ಮೈಸೂರು : ಅ. 12 ರಂದು ದಸರಾದ ಚಿನ್ನದ ಅಂಬಾರಿಯನ್ನು ಅರಮನೆಯಿಂದ ಕೊಡುವುದು ತಡವಾಯಿತು ಎಂಬ ವಿಚಾರದ ಬಗ್ಗೆ ಸ್ವತಃ ಪ್ರಮೋದಾ ದೇವಿ ಒಡೆಯರ್ ಪತ್ರದ ಮುಖಾಂತರ ಸ್ಪಷ್ಟೀಕರಣ ನೀಡಿದ್ದಾರೆ. ಅವರ ಸ್ಪಷ್ಟೀಕರಣ ಹೀಗಿದೆ.
''ಇದು ಬೇಜವಾಬ್ದಾರಿ ಹೇಳಿಕೆ ಎಂದು ನಾನು ಹೇಳಲು ಬಯಸುತ್ತೇನೆ. ಏಕೆಂದರೆ ಅಂಬಾರಿಯನ್ನು ಮಧ್ಯಾಹ್ನ 2 ಗಂಟೆಯ ನಂತರ ಕೆಲವೇ ನಿಮಿಷಗಳಲ್ಲಿ ಹಸ್ತಾಂತರಿಸಲಾಗಿದೆ.
ಈ ವಿಷಯ ನಮಗೂ ಆತಂಕ ಉಂಟು ಮಾಡಿತ್ತು. ಎಲ್ಲಾ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ನಾವು ಪ್ರಯತ್ನಿಸಿದರೂ ಮತ್ತು ಅಂಬಾರಿ ಸಿದ್ಧವಾಗಿದ್ದರೂ ಸಂಬಂಧಿಸಿದ ಸಿಬ್ಬಂದಿ, ಜನಸಂದಣಿ ನಿರ್ವಹಣೆ ಕೊರತೆ ಮತ್ತು ಕೆಲವು ಸರ್ಕಾರಿ ಕಾರುಗಳೊಂದಿಗೆ ದಾರಿಯನ್ನು ನಿರ್ಬಂಧಿಸಿದ್ದರಿಂದ ಅದನ್ನು ಸ್ಥಳಾಂತರಿಸಲು ತೊಂದರೆಯಾಯಿತು.
ಹಸ್ತಾಂತರದ ಸಮಯದ ಬಗ್ಗೆ ತಪ್ಪು ತಿಳಿವಳಿಕೆಯನ್ನು ಸ್ಪಷ್ಟಪಡಿಸಲು ನಾನು ಈ ಹೇಳಿಕೆಯನ್ನು ನೀಡಿದ್ದೇನೆ. ಸಂಬಂಧಪಟ್ಟ ಎಲ್ಲರಿಗೂ ಅನಗತ್ಯ ಆತಂಕವನ್ನು ತಪ್ಪಿಸಲು ಮತ್ತು ಮುಂದೆಯೂ ಕೂಡ ಈ ರೀತಿಯ ಸಮಸ್ಯೆ ಆಗದಂತೆ ಪರಿಹಾರ ನೀಡಬೇಕಿದೆ'' ಎಂದು ರಾಜಮಾತೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ತಡವಾಗಿ ನೆರವೇರಿದ್ದ ಪುಷ್ಪಾರ್ಚನೆ: ವಿಜಯದಶಮಿ (ಅ. 12) ಸಂಜೆ 4 ರಿಂದ 4.30 ರ ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಬೇಕಿತ್ತು. ಆದರೆ 5 ಗಂಟೆ 2 ನಿಮಿಷಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದ್ದರು.
ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಚಾಲನೆ ನೀಡಿದ್ದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಪಸ್ಥಿತರಿದ್ದರು.
750 ಕೆ.ಜಿ.ತೂಕದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ಚಾಮುಂಡೇಶ್ವರಿ ತಾಯಿಯನ್ನು ಹೊತ್ತ ಕ್ಯಾಪ್ಟನ್ ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ ಮತ್ತು ಹಿರಣ್ಯ ಸಾಥ್ ನೀಡಿದ್ದು, ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪಥ್ ಆನೆಯಾಗಿ ಗೋಪಿ, ಸಾಲಾನೆಯಾಗಿ ಏಕಲವ್ಯ , ಪ್ರಶಾಂತ್ , ಮಹೇಂದ್ರ , ಸುಗ್ರೀವಾ, ಕಂಜನ್, ಭೀಮಾ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀಗೂ ಹೆಚ್ಚು ದೂರ ಹೆಜ್ಜೆ ಹಾಕಿದ್ದವು. ಜಂಬೂ ಸವಾರಿಯ ಮುಂದೆ ಅಶ್ವದಳ, ಪೊಲೀಸ್ ವಾದ್ಯ ವೃಂದ ಮುಂದೆ ಸಾಗಿ ಈ ಬಾರಿಯ ದಸರಾ ಉತ್ಸವವನ್ನು ಯಶಸ್ವಿಗೊಳಿಸಿದವು.
ಇವುಗಳನ್ನೂ ಓದಿ :