ಹುಬ್ಬಳ್ಳಿ: ಗಣೇಶ ಪೆಂಡಾಲ್ಗಳಲ್ಲಿ ಪ್ರಸಾದ ಸಿದ್ಧಪಡಿಸಲು ಆಹಾರ ಸುರಕ್ಷತಾ ಇಲಾಖೆ ಪರವಾನಿಗೆ ಪಡೆಯಬೇಕು ಎಂದಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಿನ್ನೆ ಮಾತನಾಡಿದ ಅವರು, ರಾಜ್ಯ ಆಹಾರ ಇಲಾಖೆ ಹುಚ್ಚರ ರೀತಿಯಲ್ಲಿ ಇಂಥ ಆದೇಶ ಹೊರಡಿಸಿದೆ ಅಷ್ಟೇ. ಎಂಪ್ಯಾನಲ್ ಆದವರಿಂದಲೇ ಪ್ರಸಾದ ತಯಾರಿಸಬೇಕು ಎಂದಿರುವ ರಾಜ್ಯ ಸರ್ಕಾರದ ಈ ಸೂಚನೆ ಸರಿಯಲ್ಲ. ಗಣೇಶ ಹಬ್ಬದ ವೇಳೆ ದೇಶಾದ್ಯಂತ, ರಾಜ್ಯಾದ್ಯಂತ ಬಹಳ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆಹಾರ ಸುರಕ್ಷತಾ ಕ್ರಮ ಕೈಗೊಳ್ಳುವುದು ಸರಿ. ಆದರೆ, ಹೀಗೆ ಹುಚ್ಚರ ರೀತಿ ಅಲ್ಲ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ಹಿಂದೂ ಹಬ್ಬಕ್ಕೆ ತೊಂದರೆ ಕೊಡಲೆಂದೇ ಈ ಕ್ರಮ: ರಾಜ್ಯದಲ್ಲಿ ಹಿಂದೂ ಹಬ್ಬಕ್ಕೆ ತೊಂದರೆ ಕೊಡಲೆಂದೇ ರಾಜ್ಯ ಸರ್ಕಾರದಿಂದ ಇಂಥ ಆದೇಶ ಹೊರ ಬಿದ್ದಿದೆ. ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘಟಕರು ಇದಕ್ಕೆ ಕಿವಿಗೊಡಬೇಕಿಲ್ಲ. ಎಲ್ಲಾದರೂ ದುರುದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸುವಂತ ಪ್ರಕರಣ ನಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಿ. ಆದರೆ ಸರ್ಕಾರವೇ ಹೀಗೆ ದುರುದ್ದೇಶ ಇಟ್ಟುಕೊಂಡು ಆದೇಶ ಹೊರಡಿಸಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಹಬ್ಬದಲ್ಲಷ್ಟೇ ಆಹಾರ ಸುರಕ್ಷೆ ನೆನಪಾಗುತ್ತೆದೆಯೇ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೂಗಳ ಹಬ್ಬ ಬಂದಾಗ ಮಾತ್ರ ಆಹಾರ ಸುರಕ್ಷತಾ ನಿಯಮ ಇರೋದು ನೆನಪಾಗುತ್ತದೆಯೇ? ಎಂದ ಸಚಿವ ಜೋಶಿ ಇಫ್ತಿಯಾರ್ ಕೂಟ ಇದ್ದಾಗ ಇಂಥ ಆದೇಶ ಹೊರಡಿಸಿ ನೋಡೋಣ ಎಂದು ಸವಾಲು ಹಾಕಿದರು.
ಸ್ವಚ್ಛತೆ, ಶುಚಿತ್ವ ಕಾಪಾಡಿಕೊಳ್ಳಿ: ಗಣೇಶ ಪೆಂಡಾಲ್ಗಳಲ್ಲಿ ಪ್ರಸಾದ ತಯಾರಿಕೆ ವೇಳೆ ಸ್ವಚ್ಛತೆ, ಶುಚಿತ್ವ ಕಾಪಾಡಿಕೊಳ್ಳಬೇಕು. ಅಗತ್ಯ ಬಿದ್ದರೆ ರಾಜ್ಯ ಸರ್ಕಾರದ ಈ ಆದೇಶ ಧಿಕ್ಕರಿಸಿ ಎಂದು ಕರೆ ಕೊಟ್ಟರು.
ಇದನ್ನೂ ಓದಿ: ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ವೈಭವದ ಗಣೇಶೋತ್ಸವ; 36 ವಿಧದ ಹಣ್ಣು - ಹೂವುಗಳಿಂದ ಅಲಂಕಾರ - Sathyaganapati Temple