ನವದೆಹಲಿ/ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಎರಡನೇ ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದು ಅಧಿಕಾರ ವಹಿಸಿಕೊಂಡರು. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಹಾಗೂ ನವೀಕೃತ ಇಂಧನ ಖಾತೆಗಳ ಹೊಣೆ ಹೊತ್ತಿರುವ ಜೋಶಿ, ಆಯಾ ಖಾತೆಗಳ ಹಿಂದಿನ ಸಚಿವರುಗಳಿಂದ ಅಧಿಕಾರ ಸ್ವೀಕರಿಸಿದರು.
2047ರ ವೇಳೆಗೆ ಭಾರತ ಇಂಧನ ಸ್ವಾವಲಂಬನೆ ಸಾಧಿಸುವುದು ನಮ್ಮ ಸಂಕಲ್ಪ. ಹೊಸ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ದೇಶವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ದೃಷ್ಟಿಯೊಂದಿಗೆ ಹೊಸ ಹೊಸ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುಂದುವರಿಯುತ್ತೇವೆ ಎಂದು ಜೋಶಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಜನರಿಗೆ ಆಹಾರ ಭದ್ರತೆ ಖಾತರಿಪಡಿಸಲು ಬದ್ಧರಾಗಿದ್ದೇವೆ. ದೇಶದಲ್ಲಿ ನೈಸರ್ಗಿಕ ಕೃಷಿ ಬಲಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕಚೇರಿಯಲ್ಲಿ ಪೂಜೆ, ಕುಟುಂಬಸ್ಥರು ಭಾಗಿ: ಇದಕ್ಕೂ ಮುನ್ನ ತಮ್ಮ ಕಚೇರಿಯಲ್ಲಿ ಲಕ್ಷ್ಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪತ್ನಿ ಜ್ಯೋತಿ ಜೋಶಿ, ಮಕ್ಕಳು ಹಾಗು ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.
ಉನ್ನತಾಧಿಕಾರಿಗಳ ಸಭೆ: ನೂತನ ಖಾತೆಗಳ ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಪ್ರಹ್ಲಾದ್ ಜೋಶಿ ಆಯಾ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಔಪಚಾರಿಕ ಸಭೆ ನಡೆಸಿದರು.
ಇದನ್ನೂ ಓದಿ: ಮೋದಿ 3.0 ಕ್ಯಾಬಿನೆಟ್: ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕರ್ನಾಟಕದ ನಾಯಕರು - PM MODI CABINET