ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣ ಎಲ್ಲಿ ತಮ್ಮ ಬುಡಕ್ಕೆ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿಷಯಾಂತರ ಮಾಡಲು ಬಿ.ಎಸ್.ಯಡಿಯೂರಪ್ಪ ವಿರುದ್ಧ ಸರ್ಕಾರ ಅಪಚಾರಕ್ಕೆ ಇಳಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಮೋದಿ ಸಂಪುಟದಲ್ಲಿ ಎರಡನೇ ಬಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂದು ನಗರಕ್ಕೆ ಆಗಮಿಸಿದ ಅವರು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ರಾಹುಲ್ ಗಾಂಧಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಯಾಗಿತ್ತು. ಇದೀಗ 80-81 ವಯಸ್ಸಿನ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪ ರಾಜ್ಯಕಂಡ ಜನಪ್ರಿಯ ನಾಯಕರು. ಅಂಥವರ ವಿರುದ್ಧ ಈ ರೀತಿಯ ಆರೋಪ ಹೊರಿಸುವುದೇ ಅಪಚಾರ ಎಂದು ಕಿಡಿಕಾರಿದರು.
ಇತ್ತೀಚೆಗೆ ನಾಗೇಂದ್ರ ಅವರು ರಾಜೀನಾಮೆ ಕೊಡುವ ಪ್ರಸಂಗ ಬಂತು. ಆ ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಕರಣ ತಮ್ಮ ಬುಡಕ್ಕೆ ಬರುತ್ತದೆ ಎಂದು ವಿಷಯಾಂತರ ಮಾಡಲು ಯಡಿಯೂರಪ್ಪ ಮೇಲೆ ಕೋರ್ಟ್‌ನಿಂದ ಬಂಧನಕ್ಕೆ ಆದೇಶ ತೆಗೆದುಕೊಂಡು ಬಂದಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದನ್ನು ಜನರು ಕೂಡ ಗಮನಿಸುತ್ತಿದ್ದಾರೆ ಎಂದರು.
ಈ ಕೇಸ್ನಲ್ಲಿ ಸತ್ಯಾಂಶವಿಲ್ಲ ಎಂದು ಈ ಹಿಂದೆ ಗೃಹ ಮಂತ್ರಿ ಜಿ.ಪರಮೇಶ್ವರ್ ಅವರೇ ಹೇಳಿದ್ದರು. ಇದೀಗ ಕೋರ್ಟ್ನಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಲು ಆದೇಶ ಕೇಳುತ್ತಾರೆ ಎಂದರೆ ಇದರಲ್ಲಿ ಸ್ವತಃ ಸರ್ಕಾರ ಭಾಗಿಯಾಗಿ, ದ್ವೇಷದ ರಾಜಕಾರಣ ಮಾಡುತ್ತಿದೆ. ಇದರಿಂದ ಬಿಜೆಪಿ ಹಾಗೂ ಯಡಿಯೂರಪ್ಪ ಅವರನ್ನು ತುಳಿಯುತ್ತೇವೆ ಎಂದು ಭಾವಿಸಿದ್ದರೆ, ನಾವು ಪುಟಿದೇಳುತ್ತೇವೆ ಎಂದರು.
ನಟ ದರ್ಶನ ಪ್ರಕರಣದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ಸಮಗ್ರ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಇದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ಕೆಲ ಸಚಿವರು, ಕಾಂಗ್ರೆಸ್ನ ಕೆಲ ಶಾಸಕರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ತನಿಖೆಯ ಮೊದಲೇ ಅವರನ್ನು ಮುಕ್ತಗೊಳಿಸುವ ಸಂಚು ರೂಪಿಸುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.
ಇಂಧನ ಖಾತೆಯನ್ನು ಮೋದಿಯವರು ನನಗೆ ನೀಡಿದ್ದಾರೆ. ಇದರ ಜೊತೆಗೆ ದೇಶಕ್ಕೆ ಆಹಾರ ಭದ್ರತೆ ಒದಗಿಸುವ ಆಹಾರ ಇಲಾಖೆಯ ಜವಾಬ್ದಾರಿಯನ್ನೂ ನೀಡಿದ್ದಾರೆ. ಕಳೆದ ನಾಲ್ಕೈದು ವರ್ಷದಿಂದ ದೇಶದ ನಾಗರಿಕರಿಗೆ ಉಚಿತ ಆಹಾರ ನೀಡುವ ಮೂಲಕ ಆಹಾರ ಭದ್ರತೆ ಒದಗಿಸಿದ್ದಾರೆ. ಇದು ಜಗತ್ತಿನ ಬಹುದೊಡ್ಡ ಆಹಾರ ಭದ್ರತೆ ಎಂದು ತಿಳಿಸಿದರು. ಇದರ ಜೊತೆಗೆ ಗ್ರಾಹಕರ ಹಿತರಕ್ಷಣೆಯಂತಹ ಪ್ರಮುಖ ಜವಾಬ್ದಾರಿ ನೀಡಿದ್ದಾರೆ. ಕ್ಷೇತ್ರದ ಜನತೆ, ರಾಜ್ಯದ ಜನತೆ ಹಾಗೂ ಪ್ರಧಾನಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಎಲ್ ನಿನೋ ಚಂಡಮಾರುತದ ಪರಿಣಾಮವಾಗಿ ಜಗತ್ತಿನಲ್ಲಿಯೇ ಬಹುದೊಡ್ಡ ಬರಗಾಲ, ಕೆಲವು ಕಡೆಗೆ ಅತಿವೃಷ್ಠಿ ಉಂಟಾಗಿದೆ. ಇದರಿಂದಾಗಿ ಜಗತ್ತಿನಲ್ಲಿ ಆಹಾರದ ಕೊರತೆ ಉಂಟಾಗಿದೆ. ಆದರೆ ನಮ್ಮ ದೇಶದಲ್ಲಿ ಇದರ ಪರಿಣಾಮ ಕಡಿಮೆ. ಈ ಹಿಂದೆ ಕೊರೊನಾ, ಯುದ್ದಗಳು, ಸದ್ಯ ಎಲ್ ನಿನೋ ಪರಿಣಾಮವಾಗಿ ಜಗತ್ತಿನಲ್ಲಿ ಸಂಕಷ್ಟ ಎದುರಾಗಿದೆ. ಇದೆಲ್ಲದರ ಸಂಪೂರ್ಣ ಅಧ್ಯಯನ ಮಾಡಿ ಅಕ್ಕಿ ವಿತರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಹುಬ್ಬಳ್ಳಿಯನ್ನು ಸೋಲಾರ ಸಿಟಿ ಮಾಡುವ ಬಗ್ಗೆ ಯುಪಿಎ ಕಾಲದಲ್ಲಿ ಪ್ರಸ್ತಾವನೆ ಬಂದಿತ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮತ್ತೆ ಉಳಿದ ಯೋಜನೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಬೀದರನಲ್ಲಿ ಈಗಾಗಲೇ ಸೋಲಾರ ಪಾರ್ಕ್ ನಡೆಯುತ್ತಿದೆ. ಸೋಲಾರ ಎನರ್ಜಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. 2014ರಲ್ಲಿ ಕೇವಲ 74 ಗಿಗಾವ್ಯಾಟ್ ಇತ್ತು. ಇವತ್ತು 293 ಗಿಗಾವ್ಯಾಟ್ ಉತ್ಪಾದನೆ ಆಗತ್ತಾ ಇದೆ. ಕೇಂದ್ರ ಸರ್ಕಾರ ಇದಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ರಿಯಾಯಿತಿ ನೀಡುತ್ತಿದೆ. ಉಪಕರಣಗಳ ತಯಾರಿ ಸೇರಿ ಬೇರೆ ಬೇರೆ ಕಾರ್ಯಕ್ಕೆ ರಿಯಾಯಿತಿ ನೀಡುತ್ತಿದೆ. ಈ ಎಲ್ಲ ಯೋಜನೆಗಳನ್ನು ಕರ್ನಾಟಕಕ್ಕೆ ಆದ್ಯತೆ ಮೇರೆಗೆ ತರಲು ಪ್ರಯತ್ನಿಸುವೆ. ರಾಜ್ಯದ ಸಚಿವರು ಕೂಡಾ ನಮ್ಮನ್ನು ಸಂಪರ್ಕಿಸಿದ್ದು ನಾವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತೆವೆ ಎಂದರು. ಖಾತೆ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿ, ಸಣ್ಣ ಖಾತೆ, ದೊಡ್ಡ ಖಾತೆ ಎಂಬುದು ಇಲ್ಲ. ಈ ಖಾತೆಯೂ ಮಹತ್ವದ್ದು ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಸಚಿವರಿಗೆ ಅದ್ಧೂರಿ ಸ್ವಾಗತ: ನರೇಂದ್ರ ಮೋದಿ 3.0 ಸರ್ಕಾರದ ಸಂಪುಟದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಹಾಗೂ ನವೀಕೃತ ಇಂಧನ ಖಾತೆಯ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಪ್ರಹ್ಲಾದ್ ಜೋಶಿ ಅವರಿಗೆ ಬಿಜೆಪಿ ಕಾರ್ಯಕರ್ತರು ಹೂಗುಚ್ಚ ನೀಡಿ ಅದ್ದೂರಿ ಸ್ವಾಗತಿಸಿದರು. ಈ ವೇಳೆ ಜಾಂಜ್ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ಕಾರ್ಯಕರ್ತರು, ಅಭಿಮಾನಿಗಳು ವಿಮಾನ ನಿಲ್ದಾಣದ ಆವರಣದಿಂದ ಬೈಕ್ ರ್‍ಯಾಲಿ ಮಾಡಿದರು. ಸಚಿವರಿಗೆ ಮಹೇಶ ಟೆಂಗಿನಕಾಯಿ, ಅಮೃತ ದೇಸಾಯಿ, ಎಮ್.ಆರ್.ಪಾಟೀಲ್, ಪ್ರದೀಪ್ ಶೆಟ್ಟರ್ ಸಾಥ್ ಕೊಟ್ಟರು.
ಇದನ್ನೂ ಓದಿ: ಪೋಕ್ಸೋ ಕೇಸ್: ಬಿ.ಎಸ್.ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್ ನಿರ್ದೇಶನ - Yadiyurappa POCSO Case