಿಕೆ ವಿವರವನ್ನು ಮಾಧ್ಯಮಗಳ ಮೂಲಕ ಪ್ರಚುರಪಡಿಸಲು ಅನುವಾಗುವಂತೆ ಮಾಧ್ಯಮದವರಿಗೆ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗುವುದು ಎಂದು ಹೇಳಿದರು.
ಮತ ಎಣಿಕೆ ಕೇಂದ್ರ ಸುತ್ತಲೂ 100 ಮೀಟರ್ ಪ್ರದೇಶ ಆವರಣದಲ್ಲಿ ವಾಹನಗಳ ಪ್ರವೇಶವಿರುವುದಿಲ್ಲ. ಮತ ಎಣಿಕೆ ಅಂಗವಾಗಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು.
ಕಣದಲ್ಲಿರುವ ಅಭ್ಯರ್ಥಿಗಳಿವರು: ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಅನ್ನಪೂರ್ಣ, ಬಿಜೆಪಿಯಿಂದ ಬಂಗಾರ ಹನುಮಂತು, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎನ್. ಅಂಜಿನಪ್ಪ ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ ಟಿ. ಎಂ. ಮಾರುತಿ, ಟಿ. ಎರಿಸ್ವಾಮಿ, ಎನ್. ವೆಂಕಣ್ಣ ಸ್ಪರ್ಧಿಸಿದ್ದಾರೆ.
ಚುನಾವಣೆ ನಡೆಯುತ್ತಿರುವುದೇಕೆ?: ಸಂಡೂರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ತುಕಾರಾಮ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಸಂಸತ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತುಕಾರಾಮ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ.
ಮತದಾರರು ಎಷ್ಟು?: ಸಂಡೂರು ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಎಸ್‌ಟಿ ವರ್ಗದ ವಿಧಾನಸಭಾ ಕ್ಷೇತ್ರವಾಗಿದ್ದು, ಬಳ್ಳಾರಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.
ಇನ್ನು ಈ ಕ್ಷೇತ್ರದಲ್ಲಿ ಒಟ್ಟು 2,21,753 ಮತದಾರರು ಇದ್ದು, ಈ ಪೈಕಿ 1,11,109 ಪುರುಷರು, 1,10,618 ಮಹಿಳಾ ಮತದಾರರು ಇದ್ದಾರೆ. ಇನ್ನು ಇತರರು 32 ಮಂದಿ ಇದ್ದಾರೆ.
ಸಂಡೂರಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ: ಸಂಡೂರು ವಿಧಾನಸಭೆಯಲ್ಲಿ ಎಸ್‌ಸಿ ಮತದಾರರು ಸರಿಸುಮಾರು 39,890 ಇದ್ದು, ಎಸ್‌ಟಿ ಮತದಾರರು ಸರಿಸುಮಾರು 54,747 ದಷ್ಟಿದ್ದಾರೆ. ಸರಿಸುಮಾರು 25,163 ಮುಸ್ಲಿಂ ಮತದಾರರಿದ್ದಾರೆ. 158,486 ಗ್ರಾಮೀಣ ಮತದಾರರಿದ್ದು ನಗರ ಮತದಾರರು ಸಂಖ್ಯೆ 60,327ರಷ್ಟಿದೆ.
ಇದನ್ನೂ ಓದಿ : ಬಳ್ಳಾರಿ: ಸಂಡೂರಿನಲ್ಲಿ ಶಾಂತಿಯುವಾಗಿ ನಡೆದ ವೋಟಿಂಗ್, ಶೇ.76 ರಷ್ಟು ಮತದಾನ