ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಗರ್ಭಿಣಿ ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ಬುಧವಾರ ಸಂಜೆ ನಡೆಯಿತು. ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ನಮಿತಾ (22) ಮೃತರು. ಇವರು 3 ತಿಂಗಳ ಗರ್ಭಿಣಿಯಾಗಿದ್ದು, ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ರಸ್ತೆ ದಾಟುತ್ತಿದ್ದಾಗ ಇವರಿಗೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ.
ಘಟನೆಯಿಂದ ರೊಚ್ಚಿಗೆದ್ದ ಮೃತ ಮಹಿಳೆಯ ಸಂಬಂಧಿಕರು ರಸ್ತೆ ತಡೆ ನಡೆಸಿ ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ಬಸ್ ಚಾಲಕರು ಬೇಜವಾಬ್ದಾರಿಯಿಂದ ಅತಿವೇಗವಾಗಿ ಬಸ್ ಚಲಾಯಿಸುತ್ತಾರೆ. ಬ್ಯಾರಿಕೇಡ್ ಇಲ್ಲವೇ ಹಂಪ್ಸ್ ಅಳವಡಿಸುವಂತೆ ನಾಲ್ಕು ತಿಂಗಳುಗಳಿಂದ ಪೊಲೀಸ್ ಇಲಾಖೆ ಹಾಗೂ ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದರೂ ಎಚ್ಚೆತ್ತುಕೊಂಡಿಲ್ಲ ಎಂದರು.
ಕೊಳ್ಳೇಗಾಲ ಬಸ್ ಡಿಪೋ ವ್ಯವಸ್ಥಾಪಕ ಶಂಕರ್ ಘಟನಾ ಸ್ಥಳಕ್ಕೆ ಆಗಮಿಸಿ, ಯುವತಿಯ ಸಾವಿಗೆ ಸಂತಾಪ ಸೂಚಿಸಿ ಅಂತ್ಯಸಂಸ್ಕಾರಕ್ಕೆ ಪರಿಹಾರದ ಹಣವಾಗಿ 25 ಸಾವಿರ ರೂ ನೀಡಿದರು. ಚಾರ್ಜ್‌ಶೀಟ್ ಆದ ಬಳಿಕ 25 ಸಾವಿರ ರೂ ನೀಡಲಾಗುವುದು. ಆ ನಂತರ ಕೋರ್ಟ್ ಮೂಲಕ ಕುಟುಂಬಸ್ಥರಿಗೆ ಪರಿಹಾರದ ಹಣ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ಪೊಲೀಸರು ಸ್ಥಳಕ್ಕೆ ಆಗಮಿಸಿ, ರಸ್ತೆ ತಡೆ ನಡೆಸುತ್ತಿದ್ದವರ ಮನವೊಲಿಸಿದರು.
ಇದನ್ನೂ ಓದಿ: ಸ್ಕೂಟರ್ಗೆ ಲಾರಿ ಡಿಕ್ಕಿ: ತುಂಬು ಗರ್ಭಿಣಿ, ಹೊಟ್ಟೆಯಲ್ಲಿದ್ದ ಮಗು ಸ್ಥಳದಲ್ಲೇ ಸಾವು - Pregnant died on spot