ಧಾರವಾಡ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಹೆಚ್ಚು ಡಿಸಿಎಂಗಳನ್ನು ಸೃಷ್ಟಿ ಮಾಡಬೇಕು ಎಂದು ಸಿಎಂ ತಮ್ಮ ಅನುಯಾಯಿಗಳಿಂದ ಒತ್ತಾಯ ಮಾಡಿಸಿದರೆ, ಇತ್ತ ಸಿಎಂ ಅವರನ್ನೇ ಬದಲಿ ಮಾಡಬೇಕು ಬಳಿಕ ಹೆಚ್ಚುವರಿ ಡಿಸಿಎಂರನ್ನು ಮಾಡಿಕೊಳ್ಳಬಹುದು ಎಂಬ ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರ ದಿಕ್ಕು ತಪ್ಪಿದಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಚು ಡಿಸಿಎಂ ಸೃಷ್ಟಿ ಮಾಡಬೇಕು ಎಂದು ಸಿಎಂ ತಮ್ಮ ಬಾಲಂಗೋಚಿಗಳಿಂದ ಹೇಳಿಸ್ತಾ ಇದ್ದಾರೆ. ಇತ್ತ ಸಿಎಂ ಅನ್ನೇ ಬದಲಾವಣೆ ಮಾಡಬೇಕು ಅಂತಾ ತಮ್ಮ ಹಿಂಬಾಲಕರಿಂದ ಡಿಸಿಎಂ ಹೇಳಿಸುತ್ತಿದ್ದಾರೆ. ರಾಜ್ಯ ಸರ್ಕಾರ ದಿಕ್ಕು-ದಾರಿ ತಪ್ಪಿದೆ. ದಾರಿ ತಪ್ಪಿದ ಮಗನಂತೆ ಕಾಂಗ್ರೆಸ್ ಸರ್ಕಾರ ಆಗಿದೆ ಎಂದು ವ್ಯಂಗ್ಯವಾಡಿದರು. ಒಬ್ಬರಿಗೊಬ್ಬರು ತಮ್ಮ ಹಿಂಬಾಲಕರಿಂದ ತಮ್ಮದೇ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ಕೊಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಹೈಕಮಾಂಡ್ ಕ್ರಮ ತೆಗೆದುಕೊಳ್ಳಲಿ ಅಂತಾ ಹೇಳ್ತಾರೆ. ಏನೇ ಹೇಳಿದರೂ ಕ್ರಮ ಆಗುತ್ತಿಲ್ಲ ಇಷ್ಟು ದಯನೀಯ ಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಹೀಗಾಗಿದೆ. ಗ್ಯಾರಂಟಿ ಕೊಟ್ಟರೂ ಲೋಕಸಭೆಯಲ್ಲಿ ಬಹುಪಾಲು ಸೀಟುಗಳು ಬಿಜೆಪಿ ಪರವಾಗಿತ್ತು. ಕಾಂಗ್ರೆಸ್ ಬಗ್ಗೆ ಜನ ಬೇಸತ್ತಿದ್ದಾರೆ. ಇದರ ಎಲ್ಲ ಪರಿಣಾಮ ರಾಜ್ಯದ ಆಡಳಿತ ಮೇಲೆ ಆಗಿದೆ. ರಾಜ್ಯದ ಆಡಳಿತ ನಿಷ್ಕ್ರಿಯಯಗೊಳ್ಳುತ್ತಿದೆ. ಅಧಿಕಾರಿಗಳಿಗೆ ಸರಿಯಾದ ನಿರ್ದೇಶನ ಕೊಡಲು ವಿಫಲ ಆಗಿದ್ದಾರೆ. ಆಂತರಿಕ ಸಮಸ್ಯೆ ಬಗೆಹರಿಸಿಕೊಂಡು ಜನರ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಆದರೆ ಬೆಲೆ ಏರಿಕೆ ಮಾಡಿ ಜನರಿಂದ ಹಣ ಪಡೆದು ಜನರಿಗೆ ಕೊಡುತ್ತಿದ್ದಾರೆ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಸಿದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಒಬ್ಬ ವಿಫಲ ಮುಖ್ಯಮಂತ್ರಿ ಎಂದು ಜೋಶಿ ಹರಿಹಾಯ್ದರು.
ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಬೀಳಿಸುತ್ತೇವೆಂದು ಬಿಜೆಪಿಗರ ಹೇಳಿಕೆ ವಿಚಾರಕ್ಕೆ ಮಾತನಾಡಿ, ಇದರ ಬಗ್ಗೆ ಹೇಳಿದ್ದಕ್ಕೆ ನಾನೂ ಮೊದಲು ಪತ್ರಿಕ್ರಿಯೆ ನೀಡಿರಲಿಲ್ಲ, ಈಗಲೂ ಪ್ರತಿಕ್ರಿಯಿಸಲಾರೆ. ಐದು ವರ್ಷ ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಜನತೆಯ ಆದೇಶ ಐದು ವರ್ಷ ಇದೆ. ಐದು ವರ್ಷ ಚೆನ್ನಾಗಿ ಆಡಳಿತ ನಡೆಸಿ ಅಂತಾನೇ ನಾವು ಹೇಳೋದು. ಅವರ ಆಂತರಿಕ ಕಾರಣದಿಂದ ಸರ್ಕಾರ ಬಿದ್ದರೆ ನಾವು ಜವಾಬ್ದಾರರಲ್ಲ, ಆಮೇಲೆ ಅದಕ್ಕೆ ಅಪರೇಷನ್ ಕಮಲ ಅಂತಾ ಅವರೇ ಹೇಳ್ತಾರೆ. ಆದರೆ ಆ ವಿಚಾರ ನಮ್ಮ ತಲೆಯಲ್ಲಿಲ್ಲ ಎಂದರು.
ಇದನ್ನೂ ಓದಿ: 'ವಾರ್ನಿಂಗ್ ನಾನ್ ಕೇಳ್ತಿನೇನ್ರೀ': ಡಿಕೆಶಿ ಎಚ್ಚರಿಕೆಗೆ ಕೆ.ಎನ್. ರಾಜಣ್ಣ ಡೋಂಟ್ಕೇರ್! - K N RAJANNA ON DCM WARNING