ಬೆಂಗಳೂರು: ಮಹಾಮಾರಿ ಕೊರೊನಾ ಬಿಕ್ಕಟ್ಟಿನ ವೇಳೆ ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್ಗಳನ್ನು ನಿಯಮಬಾಹಿರವಾಗಿ ಖರೀದಿಸಿ ಸರ್ಕಾರ ಬೊಕ್ಕಸಕ್ಕೆ ಸುಮಾರು 167 ಕೋಟಿ ರೂ. ನಷ್ಟ ಮಾಡಿದ ಆರೋಪ ಸಂಬಂಧ ಖಾಸಗಿ ಕಂಪನಿಗಳ ಮಾಲೀಕರು ಹಾಗೂ ವೈದ್ಯಕೀಯ ಇಲಾಖೆಯ ಅಧಿಕಾರಿಗಳ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕ ಪತ್ರಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ಎಂಬವರು ನೀಡಿದ ದೂರು ಆಧರಿಸಿ ವೈದ್ಯ ಡಾ.ಗಿರೀಶ್, ಇಲಾಖೆಯ ಅಧಿಕಾರಿಗಳಾದ ಜೆ.ಪಿ.ರಘು ಮುನಿರಾಜು, ಲಾಜ್ ಎಕ್ಸ್ಪರ್ಟ್ ಹಾಗೂ ಪ್ರೊಡೆಂಟ್ ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವ್ಯವಹಾರದಲ್ಲಿ ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಪ್ರಬಲವಾಗಿದ್ದು, ಎಫ್ಐಆರ್ನಲ್ಲಿ ಅವರ ಹೆಸರು ಉಲ್ಲೇಖಿಸದೇ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೋವಿಡ್-19 ಹರಡಿದ್ದ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಸಾಂಕ್ರಾಮಿಕ ರೋಗ ನಿವಾರಣೆಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಎನ್ 95 ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರ ಸಾಮಗ್ರಿಗಳನ್ನು ಸಂಗ್ರಹಿಸಿರುವ ಸನ್ನಿವೇಶವನ್ನು ದುಬರ್ಳಕೆ ಮಾಡಿಕೊಂಡು ಕಾನೂನಿನ ಎಲ್ಲಾ ಪ್ರಕ್ರಿಯೆ ಗಾಳಿಗೆ ತೂರಿ 167 ಕೋಟಿ ರೂಪಾಯಿ ನಷ್ಟ ಉಂಟು ಮಾಡಿರುವ ಆರೋಪವಿದೆ.
2020ರ ಆಗಸ್ಟ್ 18ರಂದು ಸರ್ಕಾರ ವತಿಯಿಂದ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ 2.59 ಲಕ್ಷ ಎನ್ 95 ಮಾಸ್ಕ್ ಹಾಗೂ 2.59 ಪಿಪಿಇ ಕಿಟ್ ಖರೀದಿಸಲು ಅನುಮತಿ ಪಡೆದುಕೊಳ್ಳಲಾಗಿತ್ತು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ರಾಜ್ಯದ 17 ಸರ್ಕಾರಿ ಕಾಲೇಜು ಹಾಗೂ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಳಸಲು ಅನುಮೋದನೆ ನೀಡಲಾಗಿತ್ತು.
ಅನುಮೋದನೆ ಪಡೆಯುವಾಗ ಕೆಟಿಪಿಪಿ ಕಾನೂನಿನ ಕಾಯ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಬೇಕು. 41.35 ಕೋಟಿ ರೂ.ಗಿಂತ ಮೌಲ್ಯದ ಹೆಚ್ಚು ಸಾಮಗ್ರಿ ಖರೀದಿಸಕೂಡದು ಎಂದು ಷರತ್ತು ವಿಧಿಸಲಾಗಿತ್ತು. ಇದರ ನಂತರ ವೈದ್ಯಕೀಯ ಶಿಕ್ಷಣ ಇಲಾಖೆಯು ಟೆಂಡರ್ ಕರೆದಿದ್ದು, ಲಾಜ್ ಕೋರ್ಟ್ಸ್ ಸಂಸ್ಥೆಯು ಒಂದು ಪಿಪಿಇ ಕಿಟ್ ಸರಬರಾಜು ಮಾಡುವುದಾಗಿ ಬಿಡ್ ಪಡೆದುಕೊಂಡಿತ್ತು. ನಿಗದಿತ ಸಂಖ್ಯೆಯ ಪಿಪಿಇ ಕಿಟ್ಗಳನ್ನು 15 ದಿನಗಳೊಳಗೆ ಸರಬರಾಜು ಮಾಡಲು ಆದೇಶಿಸಿದ್ದರೂ ಪಿಇಇ ಕಿಟ್ ಗಳನ್ನು 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಲ್ಲಿ ನಮೂದಿಸಿಲ್ಲ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಸೋಡಿಯಂ ಬಳಸಿ ಸ್ಫೋಟ ಪ್ರಕರಣ: ಡ್ರೋನ್ ಪ್ರತಾಪ್ ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು
ಮುಂಬೈ ಮೂಲದ ಪೂಡೆಂಟ್ ಮ್ಯಾನೇಜೆಂಟ್ ಸಲೂಷನ್ಸ್ ಟೆಂಡರ್ನಲ್ಲಿ ಭಾಗವಹಿಸದೇ ಕಾನೂನುಬಾಹಿರವಾಗಿ ಬಿಡ್ ಪಡೆದು ಕೋಟ್ಯಂತರ ರೂ. ಅಕ್ರಮದಲ್ಲಿ ಭಾಗಿಯಾಗಿದೆ. ಮೇಲಿನ ಡಿಎಂಇ ಅಂದಿನ ನಿರ್ದೇಶಕರ ಡಾ.ಪಿ.ಜಿ.ಗಿರೀಶ್, ಜಂಟಿ ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆಯ ರಘು ಜಿ.ಪಿ. ಮತ್ತು ಆರೋಗ್ಯ ಸಲಕರಣಾಧಿಕಾರಿ ಮುನಿರಾಜು ಮತ್ತು ದೊಡ್ಡ ಮಟ್ಟದಲ್ಲಿ ಹಿಂದಿನ ಸರ್ಕಾರ ರಾಜಕೀಯ ಪ್ರತಿನಿಧಿಗಳು ಅಧಿಕಾರಿಗಳು ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ, ತುರ್ತು ಪರಿಸ್ಥಿತಿಯ ಲಾಭ ಪಡೆದು ಕೋವಿಡ್-19 ಸಂದರ್ಭದಲ್ಲಿ ಸರ್ಕಾರಕ್ಕೆ ಆಂದಾಜು ಒಟ್ಟು 167 ಕೋಟಿ ರೂ.ಗಳ ಆರ್ಥಿಕ ನಷ್ಟವಾಗಿದೆ ಎಂದು ಎಫ್ಐಆರ್ನಲ್ಲಿ ವಿಷ್ಣುಪ್ರಸಾದ್ ವಿವರಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ರಾಜಕೀಯ ಪ್ರತಿನಿಧಿಗಳಿಗೂ ವಿಚಾರಣೆ ನಡೆಯುವುದು ನಿಶ್ವಿತವಾಗಿದ್ದು, ಸಮಗ್ರ ವಿಚಾರಣೆಗೆ ಸಿಐಡಿ ಅಥವಾ ಪ್ರತ್ಯೇಕ ಎಸ್ಐಟಿ ರಚಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಪತ್ನಿಗೆ ಸಮನ್ಸ್ ಜಾರಿ